నవంబర్ 24 – ಮರಣದವರೆಗೆ ವಿಧೇಯರಾದವರು!
“ಹೀಗೆ ಆತನು ಆಕಾರದಲ್ಲಿ ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” ಫಿಲಿಪ್ಪಿ 2:8
ಪ್ರತಿದಿನ ಈ ಲೋಕದಲ್ಲಿ ಲಕ್ಷಾಂತರ ಜನರು ಸಾಯುತ್ತಾರೆ. ಅವರಲ್ಲಿ ಕೆಲವರ ಸಾವು ಯಾರಿಗೂ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಸಾವಿರಾರು ಅಪರಾಧಿಗಳನ್ನು ಶಿಲುಬೆಗೇರಿಸಲಾಯಿತು, ಆದರೂ ಯಾರೂ ಅವರ ಸಾವಿಗೆ ಹೆಚ್ಚಿನ ಗಮನ ಕೊಡಲಿಲ್ಲ. ಆದರೆ ಕಲ್ವಾರಿ ಶಿಲುಬೆಯ ಮೇಲೆ ಯೇಸುಕ್ರಿಸ್ತನು ಮರಣಹೊಂದಿದ್ದು ಅನನ್ಯವೂ, ಅತ್ಯಾವಶ್ಯಕವೂ, ಅಸಾಧಾರಣವೂ ಆಗಿತ್ತು.
ಯೇಸು ಅಷ್ಟು ಬೇಗ ಮರಣಹೊಂದಿದ್ದನ್ನು ಕಂಡು ಪಿಲಾತನಿಗೆ ಆಶ್ಚರ್ಯವಾಯಿತೆಂದು ಸತ್ಯವೇದವು ದಾಖಲಿಸುತ್ತದೆ. ಅವನು ನೂತನ ಶತಾಧಿಪತಿಯನ್ನು ಕರೆದು ಯೇಸು ಈಗಾಗಲೇ ಸತ್ತಿದ್ದಾನೆಯೇ ಎಂದು ವಿಚಾರಿಸಿದನು (ಮಾರ್ಕ 15:44).
ಕ್ರಿಸ್ತನ ಮರಣ, ಹೂಣಲ್ಪಡುವಿಕೆ ಮತ್ತು ಪುನರುತ್ಥಾನಗಳು ನಾವು ಯಾವಾಗಲೂ ನೆನಪಿನಲ್ಲಿಡಬೇಕಾದ ಘಟನೆಗಳಾಗಿವೆ. ನಾವು ರೊಟ್ಟಿಯನ್ನು ತಿಂದು ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಕರ್ತನ ಬರುವವರೆಗೂ ಆತನ ಮರಣವನ್ನು ಸಾರುತ್ತೇವೆ ಎಂದು ಅಪೊಸ್ತಲನಾದ ಪೌಲನು ಬರೆದನು (1 ಕೊರಿಂಥ 11:26). ಕರ್ತನಭೋಜನದ ಆರಾಧನೆಯು ಕ್ರಿಸ್ತನ ಮರಣವನ್ನು ಸ್ಮರಿಸಲು ಆಚರಿಸಲಾಗುವ ಆರಾಧನೆಯಾಗಿದೆ.
ಕೆಲವು ಸಭೆಗಳು ಇದನ್ನು ಕಮ್ಯೂನಿಯನ್ ಎಂತಲೂ, ಇನ್ನು ಕೆಲವು ಪವಿತ್ರ ಸಂಸ್ಕಾರ ಎಂತಲೂ ಕರೆಯುತ್ತವೆ. ನಾವು ಇದನ್ನು ಕರ್ತನ ಭೋಜನವೆಂದೂ ಕರೆಯುತ್ತೇವೆ (1 ಕೊರಿಂಥ 11:21). ಯೇಸು ತನ್ನ ಶಿಷ್ಯರೊಂದಿಗೆ ರಾತ್ರಿಯಲ್ಲಿ ಪಸ್ಕಹಬ್ಬವನ್ನು ಆಚರಿಸಿದ್ದರಿಂದ, ಇದು ಸಂಜೆಯಲ್ಲಿ ಆಚರಿಸಲ್ಪಡುವ ಭೋಜನವಾಯಿತು, ಅದಕ್ಕಾಗಿಯೇ ಕರ್ತನ ಭೋಜನ ಎಂಬ ಹೆಸರು ಬಂದಿತು.
ಗ್ರೀಕ್ ಭಾಷೆಯಲ್ಲಿ ಯೂಕರಿಸ್ಟ್ ಎಂದರೆ ಕೃತಜ್ಞತೆ ಅಥವಾ ಸ್ತೋತ್ರ ಅರ್ಪಿಸುವುದು ಎಂದರ್ಥ. ಆದಿಸಭೆಯಲ್ಲಿ, ಇದು ಒಂದು ಸಹವಾಸ ಭೋಜನವಾಗಿ ಆಚರಿಸಲ್ಪಟ್ಟಿತ್ತು. ಇವರು ಅಪೋಸ್ತಲರ ಬೋದನೆಯನ್ನು ಕೇಳುವದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿಯುವದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು (ಅಪೊ ಕೃತ್ಯ 2:42).
ರೋಮನ್ ಸೈನ್ಯಕ್ಕೆ ಸೇರುವ ಮುಂಚೆ, ಸೈನಿಕನು ಕಠಿಣವಾದ ಸೈನಿಕ ತರಬೇತಿಯನ್ನು ಪಡೆಯುತ್ತಿದ್ದನು. ಅವನು ಒಂದು ಪಾತ್ರೆಯಲ್ಲಿ ಕುರಿಮರಿಯ ರಕ್ತವನ್ನು ತೆಗೆದುಕೊಂಡು, ಅದರಲ್ಲಿ ತನ್ನ ಈಟಿಯನ್ನು ಅದ್ದಿ, ಒಂದು ಗಂಭೀರವಾದ ಸೈನಿಕ ಪ್ರಮಾಣವನ್ನು ಮಾಡುತ್ತಿದ್ದನು. ಅವನು, “ನನ್ನ ದೇಹದಲ್ಲಿ ಒಂದು ಹನಿ ರಕ್ತವಿರುವವರೆಗೂ, ರೋಮನ್ ಸಾಮ್ರಾಜ್ಯಕ್ಕಾಗಿ ನನ್ನ ಪ್ರಾಣವನ್ನೇ ನೀಡುವೆನು. ಯುದ್ಧದಲ್ಲಿ ನಾನು ಎಂದಿಗೂ ಹಿಂದೆ ಸರಿಯುವುದಿಲ್ಲ, ಆದರೆ ಮುನ್ನಡೆದು, ಶತ್ರುಗಳನ್ನು ಜಯಿಸಿ, ವಿಜಯವನ್ನು ಗಳಿಸುವೆನು” ಎಂದು ಸಾರುತ್ತಿದ್ದನು.
ಅಲ್ಲಿರುವವರು ತಕ್ಷಣವೇ ಅವನನ್ನು ಅಭಿನಂದಿಸುತ್ತಾ, “ನೀನು ನಿಮ್ಮ ದೇಶದ ಪ್ರಮುಖ ಸೈನಿಕನಾಗುವೆ” ಎಂದು ಹೇಳುತ್ತಿದ್ದರು. ಈ ಗಂಭೀರವಾದ ಸೈನಿಕ ಪ್ರಮಾಣವನ್ನು ಲ್ಯಾಟಿನ್ ಭಾಷೆಯಲ್ಲಿ ‘ಸಾಕ್ರಮೆಂಟಮ್’ ಎಂದು ಕರೆಯಲಾಗುತ್ತಿತ್ತು.
ಪ್ರೀತಿಯ ದೇವರ ಮಕ್ಕಳೇ, ಕ್ರಿಸ್ತನ ಮರಣದ ಜ್ಞಾಪಕಾರ್ಥವಾಗಿ ನಾವು ಕರ್ತನ ಭೋಜನದ ಆರಾಧನೆಯಲ್ಲಿ ಭಾಗವಹಿಸುವಾಗ, ನಾವೂ ಸಹ ಒಂದು ದೃಢವಾದ ನಿರ್ಧಾರವನ್ನು ಮಾಡಬೇಕು: “ನನ್ನಲ್ಲಿ ಒಂದು ಹನಿ ರಕ್ತವಿರುವವರೆಗೂ ನಾನು ಲೋಕದ ವಿರುದ್ಧವಾಗಿಯೂ, ಶರೀರದ ವಿರುದ್ಧವಾಗಿಯೂ, ಸೈತಾನನ ವಿರುದ್ಧವಾಗಿಯೂ ಹೋರಾಡುವೆನು. ನನ್ನ ಜೀವನದಲ್ಲಿ ಪಾಪಕ್ಕೆ ಅವಕಾಶ ನೀಡುವುದಿಲ್ಲ. ಕ್ರಿಸ್ತನು ಚೆಲ್ಲಿದ ರಕ್ತಕ್ಕೂ ಮತ್ತು ನನಗಾಗಿ ಆತನು ಮಾಡಿದ ಯಜ್ಞಕ್ಕೂ ತಕ್ಕದಾದ ಜೀವನವನ್ನು ನಾನು ನಡೆಸುವೆನು.”
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ಮೇಲೆ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡಗಳಿಂದ ನಿಮಗೆ ಗುಣವಾಯಿತು” (1 ಪೇತ್ರ 2:24).