ಸೆಪ್ಟೆಂಬರ್ 14 – ರಾಜ್ಯವೂ ಬಲವೂ!
“ನಮ್ಮನ್ನು ಶೋಧನೆಯೊಳಗೆ ಸೇರಿಸದೆ, ಕೇಡಿನಿಂದ ನಮ್ಮನ್ನು ತಪ್ಪಿಸು; ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್.” (ಮತ್ತಾ 6:13)
ಕರ್ತನ ಪ್ರಾರ್ಥನೆಯಲ್ಲಿ, ಯೇಸು ನಮಗೆ “ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ” ಎಂದು ಸಾರುವ ಮೂಲಕ ಕರ್ತನನ್ನು ಮಹಿಮೆಪಡಿಸುವುದನ್ನು ಕಲ್ಪಿಸಿಕೊಟ್ಟನು. ನಿಜಕ್ಕೂ, ರಾಜ್ಯ, ಬಲ ಮತ್ತು ಮಹಿಮೆಗಳು ಬೇರ್ಪಡಿಸಲಾಗದಂತೆ ಒಂದಕ್ಕೊಂದು ಬೆಸೆದುಕೊಂಡಿವೆ. ಒಬ್ಬ ರಾಜನು ತನ್ನ ರಾಜ್ಯವನ್ನು ಚೆನ್ನಾಗಿ ಆಳಬೇಕಾದರೆ, ಅವನಿಗೆ ಬಲ ಬೇಕು. ತನ್ನ ರಾಜ್ಯವನ್ನು ರಕ್ಷಿಸಲು ಬಲವಾದ ಸೈನ್ಯವಿಲ್ಲದೆ, ಅವನು ಅದನ್ನು ಶಾಂತಿ ಮತ್ತು ಭದ್ರತೆಯಲ್ಲಿ ಆಳಲಾರನು.
ನಮ್ಮ ಕರ್ತನ ಬಲವು ಕೇವಲ ಸಮಸ್ತ ಪ್ರಕೃತಿಯನ್ನು ಸೃಷ್ಟಿಸಿದ ಬಲ ಮಾತ್ರವಲ್ಲ; ಅದು ಆತನು ಸಮಸ್ತವುಗಳ ಮೇಲೆ ಆಳುವ ಸಾರ್ವಭೌಮತ್ವವುಳ್ಳ ಬಲವೂ ಆಗಿದೆ.
“ಸರ್ವಾಧಿಕಾರವು ದೇವರದೇ.” (ಕೀರ್ತನೆ 62:11) ಕರ್ತನು ಅಬ್ರಹಾಮನನ್ನು ಕರೆದಾಗ, ಆತನು: “ನಾನು ಸರ್ವಶಕ್ತನಾದ ದೇವರು; ನನಗೆ ನಡಕೊಂಡು ದೋಷವಿಲ್ಲದವನಾಗಿರು” ಎಂದನು. (ಆದಿ 17:1)
ಆದ್ದರಿಂದ, ಕರ್ತನನ್ನೇ ದೃಷ್ಟಿಸುತ್ತಾ ಇರ್ರಿ ಮತ್ತು “ಕರ್ತನೇ, ನೀನು ಬಲವಂತನು. ನೀನು ಸರ್ವಶಕ್ತನಾದ ದೇವರು” ಎಂದು ಆತನನ್ನು ಸ್ತುತಿಸಿರಿ. ನೀವು ಹಾಗೆ ಮಾಡುವಾಗ, ಸೈತಾನನ ಬಲವು ಮುರಿಯಲ್ಪಡುತ್ತದೆ. ನೀವು ಇನ್ನು ಮುಂದೆ ಭಯದಲ್ಲಿ ಜೀವಿಸುವುದಿಲ್ಲ. ಕರ್ತನ ಬಲವನ್ನು ಅವಲಂಭಿಸಿಕೊಂಡು, ಸಿಂಹದಂತೆ ಧೈರ್ಯದಿಂದ ಮುನ್ನಡೆಯಿರಿ.
ಪ್ರವಾದಿಯಾದ ಯೆಶಾಯನು ಯೇಸು ಕ್ರಿಸ್ತನ ಕುರಿತು ಮಾತನಾಡುತ್ತಾ ಹೀಗೆ ಸಾರಿದನು: “ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು.” (ಯೆಶಾ 9:6)
ಆತನಿಗೆ ರೋಗಗಳನ್ನು ವಾಸಿಮಾಡುವ ಬಲವಿದೆ. ಆತನಿಗೆ ಶಾಪದ ಬೆನ್ನುಮೂಳೆಯನ್ನು ಮುರಿಯುವ ಬಲವಿದೆ. ಆತನಿಗೆ ದೆವ್ವಗಳನ್ನು ಓಡಿಸುವ ಬಲವಿದೆ. ಆತನಿಗೆ ಸತ್ತವರನ್ನು ಎಬ್ಬಿಸುವ ಬಲವಿದೆ. ಆತನು ತನ್ನ ಪರಾಕ್ರಮ ಬಲದಿಂದ ಆಳುತ್ತಾನೆ.
ಸರ್ವಶಕ್ತನಾದ ದೇವರನ್ನೇ ನೋಡಿರಿ. ನೀವು ಬೇಡುವದಕ್ಕಿಂತಲೂ ಆಲೋಚಿಸುವದಕ್ಕಿಂತಲೂ ಅತ್ಯಧಿಕವಾಗಿ ನಿಮ್ಮಲ್ಲಿ ಕಾರ್ಯಸಾಧಿಸಲು ಆತನು ಶಕ್ತನಾಗಿದ್ದಾನೆ. ನೀವು ಆತನ ಕೈಯಲ್ಲಿ ಒಪ್ಪಿಸಿದ್ದನ್ನು ಕೊನೆಯವರೆಗೂ ಕಾಯಲು ಆತನು ಶಕ್ತನಾಗಿದ್ದಾನೆ. ಖಂಡಿತವಾಗಿಯೂ, ಆತನು ಇಂದು ನಿಮಗಾಗಿ ಒಂದು ಅದ್ಭುತವನ್ನು ಮಾಡಲು ಶಕ್ತನಾಗಿದ್ದಾನೆ.
ತಾನು ಮುಪ್ಪಿನಲ್ಲಿರುವಾಗಲೂ, ತನಗೆ ಸಂತತಿಯನ್ನು ನೀಡಲು ದೇವರು ಶಕ್ತನಾಗಿದ್ದಾನೆ ಎಂದು ಅಬ್ರಹಾಮನು ನಂಬಿದನು. ಮೋರಿಯಾ ಬೆಟ್ಟದ ಮೇಲಿರುವ ಯಜ್ಞವೇಧಿಯ ಮೇಲೆ ತನ್ನ ಮಗನನ್ನು ಇರಿಸಿದಾಗಲೂ, ಆತನನ್ನು ಸತ್ತವರಿಂದ ಎಬ್ಬಿಸಲು ದೇವರು ಶಕ್ತನೆಂದು ನಂಬಿದನು. ಅದೇ ಸರ್ವಶಕ್ತನಾದ ದೇವರು ನಿಮ್ಮನ್ನು ಬೀಳದಂತೆ ಕಾಪಾಡಲು ಮತ್ತು ಕೊನೆಯವರೆಗೂ ಸ್ಥಿರವಾಗಿಡಲು ಶಕ್ತನಾಗಿದ್ದಾನೆ. ಆತನು ತನ್ನ ಪರಲೋಕ ಸನ್ನಿಧಿಯಲ್ಲಿ ಅತ್ಯಾನಂದದೊಂದಿಗೆ ನಿಮ್ಮನ್ನು ನಿಷ್ಕಲಂಕವಾಗಿ ನಿಲ್ಲಿಸಲು ಶಕ್ತನಾಗಿದ್ದಾನೆ.
ಆದ್ದರಿಂದ, ಯಾವಾಗಲೂ ಕರ್ತನ ಬಲದ ಮೇಲೆ ಆಧಾರಗೊಳ್ಳಿರಿ. ನಿಮ್ಮ ನಂಬಿಕೆಯನ್ನು ಅರಿಕೆಯಿಂದ ವ್ಯಕ್ತಪಡಿಸಿ ಮತ್ತು “ನಾವು ಆರಾಧಿಸುವ ದೇವರು ನಮ್ಮನ್ನು ಬಿಡಿಸಲು ಶಕ್ತನು, ನಮ್ಮನ್ನು ರಕ್ಷಿಸಲು ಶಕ್ತನು ಮತ್ತು ಕೊನೆಯವರೆಗೂ ಸುರಕ್ಷಿತವಾಗಿ ಮತ್ತು ನಂಬಿಗಸ್ತಿಕೆಯಿಂದ ನಡೆಸಲು ಶಕ್ತನು” ಎಂದು ಹೇಳುತ್ತಾ ಜಯದಲ್ಲಿ ಮುನ್ನಡೆಯಿರಿ.
ಪ್ರೀತಿಯ ದೇವಜನರೇ, ದೇವರ ಬಲವನ್ನು ನಿಮ್ಮ ಸಮಸ್ಯೆಯ ಗಾತ್ರದಿಂದ ಅಳೆಯಬೇಡಿ. ನಿಮ್ಮ ಸಮಸ್ಯೆಯನ್ನು ನಿಮ್ಮ ದೇವರ ಮಹತ್ವದಿಂದ ಅಳೆಯಿರಿ. ರಾಜ್ಯವು ಆತನಿಗೆ ಸೇರಿದ್ದು ಮತ್ತು ಸಮಸ್ತ ಬಲವೂ ಆತನಿಗೆ ಸೇರಿದ್ದು ಎಂದು ನೀವು ತಿಳಿದುಕೊಳ್ಳುವಾಗ, ನೀವು ಪ್ರತಿಯೊಂದು ಪರಿಸ್ಥಿತಿಯನ್ನೂ ಧೈರ್ಯ ಮತ್ತು ನಂಬಿಕೆಯಿಂದ ಎದುರಿಸಬಹುದು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನೋಡಿರಿ, ಹಾವುಗಳನ್ನು ಚೇಳುಗಳನ್ನು ವೈರಿಯ ಸಮಸ್ತ ಬಲವನ್ನೂ ತುಳಿಯುವದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವದೂ ನಿಮಗೆ ಕೇಡು ಮಾಡುವದೇ ಇಲ್ಲ.” (ಲೂಕ 10:19)