ನವೆಂಬರ್ 14 – ದೇವರು ಆಲಿಸುವನು!
“ಯಾವನು ಭಕ್ತನಾಗಿದ್ದು ಆತನ ಚಿತ್ತದಂತೆ ನಡೆಯುತ್ತಾನೋ ಅವನ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು.” ಯೋಹಾ 9:31
ಅನೇಕರು, “ಕರ್ತನು ನನ್ನೊಂದಿಗೆ ಮಾತನಾಡುವುದಿಲ್ಲ. ಆತನು ನನ್ನೊಂದಿಗೆ ಮಾತನಾಡಲು ನಾನು ಏನು ಮಾಡಬೇಕು?” ಎಂದು ಕೇಳುತ್ತಾರೆ. ಇಲ್ಲಿ ನಾವು ಎರಡು ಷರತ್ತುಗಳನ್ನು ಕಾಣುತ್ತೇವೆ. ಮೊದಲನೆಯದಾಗಿ, ಒಬ್ಬ ವ್ಯಕ್ತಿಯು ದೇವರ ಭಯಭಕ್ತಿಯಲ್ಲಿ ಜೀವಿಸಬೇಕು. ಎರಡನೆಯದಾಗಿ, ಆ ವ್ಯಕ್ತಿಯು ದೇವರಿಗೆ ಮೆಚ್ಚಿಕೆಯಾದದ್ದನ್ನು ಮಾಡಬೇಕು.
ಒಬ್ಬ ಸಹೋದರಿಯು ತನ್ನ ಕುಟುಂಬದ ಆಶೀರ್ವಾದಕ್ಕಾಗಿ ಉಪವಾಸ ಮಾಡಿ ಆಸಕ್ತಿಯಿಂದ ಪ್ರಾರ್ಥಿಸುತ್ತಿದ್ದಳು. ಕರ್ತನು ಆಕೆಯೊಂದಿಗೆ ಮಾತನಾಡಿ, “ನಿನ್ನ ಸಹೋದರಿಯ ಮೇಲೆ ನಿನ್ನಲ್ಲಿರುವ ಕಹಿಯನ್ನೂ ಹಗೆಯನ್ನೂ ತೆಗೆದುಹಾಕಿ, ಅವಳೊಂದಿಗೆ ಸಮಾಧಾನ ಮಾಡಿಕೋ” ಎಂದು ಹೇಳಿದನು. ಆದರೆ ಅವಳು ಹಾಗೆ ಮಾಡಲು ಇಷ್ಟಪಡಲಿಲ್ಲ. ಅವಳ ಹೃದಯವು ಕಹಿಯಿಂದಲೂ ರೋಷದಿಂದಲೂ ತುಂಬಿತ್ತು, ಮತ್ತು ತನ್ನ ಸಹೋದರಿಯ ಬಳಿಗೆ ಹೋಗಿ ಕ್ಷಮೆ ಕೇಳಲು ಅವಳು ತನ್ನನ್ನು ತಾನು ತಗ್ಗಿಸಿಕೊಳ್ಳಲಿಲ್ಲ.
ಅದರ ನಂತರ, ಅವಳು ಅನೇಕ ಮನವಿಗಳನ್ನೂ ಬೇಡಿಕೆಗಳನ್ನೂ ಕರ್ತನ ಮುಂದೆ ತಂದಾಗಲೆಲ್ಲಾ, ಆತನು ಯಾವುದಕ್ಕೂ ಉತ್ತರಿಸಲಿಲ್ಲ. ಇದರ ಪರಿಣಾಮವಾಗಿ ಆ ಕುಟುಂಬದಲ್ಲಿ ಅನೇಕ ಆಶೀರ್ವಾದಗಳು ತಡೆಯಲ್ಪಟ್ಟವು. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ, ಮತ್ತು ಅವರ ವಿವಾಹಗಳು ನಡೆಯಲಿಲ್ಲ. ಅವರು ಎಲ್ಲದರಲ್ಲೂ ಅಡೆತಡೆಗಳನ್ನು ಎದುರಿಸಿದರು. ಅವರು ಪ್ರಾರ್ಥಿಸಿದಾಗಲೆಲ್ಲಾ, ಕರ್ತನು ಅವಳಿಗೆ ಪದೇ ಪದೇ, “ಮೊದಲು ನಿನ್ನ ಸಹೋದರಿಯೊಂದಿಗೆ ಸಮಾಧಾನ ಮಾಡಿಕೋ” ಎಂದು ಹೇಳಿದನು. ಆದರೂ ಅವಳು ಕೊನೆಯವರೆಗೂ ಸಮಾಧಾನ ಮಾಡಿಕೊಳ್ಳಲಿಲ್ಲ.
ಯೇಸುಕ್ರಿಸ್ತನು ಸಮಸ್ತ ನೀತಿಯನ್ನು ನೆರವೇರಿಸುವ ಸಲುವಾಗಿ ತನ್ನನ್ನು ತಾನೇ ತಗ್ಗಿಸಿಕೊಂಡು ದೀಕ್ಷಾಸ್ನಾನವನ್ನು ತೆಗೆದುಕೊಂಡಾಗ, “ಈತನೇ ನನ್ನ ಪ್ರಿಯ ಕುಮಾರನು, ಈತನನ್ನು ನಾನು ಮೆಚ್ಚಿದ್ದೇನೆ” ಎಂದು ತಂದೆಯ ಧ್ವನಿಯನ್ನು ಕೇಳಿದನು. ಇಂದಿಗೂ ಸಹ, ಅಸಂಖ್ಯಾತ ಕ್ರೈಸ್ತರು ದೀಕ್ಷಾಸ್ನಾನಕ್ಕೆ ಸಂಬಂಧಿಸಿದ ಈ ಸರಳ ಆಜ್ಞೆಗೂ ವಿಧೇಯರಾಗಿಲ್ಲ. ಹಾಗಿದ್ದಲ್ಲಿ ಕರ್ತನು ತಮ್ಮೊಂದಿಗೆ ಮಾತನಾಡಬೇಕೆಂದು ಅವರು ಹೇಗೆ ನಿರೀಕ್ಷಿಸಲು ಸಾಧ್ಯ?
ಯೇಸು, “ನನ್ನನ್ನು’ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನುʼ. ಎಂದನು (ಮತ್ತಾ 7:21). ಇದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ: ದೇವರ ಚಿತ್ತದ ಪ್ರಕಾರ ನಡೆಸಲ್ಪಡದ ಸೇವೆಯು, ಆತನ ಚಿತ್ತಕ್ಕೆ ವಿರುದ್ಧವಾಗಿ ನುಡಿಯಲಾದ ಪ್ರವಾದನೆಯು, ಮತ್ತು ಆತನ ಚಿತ್ತದ ಹೊರಗೆ ಮಾಡಲಾದ ಅದ್ಭುತಗಳು ಎಲ್ಲವೂ ಅಕ್ರಮದ ಕಾರ್ಯಗಳಾಗಿವೆ. ಒಂದು ದಿನ, ಕರ್ತನು ಅಂತಹವರಿಗೆ, “ಧರ್ಮವನ್ನು ಮೀರಿ ನಡೆಯುವವರೇ, ನನ್ನಿಂದ ತೊಳಗಿ ಹೋಗಿರಿ!” ಎಂದು ಎಲ್ಲರ ಮುಂದೆ ಹೇಳುವನು (ಮತ್ತಾ 7:23).
ಕರ್ತನ ಚಿತ್ತವನ್ನು ಕೇಳಿ, ಆತನಿಗೆ ಕಿವಿಗೊಟ್ಟು, ಆತನ ಚಿತ್ತದ ಪ್ರಕಾರ ನಡೆದುಕೊಳ್ಳುವವನು ಧನ್ಯನು. ಅಂತಹವನಿಗೆ ಯಾವಾಗಲೂ ಹೃದಯದಲ್ಲಿ ತೃಪ್ತಿಯೂ, ಲೋಕವು ಕೊಡಲಾರದ ಸಂತೋಷವೂ ಇರುವುದು. ಭೂಮಿಯ ಮೇಲಿನ ಜೀವಿತಾವಧಿಯಲ್ಲಿ ಆತನು ಕರ್ತನನ್ನು ಸಂತೋಷಪಡಿಸುವನು ಮತ್ತು ನಿತ್ಯತ್ವದಲ್ಲಿ ಆತನ ಸಮ್ಮುಖದಲ್ಲಿ ವಾಸಿಸುವನು.
ಯೇಸು, “ಆದದರಿಂದ, ಈ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಯುಳ್ಳ ಮನುಷ್ಯನನ್ನು ಹೋಲುವನು ” ಎಂದನು (ಮತ್ತಾ 7:24).
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” (1 ಯೋಹಾ 2:17).