ಮೇ 20 – ದೇವರು ನಿಮ್ಮನ್ನು ತನ್ನ ಮಾರ್ಗದಲ್ಲಿ ಮುನ್ನಡೆಸುವರು!
“ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವವನಾಗಿದ್ದೇನೆ.” (ಯೆಶಾ 48:17)
ನಾವು ನಮ್ಮನ್ನು ಕರ್ತನ ಕೈಗಳಿಗೆ ಒಪ್ಪಿಸಿಕೊಟ್ಟಾಗ, ಅವರು ತಮ್ಮ ಪರಿಪೂರ್ಣ ಚಿತ್ತದ ಪ್ರಕಾರ ನಮ್ಮನ್ನು ಮುನ್ನಡೆಸುತ್ತಾರೆ. ಅವರು ನಮ್ಮನ್ನು ಸರಿಯಾದ ಮಾರ್ಗಗಳಲ್ಲಿ ನಡೆಸುತ್ತಾರೆ. ದೇವರು ಮುನ್ನಡೆಸುತ್ತಾರೆ ಎಂದರೆ, ಅವರು ನಮ್ಮೊಂದಿಗಿದ್ದಾರೆ ಎಂದೇ ಅರ್ಥ.
ಅದಕ್ಕಾಗಿಯೇ ಅರಸನಾದ ದಾವೀದ ಹೀಗೆ ಹೇಳಿದನು: “ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ನಿನ್ನ ಕೋಲೂ ನನಗೆ ಧೈರ್ಯ ಕೊಡುತ್ತವೆ.” (ಕೀರ್ತ 23:4)
ಇಂದು, ಅನೇಕರು ತಾವೇ ಸ್ವತಃ ಮಾರ್ಗದರ್ಶನ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ: “ನನ್ನನ್ನು ಮುನ್ನಡೆಸಲು ನನಗೆ ಯಾರೂ ಬೇಡ—ನನಗೆ ಜ್ಞಾನ ಮತ್ತು ವಿವೇಕವಿದೆ.” ಆದರೆ ಸತ್ಯವೇದವು ನಮಗೆ ನೆನಪಿಸುತ್ತದೆ: ಮನುಷ್ಯನಿಗೆ ಸರಿಯಾಗಿ ಕಾಣುವ ಮಾರ್ಗವು ನಾಶನದಲ್ಲಿ ಕೊನೆಗೊಳ್ಳಬಹುದು. ಇನ್ನು ಕೆಲವರು ತಮಗೇ ತಿಳಿಯದಂತೆ ಕೆಟ್ಟ ಪ್ರಭಾವಗಳು, ಶಾರೀರಿಕ ಆಸೆಗಳು, ವ್ಯಸನಗಳು ಮತ್ತು ಪಾಪದ ಅಭ್ಯಾಸಗಳಿಂದ ಮುನ್ನಡೆಸಲ್ಪಡುತ್ತಿದ್ದಾರೆ. ಕರ್ತನು ಮಾತ್ರವೇ ನಮ್ಮನ್ನು ಸುರಕ್ಷಿತವಾಗಿ ಮುನ್ನಡೆಸಬಲ್ಲರು.
ಯೋಸೇಫನು ಚಿಕ್ಕವನಾಗಿದ್ದಾಗ, ಅವನಿಗೆ ತುಂಬಾ ಆಶ್ಚರ್ಯಕರವಾದ ಕಾರ್ಯವೇನಂದರೆ: ನನ್ನ ಅಣ್ಣಂದಿರು ನನ್ನನ್ನು ಏಕೆ ನನ್ನನ್ನು ಮಾರಿದರು?, ಐಗುಪ್ತ ದೇಶವು ಏಕೆ?, ನನ್ನ ಮೇಲೆ ಈ ಎಲ್ಲಾ ಸುಳ್ಳು ಆರೋಪಗಳು ಏಕೆ?, ಇಂತಹ ಅನ್ಯಾಯದ ಸೆರೆವಾಸ ಏಕೆ? ಇಂತಹ ಪ್ರಶ್ನೆಗಳಿಂದ ಅವನು ಗೊಂದಲಮಯ ಮತ್ತು ನೋವಿನಿಂದ ಜೀವಿಸಿರಬಹುದು. ಆದರೆ ನಂತರ, ದೇವರು ಅವನನ್ನು ಐಗುಪ್ತ ದೇಶದ ದೇಶಾಧಿಪತಿಯಾಗಿ ನೇಮಿಸಿದಾಗ, ದೇವರು ತನ್ನನ್ನು ಮೊದಲಿನಿಂದಲೂ ಮುನ್ನಡೆಸುತ್ತಿದ್ದರು ಎಂಬುದನ್ನು ಅವನು ಅರ್ಥಮಾಡಿಕೊಂಡನು.
ಅವನು ತನ್ನ ಸಹೋದರರಿಗೆ ಹೇಳಿದನು: “ನನ್ನನ್ನು ಇಲ್ಲಿಗೆ ನೀವು ಕಳುಹಿಸಲಿಲ್ಲ ದೇವರೇ ಕಳುಹಿಸಿದನು.” (ಆದಿ 45:5-8). ಆರಂಭದಲ್ಲಿ ಕಷ್ಟದಂತೆ ಕಾಣಿಸಿಕೊಂಡಿದ್ದು, ಕೊನೆಗೆ ದೇವರ ಪರಿಪೂರ್ಣ ಯೋಜನೆಯಾಗಿ ಮಾರ್ಪಟ್ಟಿತು.
ಯೋಸೇಫನು, ದಾವೀದನು ಮತ್ತು ದಾನಿಯೇಲನನ್ನು ಮುನ್ನಡೆಸಿದ ದೇವರು… ಖಂಡಿತವಾಗಿಯೂ ನಿಮ್ಮನ್ನೂ ಮುನ್ನಡೆಸುವರು. ಆದ್ದರಿಂದ ಗೊಂದಲಕ್ಕೊಳಗಾಗಿ, “ನಾನು ಎಲ್ಲಿಗೆ ಹೋಗಬೇಕು? ನಾನೇನು ಮಾಡಬೇಕು?” ಎಂದು ಪ್ರಶ್ನಿಸಬೇಡಿರಿ. ಕರ್ತನಲ್ಲಿ ಭರವಸೆಯಿಡಿರಿ, ಅವರು ನಿಮ್ಮನ್ನು ಹಂತ ಹಂತವಾಗಿ ಮುನ್ನಡೆಸುತ್ತಾರೆ.
ನನ್ನ ತಂದೆಯಾದ ಪಾಸ್ಟರ್ ಸ್ಯಾಮ್ ಜೆಬದೂರೈ ರವರ ಜೀವನವನ್ನು ನಾನು ಹಿಂತಿರುಗಿ ನೋಡುತ್ತೇನೆ. ಅವರು ತಮ್ಮ ಶಿಕ್ಷಣದ ನಂತರ, ಸುಮಾರು ಒಂದು ವರ್ಷದವರೆಗೆ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಅವರು ಒಂದು ವರ್ಷ ಶಿಕ್ಷಕರಾಗಿ ಕೆಲಸ ಮಾಡಿದರು. ಅದಾದ ಬಳಿಕ, ದೇವರ ಕೃಪೆಯಿಂದ, ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಹದಿನಾರು ವರ್ಷಗಳ ಕಾಲ ಕೆಲಸ ಮಾಡಿದರು. ದೇವರ ಆತ್ಮನು ಅವರನ್ನು ಸರ್ಕಾರಿ ಸೇವೆಯಿಂದ ಪೂರ್ಣಾವಧಿ ಸೇವೆಗಾಗಿ ಕರೆದು ಮುನ್ನಡೆಸಿದನು. ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ,
ಇಲ್ಲಿಯವರೆಗೆ ಮುನ್ನಡೆಸಿದ ಕರ್ತನು ಮುಂದೆಯೂ ತಮ್ಮನ್ನು ಮುನ್ನಡೆಸುತ್ತಾರೆ ಎಂಬ ದೃಢವಾದ ನಂಬಿಕೆಯನ್ನು ಅವರು ಹೊಂದಿದ್ದರು. ನನ್ನ ತಂದೆಯನ್ನು ಅದ್ಭುತವಾಗಿ ಮುನ್ನಡೆಸಿದ ದೇವರು, ನಿಮ್ಮನ್ನೂ ಸಹ ಮುನ್ನಡೆಸುವರು.
ಪ್ರೀತಿಯ ದೇವರ ಮಗುವೇ, ನೀವು ಒಂಟಿಯಾಗಿ ನಡೆಯುತ್ತಿಲ್ಲ. ಕರ್ತನು ನಿಮಗೆ ಯಾವುದು ಉತ್ತಮವೋ ಅದನ್ನು ಕಲಿಸುತ್ತಾರೆ, ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತಾರೆ ಮತ್ತು ಯಾವಾಗಲೂ ನಿಮ್ಮೊಂದಿಗೆ ನಡೆಯುತ್ತಾರೆ. ಅವರ ಮುನ್ನಡೆಸುವಿಕೆಯ ಮೇಲೆ ನಂಬಿಕೆಯನ್ನು ಇಡಿರಿ – ಅವರ ಮಾರ್ಗವು ಯಾವಾಗಲೂ ಪರಿಪೂರ್ಣವಾಗಿದೆ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:
“ನಿಮ್ಮೊಳಗೆ ಯಾವನು ಯೆಹೋವನಲ್ಲಿ ಭಯಭಕ್ತಿಯಿಟ್ಟು ಆತನ ಸೇವಕನ ಮಾತನ್ನು ಕೇಳುವನು.” (ಯೆಶಾ 50:10)