ಸೆಪ್ಟೆಂಬರ್ 15 – ಇದೇ ದಿವಸ ಮೊದಲುಗೊಂಡು!
“ಇದೇ ದಿವಸ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.” (ಹಗ್ಗಾ 2:19)
ಪ್ರವಾದಿಯಾದ ಹಗ್ಗಾಯನು ದೇವರ ವಾಕ್ಯವನ್ನು ಇಸ್ರಾಯೇಲ್ ಜನರಿಗೆ ಮಾತ್ರವಲ್ಲದೆ, ಇಂದು ನಮಗೂ ನೀಡುತ್ತಿದ್ದಾನೆ. ಆಶೀರ್ವಾದವಿಲ್ಲದೆ, ವೇದನೆ ಮತ್ತು ಕಣ್ಣೀರಿನ ನಡುವೆ ಜೀವಿಸುತ್ತಿದ್ದ ಇಸ್ರಾಯೇಲ್ ಜನರನ್ನು ನೋಡಿ ಆತನು,”ಇದೇ ದಿವಸ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.” ಎಂದು ಸಾರಿದನು. ಎಂತಹ ಸಂತೋಷದ ಸಂದೇಶ!
ದೇವರು ಅವರನ್ನು ಯಾವ ಸಂದರ್ಭದಲ್ಲಿ ಆಶೀರ್ವದಿಸುವುದಾಗಿ ವಾಗ್ದಾನ ಮಾಡಿದನು ಎಂಬುದು ನಿಮಗೆ ಗೊತ್ತೇ? ಅವರು ದೇವರ ಆಲಯವನ್ನು ಕಟ್ಟಲು ಪ್ರಾರಂಭಿಸಿದ ದಿನದಿಂದ. ಆತನು, “ನನ್ನ ಆಲಯವನ್ನು ಕಟ್ಟಿರಿ. ನಾನು ಅದರಲ್ಲಿ ಆನಂದಿಸುವೆನು; ಅಷ್ಟೇ ಅಲ್ಲ, ನಾನು ನಿಮ್ಮನ್ನು ಆಶೀರ್ವದಿಸುವೆನು” ಎಂದು ಹೇಳುತ್ತಿದ್ದನು. ಕರ್ತನು ಆತನ ಆಲಯವನ್ನು ಕಟ್ಟುವ ನಿಮ್ಮ ದೃಢನಿಶ್ಚಯವನ್ನು ಮತ್ತು ನೀವು ಅದಕ್ಕೆ ಕೊಡುವ ಮೌಲ್ಯ ಹಾಗೂ ಗೌರವವನ್ನು ನೋಡುತ್ತಾನೆ.
ಸತ್ಯವೇದದಾದ್ಯಂತ, ಜನರು ಯಜ್ಞವೇದಿಗಳನ್ನು ಕಟ್ಟುವುದನ್ನು ನಾವು ಕಾಣುತ್ತೇವೆ. ಮೋಶೆಯು ದೇವದರ್ಶನಗುಡಾರವನ್ನು ಕಟ್ಟಿದನು. ಸೊಲೊಮೋನನು ಕರ್ತನಿಗೆ ಮಹಿಮೆಯುಳ್ಳ ಆಲಯವನ್ನು ಕಟ್ಟಿದನು. ತರುವಾಯ, ಎಜ್ರನು, ನೆಹೆಮಿಯನು ಮತ್ತು ಜೆರುಬ್ಬಾಬೆಲರು ಆಲಯವನ್ನು ಪುನಃಕಟ್ಟಿದರು. ಅವರು ಕರ್ತನ ಆಶೀರ್ವಾದವನ್ನು ಅನುಭವಿಸಿದರು.
ಇಂದು, ನೀವು ಕಟ್ಟಬೇಕಾದ ಆಲಯವು ನಿಮ್ಮ ಆತ್ಮಿಕ ಜೀವಿತವಾಗಿದೆ. ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಕರ್ತನು, ಕೈಯಿಂದ ಮಾಡಿದ ಆಲಯಗಳಲ್ಲಿ ವಾಸಿಸುವುದಿಲ್ಲ. ಆತನು ನಮ್ಮ ಶರೀರಗಳನ್ನು ತನ್ನ ಆಲಯವನ್ನಾಗಿಯೂ, ತನ್ನ ವಾಸಸ್ಥಳವನ್ನಾಗಿಯೂ, ತನ್ನ ಪ್ರಾರ್ಥನಾ ಮಂದಿರವನ್ನಾಗಿಯೂ ಮತ್ತು ತನ್ನ ಮಹಾಪರಿಶುದ್ಧ ಸ್ಥಳವನ್ನಾಗಿಯೂ ಮಾಡಿಕೊಳ್ಳುತ್ತಾನೆ. ಕ್ರಿಸ್ತನು ನಿಮ್ಮಲ್ಲಿದ್ದು ಪ್ರಭಾವದ ನಿರೀಕ್ಷೆಗೆ ಆಧಾರಭೂತನಾಗಿರುವದೇ (ಕೊಲೊಸ್ಸೆ 1:27).
ಒಬ್ಬ ವ್ಯಕ್ತಿಯು, “ನಾನು ಕರ್ತನಿಗೆ ಆಲಯವಾಗಬೇಕು. ನನ್ನೊಳಗೆ ವಾಸಿಸುವ ಪರಿಶುದ್ಧಾತ್ಮನಿಗೆ ನಾನು ಯೋಗ್ಯವಾದ ವಾಸಸ್ಥಳವಾಗಿರಬೇಕು” ಎಂದು ಯೋಚಿಸಲು ಪ್ರಾರಂಭಿಸಿ, ಪರಿಣಾಮವಾಗಿ ತನ್ನ ಪ್ರಾರ್ಥನಾ ಜೀವನಕ್ಕೂ ದೇವರ ವಾಕ್ಯದ ಧ್ಯಾನಕ್ಕೂ ಹೆಚ್ಚಿನ ಗಮನವನ್ನು ನೀಡುವಾಗ, ಆ ದಿನದಿಂದಲೇ ಕರ್ತನು ಆತನನ್ನು ಖಂಡಿತವಾಗಿಯೂ ಆಶೀರ್ವದಿಸುತ್ತಾನೆ. ದೇವರು ಆತನನ್ನು ಕೇವಲ ಲೌಕಿಕ ವಿಷಯಗಳಲ್ಲಿ ಮಾತ್ರವಲ್ಲದೆ, ಆತ್ಮೀಕವಾಗಿಯೂ ಪರಲೋಕದ ಕಾರ್ಯಗಳಲ್ಲಿಯೂ ಆಶೀರ್ವದಿಸುತ್ತಾನೆ.
ಪ್ರವಾದಿಯಾದ ಹಗ್ಗಾಯನ ದಿನಗಳಲ್ಲಿ, ಜೆರುಬ್ಬಾಬೆಲನು ಅತ್ಯಂತ ಆಸಕ್ತಿಯಿಂದ ಆಲಯದ ಅಸ್ತಿವಾರವನ್ನು ಹಾಕಿದನು. ಆತನು ಅಳತೆದಾರವನ್ನು ಕೈಯಲ್ಲಿ ಹಿಡಿದು ಮರುಕಟ್ಟುವ ಕೆಲಸವನ್ನು ಪ್ರಾರಂಭಿಸಿದನು. ಕರ್ತನು ಇದನ್ನು ನೋಡಿದಾಗ, ಆತನ ಹೃದಯವು ಸಂತೋಷದಿಂದ ತುಂಬಿತು.
“ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ — ‘ಶೆಯಲ್ತೀಯೇಲನ ಮಗನೂ ನನ್ನ ಸೇವಕನೂ ಆದ ಜೆರುಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು ಮುದ್ರೆಯುಂಗುರವಾಗಿ ಮಾಡಿಕೊಳ್ಳುವೆನು, ಇದಕ್ಕೆ ನಿನ್ನನ್ನು ಆರಿಸಿಕೊಂಡಿದ್ದೇನೆ; ಇದು ಸೇನಾಧೀಶ್ವರನಾದ ಯೆಹೋವನ ನುಡಿ.” (ಹಗ್ಗಾ 2:23)
ಪ್ರೀತಿಯ ದೇವರ ಮಕ್ಕಳೇ, ಕರ್ತನು ನಿಮ್ಮನ್ನು ತನ್ನ ಮುದ್ರೆಯುಂಗುರವನ್ನಾಗಿ ಮಾಡುವನು. ಆದ್ದರಿಂದ, ನಿಮ್ಮ ಆತ್ಮೀಕ ಜೀವನವನ್ನು ಕಟ್ಟಿರಿ. ಪರಿಶುದ್ಧಾತ್ಮನು ನಿಮ್ಮ ಶರೀರವೆಂಬ ಆಲಯದಲ್ಲಿ ವಾಸಿಸುತ್ತಾನೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ನಿಮ್ಮ ಶರೀರದ ಪವಿತ್ರತೆಯನ್ನು ಕಾಯ್ದುಕೊಳ್ಳಿರಿ.
ಅರಸರು ಮುದ್ರೆಯುಂಗುರಗಳನ್ನು ಧರಿಸಿ, ರಾಜಾಜ್ಞೆಗಳನ್ನು ಮತ್ತು ಸರ್ಕಾರಿ ಕಾನೂನುಗಳನ್ನು ಮುದ್ರಿಸಲು ಅವುಗಳನ್ನು ಬಳಸುತ್ತಿದ್ದಂತೆಯೇ, ರಾಜಾಧಿರಾಜನು ನಿಮ್ಮನ್ನು ತನ್ನ ಮುದ್ರೆಯುಂಗುರವನ್ನಾಗಿ ಬಳಸಿಕೊಳ್ಳುವನು. ನಿಮ್ಮ ಜೀವನವು ನಿಮ್ಮ ಪರಲೋಕದ ರಾಜನ ಅಧಿಕಾರ, ಸ್ವಭಾವ ಮತ್ತು ಮುದ್ರೆಯನ್ನು ಹೊರಲು ಸಾಧ್ಯವಿದೆ.
ಇಂದಿನಿಂದಲೇ—ಕರ್ತನು ನಿಮ್ಮನ್ನು ಆಶೀರ್ವದಿಸಲಿ, ಬಲಪಡಿಸಲಿ ಮತ್ತು ನಿಮ್ಮ ಜೀವನವನ್ನು ತನ್ನ ಸನ್ನಿಧಿಯ ವಾಸಸ್ಥಾನವನ್ನಾಗಿಯೂ ತನ್ನ ಉದ್ದೇಶದ ಮುದ್ರೆಯನ್ನಾಗಿಯೂ ಮಾಡಲಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಇಸ್ರಾಯೇಲ್ಯರು ಸಂತೋಷದಿಂದ ಆ ದೇವಾಲಯದ ಪ್ರತಿಷ್ಟೆಯನ್ನು ಆಚರಿಸಿದರು. ಯೆಹೋವನು ಅವನ ಸಂತೋಷವನ್ನು ತಿರುಗಿಸಿ ತಮಗೆ ಸಂತೋಷವನ್ನು ಉಂಟುಮಾಡಿದ್ದಾನೆ …” (ಎಜ್ರ 6:16, 22)