Appam, Appam - Kannada

ಜೂನ್ 21 – ಕಳಂಕರಹಿತರಾಗಿರಿ!

“ಆದಕಾರಣ ಪ್ರಿಯರೇ, ನೀವು ಇವುಗಳನ್ನು ಎದುರು ನೋಡುವವರಾಗಿರುವದರಿಂದ ಶಾಂತವಾಗಿದ್ದು ಆತನೆದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡಿರಿ.” (2 ಪೇತ್ರ 3:14).

ನಾವು ಜಗತ್ತಿನ ಅಂತ್ಯಕ್ಕೆ ಮತ್ತು ಕರ್ತನ ಬರೋಣಕ್ಕೆ ಹತ್ತಿರವಾಗುತ್ತಿದ್ದೇವೆ. ಆತನ ಬರೋಣವು ಸಮೀಪಿಸಿದೆ ಎಂದು ಕೇವಲ ತಿಳಿದುಕೊಂಡರೆ ಮಾತ್ರ ಸಾಲದು. ಅದಕ್ಕಾಗಿ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಪೇತ್ರನು ಈ ಬಗ್ಗೆ ನಮಗೆ ಕೆಲವು ಆಲೋಚನೆಗಳನ್ನು ನೀಡುತ್ತಾನೆ.

ಮೊದಲನೆಯದಾಗಿ, ನಾವು ಕಳಂಕವಿಲ್ಲದವರಾಗಿರಬೇಕು. ಲೋಕ, ಶರೀರಭಾವ ಮತ್ತು ಸೈತಾನನು ನಮ್ಮ ಆತ್ಮಿಕ ಜೀವನದಲ್ಲಿರುವ ರಕ್ಷಣೆಯ ವಸ್ತ್ರಕ್ಕೆ ನಿರಂತರವಾಗಿ ಕಲೆಹಾಕಲು ಪ್ರಯತ್ನಿಸುತ್ತಾರೆ. ಬಿಳಿ ವಸ್ತ್ರಗಳನ್ನು ಧರಿಸಿದ ಕ್ರಿಸ್ತನ ಮೊದಲಗಿತ್ತಿಯಾದ ನಾವು ಪರಿಶುದ್ಧತೆಯಲ್ಲಿ ಪ್ರಕಾಶಿಸಬೇಕಾದರೆ, ಲೋಕದಿಂದ ಅಪವಿತ್ರರಾಗದಂತೆ ನಮ್ಮನ್ನು ನಾವು ಕಾಯ್ದುಕೊಳ್ಳಬೇಕು. ಯೇಸುವಿನ ರಕ್ತದ ಮೂಲಕ ನಮ್ಮ ವಸ್ತ್ರಗಳನ್ನು ತೊಳೆದು ಶುದ್ಧೀಕರಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಆತ್ಮವನ್ನು ಕೆಡಿಸುವ ಸ್ನೇಹಸಂಬಂಧಗಳನ್ನು, ಪವಿತ್ರತೆಯನ್ನು ಮೈಲಿಗೆಯಾಗಿಸುವ ಸಂಭಾಷಣೆಗಳನ್ನು ಮತ್ತು ಮನಸ್ಸಾಕ್ಷಿಗೆ ತೊಂದರೆ ಕೊಡುವ ಕಾರ್ಯಗಳನ್ನು ನಾವು ತಪ್ಪಿಸಬೇಕು. ಬದಲಾಗಿ, ನಾವು ಪ್ರಾರ್ಥನೆ, ದೇವರ ವಾಕ್ಯ ಮತ್ತು ದೇವರ ಮಕ್ಕಳ ಅನ್ನೋನ್ಯತೆಯಲ್ಲಿ ಸ್ಥಿರವಾಗಿ ಮುಂದುವರಿಯಬೇಕು. ಲೋಕದ ಸ್ನೇಹಿತನಾಗಲು ಅಪೇಕ್ಷಿಸುವವನು ದೇವರಿಗೆ ಶತ್ರುವಾಗುತ್ತಾನೆ. ಅದಕ್ಕಾಗಿಯೇ ಅಪೊಸ್ತಲನಾದ ಯೋಹಾನನು, “ನನ್ನ ಚಿಕ್ಕ ಮಕ್ಕಳೇ, ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ” ಎಂದು ಹೇಳುತ್ತಾನೆ.

ಅಷ್ಟೇ ಅಲ್ಲದೆ, ನಾವು ನಿರ್ದೋಷಿಗಳಾಗಿಯೂ ಇರಬೇಕು. ದೋಷ ಅಥವಾ ತಪ್ಪು ಎಂದರೇನು? ದೇವರ ಗುಣಮಟ್ಟ ಮತ್ತು ನಿರೀಕ್ಷೆಗೆ ತಕ್ಕಂತೆ ಜೀವಿಸದೇ ಇರುವದೇ ದೋಷವಾಗಿದೆ. ದೇವರ ವಾಕ್ಯಕ್ಕೆ ವಿರೋಧವಾಗಿರುವ ಪ್ರತಿಯೊಂದು ವಿಷಯವೂ ತಪ್ಪಾಗಿದೆ. ಮಕ್ಕಳು ತಮ್ಮ ಪಾಠಗಳನ್ನು ತಪ್ಪಾಗಿ ಬರೆದಾಗ, ಅವರು ಅದೇ ತಪ್ಪನ್ನು ಮತ್ತೆ ಮಾಡದಂತೆ ನಾವು ಅವರನ್ನು ತಿದ್ದುತ್ತೇವೆ — ಕೆಲವೊಮ್ಮೆ ಬೆತ್ತದಿಂದಲೂ ಶಿಕ್ಷಿಸುತ್ತೇವೆ.

ಅದೇ ರೀತಿ, ಕರ್ತನು ನಮ್ಮಲ್ಲಿ ದೋಷವನ್ನು ಕಂಡಾಗ, ಆತನು ಶಿಕ್ಷೆಯನ್ನು ಅನುಮತಿಸುತ್ತಾನೆ. ಸತ್ಯವೇದವು ಹೇಳುತ್ತದೆ: “ ಕರ್ತನು ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ; ತಾನು ಸೇರಿಸಿಕೊಳ್ಳುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾನೆ…. ನೀವು ಶಿಕ್ಷಿತರಾಗುವದಕ್ಕಾಗಿಯೇ ನಿಮಗೆ ಶಿಕೆಯಾಗುತ್ತದೆಂದು ತಿಳಿದು ಅದನ್ನು ಸಹಿಸಿಕೊಳ್ಳಿರಿ; ದೇವರು ನಿಮ್ಮನ್ನು ಮಕ್ಕಳೆಂದು ನಡೆಸುತ್ತಾನೆ. ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿ? ?” (ಇಬ್ರಿ 12:6,7).

ಮೂರನೆಯದಾಗಿ, ನಾವು ಆತನ ಸನ್ನಿಧಿಯಲ್ಲಿ ಸಮಾಧಾನವುಳ್ಳವರಾಗಿ ಕಾಣಿಸಿಕೊಳ್ಳಬೇಕು ಎಂದು ಅಪೊಸ್ತಲನಾದ ಪೇತ್ರನು ಹೇಳುತ್ತಾನೆ. ನಾವು ರಕ್ಷಣೆ ಹೊಂದಿದಾಗ, ದೇವರ ಸಮಾಧಾನವನ್ನು ಹೊಂದಿಕೊಳ್ಳುತ್ತೇವೆ (ರೋಮ 5:1). ಆದರೆ ನಾವು ಅಲ್ಲಿಯೇ ನಿಲ್ಲಬಾರದು. ನಮ್ಮ ಜೀವನದಲ್ಲಿ ಎಂತಹದೇ ಬಿರುಗಾಳಿಗಳು ಎದ್ದರೂ, ಗಾಳಿಯು ಎಷ್ಟೇ ಬಲವಾಗಿ ಬೀಸಿದರೂ ಅಥವಾ ಸಮುದ್ರವು ಎಷ್ಟೇ ಅಲ್ಲೋಲಕಲ್ಲೋಲವಾದರೂ, ನಾವು ಸಂಪೂರ್ಣವಾಗಿ ಕರ್ತನಲ್ಲಿ ಭರವಸೆಯಿಟ್ಟು, ನಾವು ಹೊಂದಿಕೊಂಡ ಸಮಾಧಾನವನ್ನು ಕಾಯ್ದುಕೊಳ್ಳಬೇಕು.

ಪ್ರೀತಿಯ ದೇವರ ಮಕ್ಕಳೇ, ದೇವರ ವಾಕ್ಯವು ಹೇಳುವಂತೆ, ನಾವು ಕಳಂಕವಿಲ್ಲದವರಾಗಿಯೂ, ನಿರ್ದೋಷಿಗಳಾಗಿಯೂ ಮತ್ತು ಸಮಾಧಾನವುಳ್ಳವರಾಗಿಯೂ ಕಾಣಿಸಿಕೊಳ್ಳೋಣ!

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಪ್ರಿಯರಾದ ಮಕ್ಕಳೇ, ಆತನು ಪ್ರತ್ಯಕ್ಷನಾಗುವಾಗ ನಾವು ಆತನ ಆಗಮನದಲ್ಲಿ ಆತನ ಮುಂದೆ ನಿಲ್ಲಲು ನಾಚಿಕೆಪಡದೆ ಧೈರ್ಯದಿಂದಿರುವಂತೆ ಆತನಲ್ಲಿ ನೆಲೆಗೊಂಡಿರೋಣ.” (1 ಯೋಹಾ 2:28).

Leave A Comment

Your Comment
All comments are held for moderation.