Appam, Appam - Kannada

ಜೂನ್ 30 – ನಿಮ್ಮನ್ನು ತಗ್ಗಿಸಿಕೊಳ್ಳಿರಿ!

” ಆತನು ಬಾದೆಯನ್ನು ಅನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.” (೧ ಪೇತ್ರ ೨:೨೩).

ಒಬ್ಬ ವೃದ್ಧ ಮಹಿಳೆಯು ಸಭೆಯಲ್ಲಿ ಯಾವಾಗಲೂ, “ಕರ್ತನೇ, ನಾನು ಕೇವಲ ಒಂದು ಹುಳು ಮತ್ತು ಕೀಟವಾಗಿದ್ದೇನೆ. ಕರ್ತನೇ, ನಾನು ಧೂಳು—ಅಶುದ್ಧವಾದ ಧೂಳು” ಎಂದು ಪ್ರಾರ್ಥಿಸುತ್ತಿದ್ದರು. ಒಬ್ಬ ಯುವಕನು ಅವರನ್ನು ಹಾಸ್ಯ ಮಾಡುತ್ತಾ, “ಅಜ್ಜಿ, ನೀವು ನಿಜವಾಗಿಯೂ ಹುಳುವಾ? ಪ್ರತಿ ವಾರವೂ ಇದೇ ಪ್ರಾರ್ಥನೆಯೇ? ಇದು ನಿಜವಾದ ಪ್ರಾರ್ಥನೆಯೋ ಅಥವಾ ಕೇವಲ ಬಾಯಿ ಮಾತೋ?” ಎಂದು ಕೇಳಿದನು.

ಆ ವೃದ್ಧ ಮಹಿಳೆಗೆ ತಕ್ಷಣವೇ ಭಾರಿ ಕೋಪ ಬಂದಿತು. “ನನ್ನನ್ನು ಅಜ್ಜಿ ಎನ್ನುತ್ತೀಯಾ? ನನಗೆ ಅಷ್ಟೊಂದು ವಯಸ್ಸಾಗಿದೆಯೇ? ನನ್ನನ್ನು ಹಾಸ್ಯ ಮಾಡುತ್ತಿದ್ದೀಯಾ?” ಎಂದು ಕೋಪದಿಂದ ಕೂಗಾಡಿದರು. ಆ ಯುವಕನು ಅವರನ್ನು ಮತ್ತಷ್ಟು ಚುಡಾಯಿಸುತ್ತಾ, “ಅಜ್ಜಿ, ನೀವು ಹುಳು ಅಥವಾ ಕೀಟವಲ್ಲ—ನೀವು ಹಾವು, ಬುಸುಗುಟ್ಟುವ ಹಾವು!” ಎಂದನು. ಸುತ್ತಲಿದ್ದವರೆಲ್ಲರೂ ನಕ್ಕರು.

ಹುಳು ಮತ್ತು ಹಾವು ಎರಡೂ ನೆಲದ ಮೇಲೆಯೇ ಬದುಕಿದರೂ, ಅವುಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ಹುಳು ಎಂದಿಗೂ ಬುಸುಗುಟ್ಟುವುದಿಲ್ಲ. ಆದರೆ ಹಾವು ಬುಸುಗುಟ್ಟುವಾಗ, ಅದು ಭಯಾನಕ ಶಬ್ದವನ್ನು ಉಂಟುಮಾಡಿ ಇತರರನ್ನು ಹೆದರಿಸುತ್ತದೆ. ಆದರೆ ಹುಳುವು ವಿನಮ್ರತೆಯಿಂದ ಮತ್ತು ಸೌಮ್ಯತೆಯಿಂದ ಶಾಂತವಾಗಿ ಸಾಗುತ್ತದೆ. ಯಾರಾದರೂ ಅದರ ಮೇಲೆ ಕಾಲಿಟ್ಟರೂ ಅದು ಶಬ್ದ ಮಾಡುವುದಿಲ್ಲ. ಅದನ್ನು ನಜ್ಜುಗುಜ್ಜು ಮಾಡಿದರೂ ಅದು ತನ್ನ ಬಾಯನ್ನು ತೆರೆಯುವುದಿಲ್ಲ. ಅದಕ್ಕೆ ಕೋಪ, ಉದ್ವೇಗ ಅಥವಾ ದ್ವೇಷ ತೀರಿಸಿಕೊಳ್ಳುವ ಹಂಬಲ ಇರುವುದಿಲ್ಲ.

ನಮ್ಮ ಪರಿಪೂರ್ಣ ಮಾದರಿಯಾದ ಕ್ರಿಸ್ತನನ್ನು ನೋಡಿ. ಶಿಲುಬೆಯ ಬಳಿ ಆತನು ಎಷ್ಟು ಶಾಂತನಾಗಿದ್ದನು! ಸತ್ಯವೇದವು ಹೇಳುತ್ತದೆ: “ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ.” (ಯೆಶಾಯ 53:7).

ಇತರರು ನಿಮ್ಮನ್ನು ಕೆರಳಿಸುವಾಗ ಅಥವಾ ನಿಮಗೆ ಕೋಪ ಬರಿಸುವಾಗ, ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನೆನಪಿಸಿಕೊಳ್ಳಿರಿ. ಜನರು ಆತನನ್ನು ಶಿಲುಬೆಗೆ ಹಾಕಿ ಮೊಳೆಗಳು ಜಡಿಯುತ್ತಿದ್ದಾಗಲೂ, ಆತನು ಯಾವುದೇ ಕಠಿಣ ಅಥವಾ ಕೋಪದ ಮಾತುಗಳನ್ನು ಆಡಲಿಲ್ಲ. ಬದಲಾಗಿ, “ತಂದೆಯೇ, ಇವರನ್ನು ಕ್ಷಮಿಸು” ಎಂದು ಪ್ರಾರ್ಥಿಸಿದನು.

ಶಿಲುಬೆಯ ಮೇಲಿನ ತನ್ನ ಕಠಿಣ ಶ್ರಮೆಗಳ ಸಮಯದಲ್ಲಿಯೂ ಆತನು ಮೌನವಾಗಿಯೇ ಇದ್ದನು. ತನಗೆ ನ್ಯಾಯ ಸಿಗದಿದ್ದಾಗಲೂ ಆತನು ತನ್ನ ಹಕ್ಕುಗಳಿಗಾಗಿ ವಾದಿಸಲಿಲ್ಲ.

ನಿಮ್ಮ ಕೋಪ ಮತ್ತು ಉದ್ವೇಗಗಳನ್ನು ಶಿಲುಬೆಗೆ ಜಡಿಯಿರಿ. ಅವು ನಿಮ್ಮೊಳಗೆ ಎದ್ದೇಳಲು ಬಿಡಬೇಡಿ. ಸತ್ಯವೇದ ಹೇಳುತ್ತದೆ: “ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ ಸಹಿತ ಶಿಲುಬೆಗೆ ಹಾಕಿದರು. ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ. ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೋಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.” (ಗಲಾತ್ಯ 5:24–26).

ಪ್ರೀತಿಯ ದೇವರ ಮಕ್ಕಳೇ, ಕೆಲವು ಸಮಯಗಳಲ್ಲಿ ಹಾವಿನ ಸ್ವಭಾವವು ನಿಮ್ಮೊಳಗೆ ತಲೆದೋರಲು ಪ್ರಯತ್ನಿಸಬಹುದು. ಹಾಗೆ ಸಂಭವಿಸಿದಾಗಲೆಲ್ಲಾ, ಕರ್ತನಾದ ಯೇಸುವನ್ನು ನೆನಪಿಸಿಕೊಂಡು ಒಂದು ಹುಳುವಿನಂತೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.” (ಫಿಲಿ 2:5).

Leave A Comment

Your Comment
All comments are held for moderation.