ಜೂನ್ 29 – ನಾನಾದರೋ ಹುಳದಂಥವನೇ!
“ನಾನಾದರೋ ಹುಳದಂಥವನೇ ಹೊರತು ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟು ಜನರಿಂದ ತಿರಸ್ಕಾರ ಹೊಂದಿದ್ದೇನೆ.” (ಕೀರ್ತನೆ 22:6).
ಅನೇಕ ದೇವಜನರು ದೇವರ ಮುಂದೆ ತಮ್ಮನ್ನು ತಗ್ಗಿಸಿಕೊಂಡಾಗ, ತಮ್ಮನ್ನು ಹುಳುಗಳು, ಕೀಟಗಳು, ಧೂಳು, ಅಯೋಗ್ಯರು, ಅತ್ಯಲ್ಪರು ಮತ್ತು ಅಕಾಲಿಕವಾಗಿ ಹುಟ್ಟಿದವರೆಂದು ಕರೆದುಕೊಂಡರು.
ಅಬ್ರಹಾಮನು ತನ್ನನ್ನು ತಗ್ಗಿಸಿಕೊಂಡಾಗ ಹೀಗೆ ಹೇಳಿದನು: “ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಸ್ವಾಮಿಯ ಸಂಗಡ ವಾದಿಸುವಕ್ಕೆ ಧೈರ್ಯಗೊಂಡಿದ್ದೇನೆ.” (ಆದಿ 18:27). ಮೋಶೆಯು ದೇವರ ಮುಂದೆ ತನ್ನನ್ನು ತಗ್ಗಿಸಿಕೊಂಡು: “ಸ್ವಾಮಿ, ನಾನು ಮೊದಲಿನಿಂದಲೂ ನೀನು ದಾಸನ ಸಂಗಡ ಮಾತಾಡಿದ ಮೇಲೆಯೂ ವಾಕ್ಚಾತುರ್ಯವಿಲ್ಲದವನು” ಎಂದನು (ವಿಮೋ 4:10).
ಯೆರೆಮೀಯನು: “ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು ಎಂದು ಬಿನ್ನವಿಸಿದೆನು. ಅಗ ಯೆಹೋವನು ನನಗೆ ಬಾಲಕನೆನ್ನಬೇಡ; ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಅವರೆಲ್ಲರ ಬಳಿಎ ಹೋಗೇ ಹೋಗುವಿ; ನಾನು ಆಜ್ಞಾಪಿಸುವದನ್ನೆಲ್ಲಾ ನುಡಿಯಲೇ ನುಡಿಯುವಿ” ಎಂದು ಉತ್ತರಿಸಿದರು (ಯೆರೆ 1:6–7).
ಹೌದು, ತಮ್ಮನ್ನು ತಾವೇ ತಗ್ಗಿಸಿಕೊಂಡವರನ್ನು ಕರ್ತನು ಉಪಯೋಗಿಸಿಕೊಂಡನು. ದೇವರು ಒಂದು ಸಾಮಾನ್ಯ ಹುಳುವನ್ನು ಸಹ ತನ್ನ ಆಯುಧವಾಗಿ ಬಳಸಿಕೊಳ್ಳಲು ಶಕ್ತನಾಗಿದ್ದಾನೆ.
ದಾವೀದನಿಗೆ ಅರಸನಾಗಲು ಅಭಿಷೇಕ ದೊರೆತ ಮೇಲೂ, ಅವನಿಗೆ ತಕ್ಷಣವೇ ಸಿಂಹಾಸನ ಸಿಗಲಿಲ್ಲ. ಸೌಲನು ಅವನನ್ನು ಬೆಟ್ಟಗಳಲ್ಲಿ ಕೌಜುಗ ಹಕ್ಕಿಯನ್ನು ಬೇಟೆಯಾಡುವಂತೆ ಬೆನ್ನಟ್ಟಿದನು. ಆತ್ಮದಲ್ಲಿ ತೀವ್ರವಾಗಿ ಮುರಿದುಬಿದ್ದ ದಾವೀದನು—”ನಾನಾದರೋ ಹುಳದಂಥವನೇ; ಮನುಷ್ಯರಿಂದ ನಿಂದಿಸಲ್ಪಟ್ಟವನೂ ಜನರಿಂದ ತಿರಸ್ಕರಿಸಲ್ಪಟ್ಟವನೂ ಆಗಿದ್ದೇನೆ” ಎಂದು ಕೂಗಿಕೊಂಡನು.
ಬಹುಶಃ ಇಂದು ನೀವು ಸಹ ಇತರರಿಂದ ಅವಮಾನಿಸಲ್ಪಟ್ಟಿರಬಹುದು, ತಿರಸ್ಕರಿಸಲ್ಪಟ್ಟಿರಬಹುದು ಮತ್ತು ಅತ್ಯಲ್ಪರೆಂದು ಪರಿಗಣಿಸಲ್ಪಟ್ಟಿರಬಹುದು. ನಿಮ್ಮನ್ನು ಪ್ರೀತಿಸಲು ಯಾರೂ ಇಲ್ಲ ಎಂದು ನಿಮಗನಿಸಬಹುದು. ಆದರೆ ನಿಮ್ಮನ್ನು ನಿಜವಾಗಿ ಪ್ರೀತಿಸುವ ಒಬ್ಬರಿದ್ದಾರೆ—ನಿಮ್ಮ ಮೇಲಿನ ಪ್ರೀತಿಗೋಸ್ಕರ ಪರಲೋಕವನ್ನು ಬಿಟ್ಟು ಈ ಭೂಮಿಗೆ ಇಳಿದು ಬಂದ ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನೇ ಆತನು.
ಒಂದು ಎರೆಹುಳುವನ್ನು ಯೋಚಿಸಿ ನೋಡಿ. ಅದರ ಸ್ಥಿತಿ ಎಷ್ಟು ದಯನೀಯವಾಗಿದೆ! ಅದು ಹಕ್ಕಿಯಂತೆ ಮುಕ್ತವಾಗಿ ಆಕಾಶದಲ್ಲಿ ಹಾರಲಾರದು. ಕಾಡಿನ ಪ್ರಾಣಿಗಳಂತೆ ಓಡಲಾರದು.
ದೇವರ ಸೃಷ್ಟಿಗಳಲ್ಲಿ ಬಲಿಷ್ಠವಾದ ಆನೆಯು ತನ್ನ ಸೊಂಡಿಲನ್ನು ಎತ್ತಿ, ಸುಂದರವಾದ ದಂತಗಳನ್ನು ಪ್ರದರ್ಶಿಸುತ್ತಾ ಗಂಭೀರವಾಗಿ ನಡೆಯುತ್ತದೆ. ಸಿಂಹಗಳು ಬಲ ಮತ್ತು ಘನತೆಯಿಂದ ಧೈರ್ಯವಾಗಿ ನಿಲ್ಲುತ್ತವೆ. ಆದರೆ ಹುಳು ಎಷ್ಟು ಅಸಹಾಯಕವಾಗಿ ಕಾಣುತ್ತದೆ. ಅದು ಇತರ ಜೀವಿಗಳಂತೆ ನೆಟ್ಟಗೆ ನಡೆಯಲೂ ಆಗದು. ಅದು ನೆಲದ ಮೇಲೆ ತೆವಳುತ್ತಾ ಹೋಗುವಾಗ, ದಾರಿಯಲ್ಲಿ ಹೋಗುವವರ ಪಾದಗಳ ಕೆಳಗೆ ಸಿಕ್ಕಿ ನಜ್ಜುಗುಜ್ಜಾಗುತ್ತದೆ. ಅದಕ್ಕೆ ಕೂಗಾಡಲು ಧ್ವನಿ ಸಹ ಇರುವುದಿಲ್ಲ.
ನಾವು ಹುಳುಗಳಂತೆ ಅನಿಸಿಕೊಂಡರೂ ಕರ್ತನು ನಮ್ಮನ್ನು ಪರಾಮರ್ಶಿಸುತ್ತಾನೆ. ಪೇತ್ರನು ಹೀಗೆ ಹೇಳುತ್ತಾನೆ: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7).
ಅಷ್ಟೇ ಅಲ್ಲ—ಆತನು ಪ್ರೀತಿ ಸ್ವರೂಪನಾದ ಕರ್ತನು. ದೇವರು ಕೃಪೆಯಿಂದ ಮಾನವಕುಲವನ್ನು ಪರಾಮರ್ಶಿಸುವಾಗ, ಪ್ರೀತಿಯಿಂದ ಮನುಷ್ಯನನ್ನು ಕಾಯುವಾಗ ಮತ್ತು ರಕ್ಷಿಸುವಾಗ, ನೀವು ಏಕೆ ಕಳವಳಗೊಳ್ಳಬೇಕು? ನೀವು ಏಕೆ ಅಳಬೇಕು?
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಇಗೋ, ಇದು ಚೀಯೋನ್, ಯಾರಿಗೂ ಬೇಡವಾಗಿರುವ ನಗರಿ ಎಂದು ಜನರು ಹೇಳಿ ನಿನ್ನನ್ನು ಭ್ರಷ್ಟಳೆಂದದ್ದನ್ನು ನಾನು ಸಹಿಸಿಲಾರದೆ ನಿನಗೆ ಗುಣಪಡಿಸಿ ನಿನ್ನ ಬಾಸುಂಡೆಗಳನ್ನು ವಾಸಿ ಮಾಡುವೆನು.” (ಯೆರೆ 30:17).