Appam, Appam - Kannada

ನವೆಂಬರ್ 01 – ಕರ್ತನ ವಾಕ್ಯಗಳು!

“ಮನುಷ್ಯನು ಆಹಾರದಿಂದ ಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವರು.” ಧರ್ಮೋ ೮:೩

ನಾವು ಹೊಸದಾಗಿ ರಕ್ಷಿಸಲ್ಪಟ್ಟ ಕ್ರೈಸ್ತರಾಗಿರಲಿ ಅಥವಾ ವರ್ಷಗಳ ಅನುಭವವಿರುವ ಪರಿಪಕ್ವತೆಯುಳ್ಳ ವಿಶ್ವಾಸಿಗಳಾಗಿರಲಿ, ಕರ್ತನ ಬಾಯಿಂದ ಹೊರಡುವ ವಾಕ್ಯಗಳನ್ನು ಕೇಳುವುದು ಮತ್ತು ಅವುಗಳ ಪ್ರಕಾರ ನಡೆಯುವುದು ಅತ್ಯಗತ್ಯ. ಆಗ ಮಾತ್ರ ನಾವು ದೇವರ ಚಿತ್ತದ ಅನುಸಾರ ಜೀವಿಸಲು ಸಾಧ್ಯ, ಮತ್ತು ನಮ್ಮ ಜೀವನವು ಫಲದಾಯಕವೂ ಸಮೃದ್ಧವೂ ಆಗಿರುತ್ತದೆ.

ಬಹಳಷ್ಟು ಜನರು ದೇವರ ಧ್ವನಿಯನ್ನು ಜಾಗರೂಕತೆಯಿಂದ ಕೇಳದೆ ಇರುವ ಕಾರಣದಿಂದ ಆತನ ಚಿತ್ತವನ್ನು ಪೂರೈಸಲು ವಿಫಲರಾಗುತ್ತಾರೆ. ದೇವರು ತಮ್ಮ ಜೀವನಕ್ಕಾಗಿ ಇಟ್ಟಿರುವ ಅದ್ಭುತ ಯೋಜನೆಗಳ ಬಗ್ಗೆ ಅರಿಯದೆ, ತಮ್ಮ ಮನಸ್ಸು ಮತ್ತು ಶರೀರವು ಬಯಸುವುದನ್ನೇ ಮಾಡುತ್ತಾರೆ. ಆದರೆ ಕರ್ತನ ಮಾರ್ಗಗಳು ಮನುಷ್ಯನ ಮಾರ್ಗಗಳಿಗಿಂತ ಎಷ್ಟೋ ಶ್ರೇಷ್ಠವಾಗಿವೆ.

ನೀವು ಕರ್ತನ ಮಾರ್ಗದಲ್ಲಿ ನಡೆಯುತ್ತಿದ್ದೀರಾ? ಆತನ ಧ್ವನಿಯನ್ನು ಕೇಳುತ್ತೀರಾ? ಆಸಕ್ತಿಯಿಂದ ಪ್ರಾರ್ಥಿಸಿದ ನಂತರ, ಕರ್ತನಿಗೆ ನಿಮ್ಮೊಂದಿಗೆ ಮಾತನಾಡಲು ಅವಕಾಶ ನೀಡುತ್ತೀರಾ? ನಿಮ್ಮ ಜೀವನದಲ್ಲಿ ಆತನ ಪರಿಪೂರ್ಣ ಚಿತ್ತವನ್ನು ಪೂರೈಸುತ್ತಿದ್ದೀರಾ? ಈ ಪ್ರಶ್ನೆಗಳ ಕುರಿತು ಯೋಚಿಸಲು ಒಂದು ಕ್ಷಣ ಸಮಯ ತೆಗೆದುಕೊಳ್ಳಿ.

ಬಹಳಷ್ಟು ಜನರಿಗೆ ಪ್ರಾರ್ಥನೆಯು ಏಕಮುಖ ಸಂಚಾರದಂತಾಗಿದೆ. ಕರ್ತನು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆ ಎಂಬುದು ನಿಜವೇ, ಆದರೆ ಆತನು ನಮ್ಮೊಂದಿಗೆ ಸಂಭಾಷಣೆ ನಡೆಸಲು ಮತ್ತು ತನ್ನ ಮಾರ್ಗಗಳನ್ನು ನಮಗೆ ಕಲ್ಪಿಸಲು ಇನ್ನೂ ಹೆಚ್ಚಾಗಿ ಬಯಸುತ್ತಾನೆ. ಆತನು, “ನಾನು ನಿನಗೆ ಉಪದೇಶಿಸಿ ನೀನು ಹೋಗಬೇಕಾದ ಮಾರ್ಗವನ್ನು ತೋರಿಸುವೆನು” ಎಂದು ವಾಗ್ದಾನ ಮಾಡಿದ್ದಾನೆ (ಕೀರ್ತನೆ 32:8).

ಕರ್ತನು ನಮಗೆ ಅನೇಕ ರಹಸ್ಯಗಳನ್ನು ಪ್ರಕಟಿಸಲು ಮತ್ತು ನಮ್ಮ ಜೀವನಕ್ಕಾಗಿ ತನ್ನ ಅದ್ಭುತ ಯೋಜನೆಗಳನ್ನು ವಿವರಿಸಲು ಬಯಸಿದ್ದರೂ, ನಾವು ಬಹಳಷ್ಟು ಬಾರಿ ಆತನಿಗೆ ಸಮಯ ನೀಡಲು ಅಥವಾ ಆತನು ಹೇಳುವುದನ್ನು ಕೇಳಲು ವಿಫಲರಾಗುತ್ತೇವೆ.

ನೀವು ಪಡೆದುಕೊಂಡಿರುವ ಅಭಿಷೇಕದಲ್ಲಿ ಪ್ರಕಾಶಮಾನವಾಗಿ ಜೀವಿಸಿರಿ, ಮತ್ತು ಪವಿತ್ರಾತ್ಮನೊಂದಿಗೆ ಆಳವಾದ ಹಾಗೂ ನಿಕಟವಾದ ಸಂಬಂಧವನ್ನು ಬೆಳೆಸಿಕೊಳ್ಳಿರಿ. ಆತನ ಸಣ್ಣ ಹಾಗೂ ಸೂಕ್ಷ್ಮ ಧ್ವನಿಯನ್ನು ಕೇಳಲು ಹಂಬಲ ಮತ್ತು ದಾಹವನ್ನು ಬೆಳೆಸಿಕೊಳ್ಳಿರಿ. ಆತ್ಮನಿಂದ ನಿರಂತರವಾಗಿ ನಡೆಸಲ್ಪಡುವ ಆಶೀರ್ವದದ ಅನುಭವವನ್ನ ಹೊಂದಿಕೊಳ್ಳಿರಿ.

ಸೇವಕರು ತಮ್ಮ ಯಜಮಾನನ ಸೂಚನೆಗಳಿಗಾಗಿ ಕಾಯಬೇಕು. ಮಕ್ಕಳು ತಮ್ಮ ತಂದೆಯ ಆಲೋಚನೆಯನ್ನು ಕೇಳಬೇಕು. ಸ್ನೇಹಿತರು ಪರಸ್ಪರ ಸಲಹೆಗಳನ್ನು ಸ್ವೀಕರಿಸಬೇಕು. ಮದುಮಗಳು ತನ್ನ ಮದುಮಗನ ಧ್ವನಿಗಾಗಿ ಕಾತುರದಿಂದ ಕಾಯುತ್ತಾಳೆ. ಕರ್ತನು ನಿಮ್ಮ ಯಜಮಾನನು, ನಿಮ್ಮ ಪ್ರೀತಿಯ ತಂದೆ, ನಿಮ್ಮ ಅತ್ಯಂತ ಪ್ರಿಯ ಸ್ನೇಹಿತನು ಮತ್ತು ನಿಮ್ಮ ಆತ್ಮದ ಪ್ರೇಮಿಯಾಗಿದ್ದಾನೆ. ಜೇನಿಗಿಂತಲೂ ಸಿಹಿಯಾದ ಆತನ ವಾಕ್ಯಗಳನ್ನು ನೀವು ಕೇಳಬಾರದೇ?

ಪ್ರಿಯ ದೇವರ ಮಕ್ಕಳೇ, ನೀವು ಆತನ ವಾಕ್ಯಗಳನ್ನು ಸ್ವೀಕರಿಸಿದಾಗ, ಆತನ ಬಾಯಿಂದ ಹೊರಡುವ ಪ್ರತಿಯೊಂದು ವಾಕ್ಯದಿಂದ ಜೀವಿಸುವಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ ಕೇಳುತ್ತವೆ” (ಯೋಹಾ 10:27).

Leave A Comment

Your Comment
All comments are held for moderation.