Appam, Appam - Kannada

ಜುಲೈ 13 – ನನ್ನ ಮಗನೇ, ಧೈರ್ಯವಾಗಿರು!

“ಮಗನೇ, ಧೈರ್ಯವಾಗಿರು; ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ.” (ಮತ್ತಾ 9:2)

ಲೋಕವು ನಮ್ಮನ್ನು ನಿರುತ್ಸಾಹಗೊಳಿಸಲು ಮತ್ತು ದಣಿಸಲು ಹಲವು ಮಾರ್ಗಗಳನ್ನು ಹುಡುಕುತ್ತದೆ. ಸೈತಾನನು ದುಃಖ, ನಿರಾಶೆ ಮತ್ತು ಹತಾಶೆಯನ್ನು ತರುತ್ತಾನೆ. ಜನರು ಆಡುವ ಕಠಿಣ ಮಾತುಗಳು ಹೃದಯವನ್ನು ಗಾಯಗೊಳಿಸಿ, ನಮ್ಮನ್ನು ಭಾರದಿಂದ ಕುಗ್ಗಿಸಬಹುದು. ಆದರೆ ನಮ್ಮ ಪ್ರೀತಿಯ ಕರ್ತನು ಯಾವಾಗಲೂ ತನ್ನ ಮಕ್ಕಳನ್ನು ಆದರಿಸುವ, ಬಲಪಡಿಸುವ ಮತ್ತು ಪುನರುಜ್ಜೀವನಗೊಳಿಸುವಾತನಾಗಿದ್ದಾನೆ.

ಯೇಸು ಸ್ವಾಮಿ ಪಾರ್ಶ್ವವಾಯು ರೋಗಿಗೆ ಹೇಳಿದ ಮಾತನ್ನು ಒಂದು ಕ್ಷಣ ಯೋಚಿಸಿರಿ: “ಮಗನೇ, ಧೈರ್ಯವಾಗಿರು; ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ.”

ಆ ಪಾರ್ಶ್ವವಾಯು ರೋಗಿಯನ್ನು ಕ್ರಿಸ್ತನ ಮುಂದೆ ಇಳಿಸಿದಾಗ, ಅವನ ಸುತ್ತಲಿದ್ದವರು, “ಇವನು ತನ್ನ ಪೂರ್ವಜರ ಪಾಪಗಳ ನಿಮಿತ್ತ ಅನುಭವಿಸುತ್ತಿದ್ದಾನೆ; ಇವನು ಅದರ ಪರಿಣಾಮವನ್ನು ಅನುಭವಿಸಲಿ,” ಎಂದು ಯೋಚಿಸಿರಬಹುದು. ಆದರೆ ಆ ಮನುಷ್ಯನು ತನ್ನ ಸ್ಥಿತಿಯಿಂದ ಸಂಪೂರ್ಣವಾಗಿ ದಣಿದು ಹೋಗಿದ್ದನು.

ಅವನು ಪ್ರತಿಯೊಂದಕ್ಕೂ ಇತರರ ಮೇಲೆ ಆಧಾರಪಟ್ಟಿದ್ದನು. ಅವನ ಈ ಅಶಕ್ತತೆಯು ಅವನಿಗೆ ಮಾತ್ರವಲ್ಲದೆ ಅವನನ್ನು ನೋಡಿಕೊಳ್ಳುವವರಿಗೂ ಒಂದು ಭಾರವಾಗಿತ್ತು. ಆದರೂ ಕರ್ತನು ಅವನನ್ನು ಕರುಣೆಯಿಂದ ನೋಡಿ, ಮೊದಲಿಗೆ ಅವನನ್ನು “ಮಗನೇ” ಎಂದು ಕರೆದನು.

ಅದು ಎಂತಹ ಮೃದುವಾದ ಮತ್ತು ಆಶ್ವಾಸನೆಯ ಮಾತು! ಕರ್ತನು ಬಹುಶಃ ಹೀಗೆ ಹೇಳುತ್ತಿರುವಂತೆ ಇತ್ತು: “ನೀನು ನನ್ನ ಮಗು. ನಾನು ನಿನ್ನನ್ನು ನನ್ನ ಸ್ವರೂಪದಲ್ಲಿಯೂ ಹೋಲಿಕೆಯಲ್ಲಿಯೂ ಸೃಷ್ಟಿಸಿದ್ದೇನೆ. ನೀನು ನನಗೆ ಸೇರಿದವನು.” ಆ ಮಾತುಗಳು ಕಷ್ಟದಲ್ಲಿದ್ದ ಆ ಮನುಷ್ಯನನ್ನು ಎಷ್ಟು ದೊಡ್ಡದಾಗಿ ಬಲಪಡಿಸಿರಬೇಕು!

ದೇವರ ಮಕ್ಕಳೇ, ಬಹುಶಃ ನೀವು ಕೂಡ ಇಂದು ನಿರುತ್ಸಾಹಗೊಂಡಿರಬಹುದು. ನಿಮ್ಮ ಹೃದಯವು ದಣಿದಿರಬಹುದು ಮತ್ತು ನಿಮ್ಮ ಆತ್ಮವು ಕುಗ್ಗಿರಬಹುದು. ಆದರೂ ಕರ್ತನು ನಿಮ್ಮನ್ನು ಪ್ರೀತಿಯಿಂದ “ನನ್ನ ಮಗನೇ” ಅಥವಾ “ನನ್ನ ಮಗಳೇ” ಎಂದು ಕರೆಯುತ್ತಾನೆ. ಒಂದು ಕ್ಷಣ ನಿಂತು ಆ ದೈವೀಕ ವಾಣಿಯನ್ನು ಆಲಿಸಿರಿ. ನಿಮ್ಮ ಪರಲೋಕದ ತಂದೆಯ ಪ್ರೀತಿಯ ಕರೆಯನ್ನು ನಿಮ್ಮ ಕಿವಿಗಳು ಕೇಳಲಿ.

ಎರಡನೆಯದಾಗಿ, ಯೇಸು, “ಧೈರ್ಯವಾಗಿರು” ಎಂದು ಹೇಳಿದನು. ನೀವು ಧೈರ್ಯ ತಂದುಕೊಂಡಾಗ, ದೈವೀಕ ಬಲವು ನಿಮ್ಮೊಳಗೆ ಬರಲು ಪ್ರಾರಂಭಿಸುತ್ತದೆ. ನೀವು ಕರ್ತನಲ್ಲಿ ಧೈರ್ಯಗೊಳ್ಳುವಾಗ, ಪರಲೋಕದ ಶಕ್ತಿಯು ನಿಮ್ಮ ಹೃದಯವನ್ನು ತುಂಬುತ್ತದೆ. ಧೈರ್ಯವು ಸಾಮಾನ್ಯ ವಿಶ್ವಾಸಿಗಳನ್ನು ನಂಬಿಕೆಯ ವೀರರನ್ನಾಗಿ ಪರಿವರ್ತಿಸುತ್ತದೆ.

ಮೂರನೆಯದಾಗಿ, ಯೇಸು, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಘೋಷಿಸಿದನು. ಆ ಮನುಷ್ಯನ ಕಷ್ಟದ ಹಿಂದಿರುವ ಆಳವಾದ ಕಾರಣವನ್ನು ಕರ್ತನು ಅರ್ಥಮಾಡಿಕೊಂಡಿದ್ದರು. ಕೇವಲ ಹೊರಗಿನ ಸ್ಥಿತಿಯನ್ನು ಸರಿಪಡಿಸುವ ಬದಲು, ಆತನು ಅದರ ಮೂಲ ಕಾರಣವನ್ನು ಪರಿಹರಿಸಲು ಆರಿಸಿಕೊಂಡರು. ಪಾಪದ ಹೊರೆಯನ್ನು ತೆಗೆದುಹಾಕುವ ಮೂಲಕ, ಆತನು ಸಂಪೂರ್ಣ ಮತ್ತು ಶಾಶ್ವತವಾದ ಸ್ವಸ್ಥತೆಯನ್ನು ತರುತ್ತಿದ್ದರು.

ಕರ್ತನು ಅವನಿಗೆ ಕೇವಲ ತಾತ್ಕಾಲಿಕ ಉಪಶಮನವನ್ನು ನೀಡಿ ಕಳುಹಿಸಲು ಬಯಸಲಿಲ್ಲ. ಅವನ ಬಂಧನದ ಮೂಲವನ್ನೇ ಬುಡಸಮೇತ ಕಿತ್ತೊಗೆಯಲು ಆತನು ನಿರ್ಧರಿಸಿದನು. ಇದರ ಪರಿಣಾಮವಾಗಿ, ಆ ಮನುಷ್ಯನು ಎರಡು ಅದ್ಭುತಗಳನ್ನು ಹೊಂದಿಕೊಂಡನು: ಅವನ ದೇಹಕ್ಕೆ ಶಾರೀರಿಕ ಗುಣ ಹಾಗೂ ಅವನ ಆತ್ಮಕ್ಕೆ ಆತ್ಮಿಕ ಗುಣವಾಯಿತು.

ಅವನ ದೇಹವನ್ನು ಕಾಡುತ್ತಿದ್ದ ಪಾರ್ಶ್ವವಾಯುವು ನೀಗಿತು ಮತ್ತು ಅವನ ಆತ್ಮವನ್ನು ಭಾರಮಾಡಿದ್ದ ಪಾಪದ ಕಾಯಿಲೆಯೂ ದೂರವಾಯಿತು. ಹಲ್ಲೇಲೂಯಾ!

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:

“ಆದರೆ ಪಾಪಗಳನ್ನು ಕ್ಷಮಿಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು” ಎಂದು ಹೇಳಿ ಪಾಶ್ವವಾಯು ರೋಗಿಯನ್ನು ನೋಡಿ – “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಅಂದನು.” (ಮತ್ತಾ 9:6–7)

Leave A Comment

Your Comment
All comments are held for moderation.