Appam, Appam - Kannada

ಮೇ 24 – ದೇವರು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡುವರು!

“ಅರಸೇ, ನಾವು ಸೇವಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಆವಿಗೆಯೊಳಗಿಂದ, ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು.” (ದಾನಿ 3:17)

ಕರ್ತನು ನಮ್ಮನ್ನು ಮುನ್ನಡೆಸುವುದು ಮಾತ್ರವಲ್ಲ—ಅವರು ನಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿಯೂ ಮಾಡುತ್ತಾರೆ. ಮೇಲಿನ ವಚನವು ಶದ್ರಕ್, ಮೇಷಕ್ ಮತ್ತು ಅಬೇದ್ನೆಗೋ ಅವರು ಕೇವಲ ನಂಬಿಕೆಯಿಂದ ಹೇಳಿದ ಮಾತಲ್ಲ, ಬದಲಿಗೆ ಅದು ಸಾಬೀತಾದ ಸಾಕ್ಷಿಯಾಗಿದೆ. ಒಂದು ಕಡೆ ದೇವರು ಅವರನ್ನು ಅರಸನ ಕೋಪದಿಂದ ತಪ್ಪಿಸಿದರು; ಇನ್ನೊಂದು ಕಡೆ ಉರಿಯುತ್ತಿರುವ ಕೆಂಡದ ಆವಿಗೆಯಿಂದ ಅವರನ್ನು ರಕ್ಷಿಸಿದರು.

ಇಂದು, ನೀವು ಯಾವುದರಿಂದ ಬಿಡುಗಡೆ ಹೊಂದಬೇಕಾಗಿದೆ? ನೀವು ಕರಗಿಸಲಾಗದ ಸಾಲದ ಹೊರೆ, ಅವಮಾನ ಮತ್ತು ನಿಂದನೆ, ಕಾಯಿಲೆ, ಜನರ ಪೀಡನೆ ಅಥವಾ ತಲೆಮಾರುಗಳ ಶಾಪಗಳ ಬಂಧನದಲ್ಲಿದ್ದೀರಾ? ಅದು ಯಾವುದೇ ಇರಲಿ, ಕರ್ತನು ನಿಮ್ಮನ್ನು ಬಿಡಿಸಲು ಶಕ್ತನಾಗಿದ್ದಾನೆ. ಅವರು ನಿಮ್ಮನ್ನು ರಕ್ಷಿಸಿ ಸ್ವತಂತ್ರರನ್ನಾಗಿ ಮಾಡುವರು!

“ಆದುದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿಯೂ ನಿಮಗೆ ಬಿಡುಗಡೆಯಾಗುವದು.” (ಯೋಹಾ 8:36). “ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು, ” (ಯೋಹಾ 8:32). “ಆ ಕರ್ತನ ಆತ್ಮನು ಯಾರಲ್ಲಿ ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು.” (2 ಕೊರಿಂಥ 3:17)

ನಿಮಗೆ ಕೊರತೆ ಮತ್ತು ಬಡತನದಿಂದ ಬಿಡುಗಡೆ ಬೇಕೇ? ನಂಬಿಕೆಯಿಂದ ಹೀಗೆ ಹೇಳಿರಿ: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಾಗಿದೆಯಲ್ಲಾ; ಆತನು ಐಶ್ಚರ್ಯವಂತನಾಗಿದ್ದು ತಾನು ಬಡತನದಲ್ಲಿ ಸೇರುವದರಿಂದ ನೀವು ಐಶ್ಚರ್ಯವಂತರಾಗಬೇಕೆಂದು ನಿಮಗೋಸ್ಕರ ಬಡವನಾದನು.” (2 ಕೊರಿಂಥ 8:9)

ನಿಮಗೆ ಕಾಯಿಲೆಯಿಂದ ಗುಣಮುಖವಾಗಬೇಕೇ? ಈ ವಾಗ್ದಾನಗಳನ್ನು ನಂಬಿ ಪ್ರಕಟಿಸಿರಿ: “ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು.” (ಮತ್ತಾಯ 8:17). “ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು.” (ಯೆಶಾ 53:5). “ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು.” (1 ಪೇತ್ರ 2:24)

ನೀವು ಶಾಪಗಳಿಂದ ಬಿಡುಗಡೆಯನ್ನು ಬಯಸುತ್ತೀರಾ? ಈ ಸತ್ಯಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ: ದೇವರು ಶಾಪಗಳನ್ನು ಆಶೀರ್ವಾದಗಳಾಗಿ ಮಾರ್ಪಡಿಸುತ್ತಾರೆ (ಧರ್ಮೋ 23:5). ಕ್ರಿಸ್ತನು ಧರ್ಮಶಾಸ್ತ್ರದ ಶಾಪದಿಂದ ನಮ್ಮನ್ನು ಬಿಡಿಸಿದನು (ಗಲಾತ್ಯ 3:13). ಇನ್ನು ಮುಂದೆ ಯಾವ ಶಾಪವೂ ಇರುವುದಿಲ್ಲ (ಪ್ರಕ 22:3).

ನಿಮಗೆ ಪಾಪದ ಅಭ್ಯಾಸಗಳಿಂದ ಬಿಡುಗಡೆ ಬೇಕೇ? ಶಿಲುಬೆಯ ಕಡೆಗೆ ದೃಷ್ಟಿಸಿ ನೋಡಿರಿ. “ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೆ ದೇಹದಲ್ಲಿ ಹೊತ್ತುಕೊಂಡನು…” (1 ಪೇತ್ರ 2:24)

ಪಶ್ಚಾತ್ತಾಪದ ಹೃದಯದಿಂದ ಆತನ ಬಳಿಗೆ ಬನ್ನಿರಿ: “ಕರ್ತನೇ, ನನ್ನ ಪಾಪಗಳನ್ನು ಕ್ಷಮಿಸು. ನನಗೆ ಕ್ಷಮಾಪಣೆಯ ಭರವಸೆಯನ್ನು ಮತ್ತು ರಕ್ಷಣೆಯ ಆನಂದವನ್ನು ದಯಪಾಲಿಸು.” ಎಂದು ಪ್ರಾರ್ಥಿಸಿರಿ, ಆಗ ಅವರು ಖಂಡಿತವಾಗಿಯೂ ನಿಮ್ಮನ್ನು ಪ್ರತಿಯೊಂದು ಬಂಧನದಿಂದ ಬಿಡಿಸುವರು.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:

“ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.” (1 ಯೋಹಾ 1:9)

Leave A Comment

Your Comment
All comments are held for moderation.