ಮೇ 26 – ದೇವರಾದುಕೊಂಡ ಜನಾಂಗ!
“ನಿವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ.” (1 ಪೇತ್ರ 2:9)
ನಾವು ದೇವರ ವಾಕ್ಯವನ್ನು ಪದೇ ಪದೇ ಓದುವಾಗ, ನಾವು ಯಾರಾಗಿದ್ದೇವೆ ಮತ್ತು ನಮ್ಮ ಬಗ್ಗೆ ದೇವರ ಉದ್ದೇಶವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ—ಮತ್ತು ಆತನನ್ನು ಮಹಿಮೆಪಡಿಸಲು ಪ್ರೇರೇಪಿಸಲ್ಪಡುತ್ತೇವೆ. ದೇವರ ದೃಷ್ಟಿಯಲ್ಲಿ ನಾವು: ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ.
ಹಳೆಯ ಒಡಂಬಡಿಕೆಯಲ್ಲಿ, ದೇವರು ಅಬ್ರಹಾಮನ ಸಂತತಿಯಾದ ಇಸ್ರಾಯೇಲ್ಯರನ್ನು ತನ್ನ ಸ್ವಂತ ಜನರೆಂದು ಆರಿಸಿಕೊಂಡನು. ಆತನು:
- ಅವರಿಗೆ ವಾಗ್ದಾನಗಳನ್ನು ನೀಡಿದನು
- ಅವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು
- ಅವರ ಮಧ್ಯೆ ನಾಯಕರನ್ನು ಎಬ್ಬಿಸಿದನು
- ಅವರಿಗಾಗಿ ಯುದ್ಧಗಳನ್ನು ಮಾಡಿದನು
- ಅವರ ಮುಂದೆ ಇದ್ದ ಜನಾಂಗಗಳನ್ನು ಓಡಿಸಿದನು
- ಹಾಲು ಜೇನು ಹರಿಯುವ ದೇಶವನ್ನು ಅವರಿಗೆ ಕೊಟ್ಟನು ಇದೆಲ್ಲವೂ ಸಂಭವಿಸಿದ್ದು ಏಕೆಂದರೆ ಅವರು ದೇವರು ಆರಿಸಿಕೊಂಡ
ಹೊಸ ಒಡಂಬಡಿಕೆಯಲ್ಲಿ, ದೇವರು ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡಿದ್ದಾನೆ. ಆತನು:
- ನಮಗಾಗಿ ತನ್ನ ಅಮೂಲ್ಯವಾದ ರಕ್ತವನ್ನು ಸುರಿಸಿದ್ದಾನೆ
- ನಮಗೆ ಪಾಪಕ್ಷಮಾಪಣೆಯನ್ನು ನೀಡಿದ್ದಾನೆ
- ನಮಗೆ ರಕ್ಷಣೆಯ ಆನಂದವನ್ನು ದಯಪಾಲಿಸಿದ್ದಾನೆ
- ತನ್ನ ರಕ್ತದ ಮೂಲಕ ನಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾನೆ
- ನಮಗೆ ಪರಲೋಕ ರಾಜ್ಯವನ್ನು ವಾಗ್ದಾನ ಮಾಡಿದ್ದಾನೆ ಆತನು ನಮ್ಮನ್ನು ಪ್ರೀತಿಯಿಂದ ನಿತ್ಯಜೀವಕ್ಕೆ ನಡೆಸಲು ಬಯಸುತ್ತಾನೆ.
ದಾವೀದನು ತನ್ನ ಸ್ವಂತ ಕುಟುಂಬದಲ್ಲೇ ಅತ್ಯಲ್ಪನಾಗಿದ್ದರೂ, ದೇವರು ತನ್ನನ್ನು ಆರಿಸಿಕೊಂಡಿದ್ದಾನೆ ಎಂದು ಅರಿತುಕೊಂಡಾಗ, ಅವನ ಹೃದಯವು ಕೃತಜ್ಞತೆಯಿಂದ ಉಕ್ಕಿ ಹರಿಯಿತು. ಅವನು ಹೀಗೆ ಹೇಳಿದನು: “ಯೆಹೋವನು ನನಗೆ ಮಾಡಿದ ಎಲ್ಲಾ ಉಪಕಾರಗಳಿಗಾಗಿ ನಾನು ಆತನಿಗೆ ಏನನ್ನು ಪ್ರತ್ಯುಪಕಾರ ಮಾಡಲಿ?”, ಮತ್ತು ಮುಂದುವರಿದು: “ನಾನು ರಕ್ಷಣೆಯ ಪಾತ್ರೆಯನ್ನು ಎತ್ತಿ ಹಿಡಿದು ಯೆಹೋವನ ನಾಮವನ್ನು ಪ್ರಾರ್ಥಿಸುವೆನು” ಎಂದನು.
ದೇವರ ಆರಿಸುವಿಕೆ ನಿಜವಾಗಿಯೂ ಅದ್ಭುತವಾದದ್ದು. ಕೆಲವರು ಕಷ್ಟದ ಸಂದರ್ಭಗಳಲ್ಲಿ ಆರಿಸಲ್ಪಡುತ್ತಾರೆ; ಕೆಲವರು ಹುಟ್ಟುವ ಮುನ್ನವೇ; ಇನ್ನು ಕೆಲವರು ಜಗತ್ತಿನ ಸೃಷ್ಟಿಗೆ ಮುಂಚೆಯೇ ಆರಿಸಲ್ಪಡುತ್ತಾರೆ.
ಆತನು ಬಲವಂತರನ್ನು ನಾಚಿಕೆಪಡಿಸಲು ಬಲಹೀನರನ್ನೂ; ಜ್ಞಾನಿಗಳನ್ನು ನಾಚಿಕೆಪಡಿಸಲು ಬುದ್ದಿಹೀನರನ್ನು; ಲೋಕದಲ್ಲಿ ಹೀನರಾದವರನ್ನೂ ಮತ್ತು ನಿರಾಕರಿಸಲ್ಪಟ್ಟವರನ್ನೂ ಆರಿಸಿಕೊಳ್ಳುತ್ತಾನೆ.
ಪೇತ್ರನು ಬರೆಯುವಂತೆ: “ಪವಿತ್ರಾತ್ಮನಿಂದ ಪ್ರತಿಷ್ಠಿಸಲ್ಪಟ್ಟವರಾಗಿ ದೇವರಿಗೆ ವಿಧೇಯರಾಗುವದಕ್ಕೂ ಯೇಸು ಕ್ರಿಸ್ತನ ರಕ್ತದಿಂದ ಪ್ರೋಕ್ಷಿತರಾಗುವದಕ್ಕೂ, ತಂದೆಯಾದ ದೇವರ ಭವಿಷ್ಯದ್ಜ್ಞಾನಾನುಸಾರವಾಗಿ ಆರಿಸಿಕೊಳ್ಳಲ್ಪಟ್ಟವರಿಗೆ…” (1 ಪೇತ್ರ 1:2)
ಪ್ರಿಯ ದೇವರ ಮಗುವೇ, ಈ ಲೋಕವು ನಿಮ್ಮನ್ನು ಪರದೇಶಿ ಅಥವಾ ಹೊರಗಿನವರು ಎಂದು ಕರೆದರೂ, ನೀವು ಸರ್ವೋನ್ನತನಾದ ದೇವರಿಂದ ಆರಿಸಲ್ಪಟ್ಟವರಾಗಿದ್ದೀರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:
“ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮ ಸಂಭಂದವಾದ ಮಂದಿರವಾಗಲಿಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ, ಮತ್ತು ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಯ ಯಜ್ಞಗಳನ್ನು ಸಮರ್ಪಿಸುವದಕ್ಕೆ ಪವಿತ್ರ ಯಾಜಕವರ್ಗದವರಾಗಿದ್ದೀರಿ.” (1 ಪೇತ್ರ 2:5)