ಜೂನ್ 07 – ನನ್ನ ಧ್ಯಾನ!
“ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ! ದಿನವೆಲ್ಲಾ ಅದೇ ನನ್ನ ಧ್ಯಾನ.” (ಕೀರ್ತ 119:97)
ಇಸ್ರಾಯೇಲ್‌ದೇಶವನ್ನು ಒಬ್ಬ ಮಹಾರಾಜನಾಗಿ ಆಳಿದ ದಾವೀದ ಅರಸನಿಗೆ ಸಾವಿರಾರು ಜವಾಬ್ದಾರಿಗಳು ಇದ್ದಿರಬಹುದು. ಎಣಿಕೆಯಿಲ್ಲದ ಸಮಸ್ಯೆಗಳು ಅವನನ್ನು ಕಾಡಿರಬಹುದು. ವೈರಿಗಳು ಮತ್ತು ವಿರೋಧಗಳು ಅವನನ್ನು ನಿರಂತರವಾಗಿ ಹೆದರಿಸಿರಬಹುದು. ಆದರೂ, ಇವೆಲ್ಲವುಗಳ ಮಧ್ಯದಲ್ಲಿ ಅವನು ಸಂತೋಷದಿಂದ, “ದಿನವೆಲ್ಲಾ ಅದೇ ನನ್ನ ಧ್ಯಾನ,” ಎಂದು ಘೋಷಿಸಿದನು.
ದೈವಭಕ್ತನಾದ ಟಿಂಡೇಲ್ ತನ್ನ ಅನುಭವದ ಬಗ್ಗೆ ಬರೆಯುವಾಗ ಹೀಗೆ ಹೇಳಿದ್ದಾನೆ: “ನಮ್ಮ ಮನೆಗಳಲ್ಲಿ, ಕಿಟಿಕಿಯ ಪರದೆಗಳನ್ನು ಎಳೆದಾಗ, ನಮ್ಮ ಪೋಷಕರು ಕಣ್ಣೀರಿನಿಂದ ಬೈಬಲ್ ಓದುತ್ತಿದ್ದರು. ಕಣ್ಣೀರು ಅಕ್ಷರಗಳನ್ನು ಮಸುಕುಗೊಳಿಸಿದಾಗಲೂ, ಅದು ಆತ್ಮದ ದೃಷ್ಟಿಗೆ ಜೀವವನ್ನು ನೀಡುತ್ತಿತ್ತು. ವ್ಯಾಪಾರವು ವಿಫಲವಾದಾಗ, ಕೆಲಸವು ಕುಸಿದಾಗ, ಮತ್ತು ಕತ್ತಲು ಹಾಗೂ ನಿರಾಶೆ ನಮ್ಮನ್ನು ಆವರಿಸಿದಾಗ, ನಮ್ಮ ಪೋಷಕರ ಏಕೈಕ ಭರವಸೆಯು ಸತ್ಯವೇದವಾಗಿತ್ತು.
ಅದೇ ಸಮಯದಲ್ಲಿ, ಆನಂದ, ಸಂತೋಷ ಮತ್ತು ಸಮೃದ್ಧಿಯ ದಿನಗಳಲ್ಲಿಯೂ ಅವರಿಗೆ ಮಾರ್ಗದರ್ಶನ ನೀಡಿದ್ದು ಇದೇ ಸತ್ಯವೇದವು ಆಗಿದೆ. ಅದು ನಮಗೆ ಯಾವಾಗಲೂ ಚನ್ನಾಗಿ ನೀರು ಉಣಿಸಿದ ತೋಟದಂತೆ ಇತ್ತು.”
ದಾವೀದನು, “ಕರ್ತನ ಧರ್ಮಶಾಸ್ತ್ರವು ದಿನವೆಲ್ಲಾ ನನ್ನ ಧ್ಯಾನ,” ಎಂದು ಹೇಳುತ್ತಾನೆ. ಆದರೆ ನಾವು ದೇವರ ವಾಕ್ಯವನ್ನು ಹೇಗೆ ಧ್ಯಾನಿಸಬೇಕು?
ಸುಗಂಧ ಭರಿತ ಹೂವುಗಳಿಂದ ತುಂಬಿದ ಒಂದು ಸುಂದರವಾದ ತೋಟವಿತ್ತು. ಮೊದಲು, ಒಬ್ಬ ಸ್ತ್ರೀ ಬಂದಳು. ಆಕೆಯು ಒಂದು ಸುಂದರವಾದ ಹೂವನ್ನು ನೋಡಿ, ಅದನ್ನು ಕಿತ್ತು, ವಾಸನೆ ನೋಡಿ ತನ್ನ ಮುಡಿಗೆ ಮುಡಿದುಕೊಂಡಳು. ಕೆಲವೇ ನಿಮಿಷಗಳಲ್ಲಿ ಅದು ಬಾಡಿ ಒಣಗಿಹೋಯಿತು.
ನಂತರ ಒಂದು ಚಿಟ್ಟೆ ಬಂದಿತು. ಅದು ಪ್ರತಿಯೊಂದು ಹೂವಿನ ಮೇಲೆ ಒಂದು ಕ್ಷಣ ಕುಳಿತು ತಕ್ಷಣ ಹಾರಿಹೋಯಿತು.
ಅದಾದ ನಂತರ, ಒಂದು ಜೇನುನೊಣವು ಹಾರಿಬಂತು. ಅದು ಒಂದು ಹೂವಿನ ಮೇಲೆ ಕುಳಿತು, ಅದರ ಆಳಕ್ಕೆ ಹೋಗಿ, ಜೇನನ್ನು ಹೀರಿ, ತನ್ನ ಕಾಲುಗಳ ಮೇಲೆ ರಸವನ್ನು ಸಂಗ್ರಹಿಸಿ, ಅದನ್ನು ತನ್ನೊಳಗೆ ಹೊತ್ತು ತನ್ನ ಜೇನುಗೂಡಿಗೆ ಮರಳಿತು.
ಸತ್ಯವೇದ ಓದುವ ವಿಷಯದಲ್ಲಿ, ನಾವು ಆ ಜೇನುನೊಣದಂತಿದ್ದೇವಾ?
ಕೆಲವರು ಬೇಗನೆ ಓದಿ ಮುಂದೆ ಹೋಗುತ್ತಾರೆ. ಇನ್ನು ಕೆಲವರು ತಮ್ಮ ಅಗತ್ಯಕ್ಕೆ ತಕ್ಕದಾದ ಒಂದೇ ಒಂದು ವಾಗ್ದಾನವನ್ನು ಮಾತ್ರ ಹಿಡಿದುಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ದೇವರ ವಾಕ್ಯದ ಬಳಿ ಅತ್ಯಂತ ಆಸಕ್ತಿಯಿಂದ ಕುಳಿತು, ಜೇನಿಗಿಂತಲೂ ಜೇನುಗೂಡಿನ ಹನಿಗಿಂತಲೂ ಮಧುರವಾದ ಆ ಮಾತುಗಳನ್ನು ಆಸ್ವಾದಿಸಿ, ನಂತರ ಇತರರ ಆಶೀರ್ವಾದಕ್ಕಾಗಿ ಅವುಗಳನ್ನು ಹಂಚಿಕೊಳ್ಳುತ್ತಾರೆ.
ದಾವೀದನು ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಹೇಳುತ್ತಾನೆ: “ಯಾವನು ದುಷ್ಟರ ಆಲೋಚನೆಯಂತೆ ನಡೆಯದೇ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೇ ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದ ಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿವನೋ ಅವನು ಎಷ್ಟೋ ಧನ್ಯರು.” (ಕೀರ್ತ 1:2,3)
ಪ್ರಿಯ ದೇವ ಜನರೇ, ಪರಿಶುದ್ಧ ಗ್ರಂಥವನ್ನು ಆಸಕ್ತಿಯಿಂದ ಓದಿರಿ! ಸತ್ಯವೇದವನ್ನು ಕರ್ತನು ನಿಮಗಾಗಿ ವೈಯಕ್ತಿಕವಾಗಿ ಬರೆದ ಅತ್ಯಂತ ಅಮೂಲ್ಯವಾದ ಪತ್ರವೆಂದು ಪರಿಗಣಿಸಿ, ಅದನ್ನು ನಿಮ್ಮ ಪೂರ್ಣಹೃದಯದಿಂದ ಸ್ವೀಕರಿಸಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಅವು ಬಂಗಾರಕ್ಕಿಂತಲೂ ಅಪರಂಜಿಗಿಂತಲೂ ಅಪೇಕ್ಷಿಸತಕ್ಕವುಗಳಾಗಿವೆ; ಅವು ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ.” (ಕೀರ್ತ 19:10)