Appam, Appam - Kannada

ಸೆಪ್ಟೆಂಬರ್ 17 – ಆತನು ಮಹಿಮಾ ಸ್ವರೂಪನು!

“ಯೆಹೋವನೇ ನಿನಗೆ ನಿತ್ಯಪ್ರಕಾಶವು, ನಿನ್ನ ದೇವರೇ ನಿನಗೆ ನಿತ್ಯ ಪ್ರಕಾಶವು.”(ಯೆಶಾ 60:19)

ಯೆಶಾಯ ಗ್ರಂಥದಲ್ಲಿರುವ 60 ನೇ ಅಧ್ಯಾಯವು ಅತ್ಯಂತ ಸುಂದರವಾದ ಮತ್ತು ಆಳವಾದ ಅಧ್ಯಾಯಗಳಲ್ಲಿ ಒಂದಾಗಿದೆ. ಇದು ದೇವರ ಮಹಿಮೆಯ ಕುರಿತು ಮಾತನಾಡುವ ಅಧ್ಯಾಯವಾಗಿದೆ. ಇದು ಈ ಉತ್ತೇಜನಾತ್ಮಕ ಮಾತುಗಳೊಂದಿಗೆ ಪ್ರಾರಂಭವಾಗುತ್ತದೆ: “ಏಳು, ಪ್ರಕಾಶಿಸು; ನಿನಗೆ ಬೆಳಕು ಬಂತು! ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.” (ಯೆಶಾ 60:1)

ಕರ್ತನಿಗಾಗಿ ಎದ್ದು ಪ್ರಕಾಶಿಸುವ ಎಲ್ಲರಿಗೂ, ಕರ್ತನೇ ಅವರಿಗೆ ನಿತ್ಯವಾದ ಬೆಳಕಾಗಿಯೂ ಅವರ ಮಹಿಮೆಯಾಗಿಯೂ ಇರುವನು (ಯೆಶಾ 60:19).

ಕ್ರೈಸ್ತೀಯ ಜೀವನದ ಮೊದಲ ಅನುಭವವೆಂದರೆ ದೇವರ ಮಹಿಮೆಯನ್ನು ಕಾಣುವ ಅನುಭವ. ಮೋಶೆಯು ದೇವರ ಮಹಿಮೆಯನ್ನು ನೋಡಲು ಹಂಬಲಿಸಿದನು. ಆತನು ಬಂಡೆಯ ಸಂದಿನಲ್ಲಿ ಮರೆಯಾಗಿದ್ದಾಗ, ಕರ್ತನ ಮಹಿಮೆಯನ್ನು ಅನುಭವಿಸಿದನು. ದಾವೀದನೂ ಸಹ ದೇವರ ಮಹಿಮೆಯನ್ನು ಕಾಣಲು ಹಂಬಲಿಸಿದನು.

“ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನ ಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು.” (ಕೀರ್ತನೆ 27:4)

ಮತ್ತೆ ದಾವೀದನು ಹೀಗೆ ಹೇಳುತ್ತಾನೆ: “ನಿನ್ನ ಮಂದಿರದಲ್ಲಿ ನಾನು ನಿನ್ನ ಮಹತ್ತನ್ನೂ ಕಂಡ ಪ್ರಕಾರ ಈಗಲೂ ಕಾಣಬೇಕೆಂದು ಅಪೇಕ್ಷಿಸುತ್ತೇನೆ.” (ಕೀರ್ತನೆ 63:2)

ಎರಡನೆಯ ಅನುಭವವೆಂದರೆ ಮಹಿಮೆಯನ್ನು ಪ್ರತಿಫಲಿಸುವ ಅನುಭವ. ಮೋಶೆಯು ಸೀನಾಯಿ ಬೆಟ್ಟದ ಮೇಲೆ ನಲವತ್ತು ದಿನಗಳ ಕಾಲ ಕರ್ತನ ಸನ್ನಿಧಿಯಲ್ಲಿ ಉಳಿದುಕೊಂಡಾಗ, ತನಗೆ ತಿಳಿಯದೆಯೇ ಆತನ ಮುಖವು ಪ್ರಕಾಶಿಸಲು ಪ್ರಾರಂಭಿಸಿತು. ಹೌದು, ಹಗಲೂ ರಾತ್ರಿಯೂ ಆತನ ಸನ್ನಿಧಿಯಲ್ಲಿ ಕರ್ತನಿಗೆ ಕಾಯುವವರ ಮುಖಗಳು ಪ್ರಕಾಶಿಸಲು ಪ್ರಾರಂಭಿಸುತ್ತವೆ. ಅವರ ಜೀವನವೂ ಆತನ ಬೆಳಕನ್ನು ಬೀರುತ್ತದೆ. ದೇವರ ಮಹಿಮೆಯನ್ನು ಪ್ರತಿಫಲಿಸುವ ಅನುಭವವು ನಿಜವಾಗಿಯೂ ಅಮೂಲ್ಯವಾದದ್ದು.

ಮೂರನೆಯ ಅನುಭವವೆಂದರೆ ಮಹಿಮೆಯ ಅಭಿಷೇಕದಿಂದ ತುಂಬಲ್ಪಡುವ ಅನುಭವ. ಪರಿಶುದ್ಧಾತ್ಮನು ಮಹಿಮೆಯ ಆತ್ಮ ಎಂದು ಕರೆಯಲ್ಪಡುತ್ತಾನೆ (1 ಪೇತ್ರ 4:14). ನಾವು ಪರಿಶುದ್ಧಾತ್ಮನ ಅಭಿಷೇಕವನ್ನು ಪಡೆದುಕೊಳ್ಳುವಾಗ, ಮಹಿಮೆಯ ದೇವರು ನಮ್ಮಲ್ಲಿ ವಾಸಿಸಲು ಬರುತ್ತಾನೆ.

“ದ್ವಾರಗಳೇ, ಉನ್ನತವಾಗಿರ್ರಿ; ಪುರಾತನವಾದ ಕದಗಳೇ, ತೆರೆದುಕೊಂಡಿರ್ರಿ; ಮಹಾಪ್ರಭಾವವುಳ್ಳ ಅರಸನು ಆಗಮಿಸುತ್ತಾನೆ.” (ಕೀರ್ತನೆ 24:7)

ಆದರೆ ನಾವು ಕೇವಲ ಮಹಿಮೆಯ ಅಭಿಷೇಕದಿಂದ ತುಂಬಲ್ಪಡುವ ಅನುಭವದಲ್ಲೇ ನಿಂತುಬಿಡಬಾರದು. ಆತನ ಮಹಿಮೆಯನ್ನು ಪಡೆದುಕೊಂಡ ಮೇಲೆ, ನಾವು ಆ ಮಹಿಮೆಯೊಂದಿಗೆ ಎದ್ದು ಪ್ರಕಾಶಿಸಬೇಕು. ಪ್ರವಾದಿಯಾದ ಯೆಶಾಯನು ಸಾರುವುದು ಇದನ್ನೇ: “ಏಳು, ಪ್ರಕಾಶಿಸು; ನಿನಗೆ ಬೆಳಕು ಬಂತು! ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.” (ಯೆಶಾ 60:1)

ನೀವು ಕತ್ತಲೆಯಿಂದ ಆವರಿಸಲ್ಪಟ್ಟ ಲೋಕದಲ್ಲಿ ಜೀವಿಸುತ್ತಿದ್ದೀರಿ. ಕರ್ತನು ನಿಮ್ಮನ್ನು ಕೇವಲ ಲೋಕಕ್ಕೆ ಬೆಳಕಾಗಿರಲು ಮಾತ್ರವಲ್ಲದೆ, ಅದರ ಮಧ್ಯದಲ್ಲಿ ತನ್ನ ಮಹಿಮೆಯನ್ನು ವ್ಯಕ್ತಪಡಿಸಲು ನೇಮಿಸಿದ್ದಾನೆ. ಆದ್ದರಿಂದ, ಎದ್ದು ಪ್ರಕಾಶಿಸುವುದು ನಿಮ್ಮ ಜವಾಬ್ದಾರಿಯಾಗಿದೆ.

“ಇಗೋ, ಕತ್ತಲೆಯು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು.” (ಯೆಶಾ 60:2)

ಪ್ರಿಯ ದೇವ ಜನರೇ, ಕರ್ತನೊಂದಿಗೆ ಮುಂದಿನ ಅನುಭವಕ್ಕೆ ಮುನ್ನಡೆಯಿರಿ. ಕ್ರಿಸ್ತನ ಆಗಮನದಲ್ಲಿ, ನೀವು ಮಹಿಮೆಯಿಂದ ಮಹಿಮೆಗೆ ಹೋಗಿ ಆತನ ಸ್ವರೂಪಕ್ಕೆ ಮಾರ್ಪಡುವಂತೆ ನೇಮಿಸಲ್ಪಟ್ಟಿದ್ದೀರಿ. ಮಹಿಮೆಯ ನಾಡಿನಲ್ಲಿ, ನೀವು ಮಹಿಮೆಯ ರಾಜನಾದ ಕ್ರಿಸ್ತನೊಂದಿಗೆ ಎಂದೆಂದಿಗೂ ಸಂತೋಷಪಡುವಿರಿ. ಹೌದು, ಆ ದಿನವು ಸಮೀಪಿಸುತ್ತಿದೆ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಆದರೆ ನಾವೆಲ್ಲರೂ ಮುಸುಕುತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು ಪ್ರಭಾವದಿಂದ ಅಧಿಕಪ್ರಭಾವಕ್ಕೆ ಹೋಗುತ್ತಾ ಆ ಪ್ರಭಾವದ ಸಾರೂಪ್ಯವುಳ್ಳವರೇ ಆಗುತ್ತೇವೆ.” (2 ಕೊರಿಂಥ 3:18)

Leave A Comment

Your Comment
All comments are held for moderation.