Appam, Appam - Kannada

ನವೆಂಬರ್ 13 – ದೇವರ ಸ್ನೇಹಿತ!

“ನಾನು ಮಾಡಬೇಕೆಂದಿರುವ ಕಾರ್ಯವನ್ನು ಅಬ್ರಹಾಮನಿಗೆ ಮರೆಮಾಡುವದು ಸರಿಯೋ?” ಆದಿ 18:17

ಅಬ್ರಹಾಮನನ್ನು “ದೇವರ ಸ್ನೇಹಿತ” ಎಂದು ಸತ್ಯವೇದದಲ್ಲಿ ಕರೆಯಲಾಯಿತು (ಯಾಕೋ 2:23). ಆದ್ದರಿಂದ, ಕರ್ತನು ಹತ್ತು ಬಾರಿ ಅಬ್ರಹಾಮನಿಗೆ ದರ್ಶನ ಕೊಟ್ಟನು. ಅನೇಕ ಬಾರಿ, ಆತನು ಸ್ವತಃ ಮುಂಚಿತವಾಗಿ ಅಬ್ರಹಾಮನನ್ನು ಹುಡುಕಿಕೊಂಡು ಬಂದು ಒಬ್ಬ ಸ್ನೇಹಿತನಂತೆ ಮಾತನಾಡಿದನು. ಆತನು ಕನಸುಗಳ ಮೂಲಕವೂ ಅವನೊಂದಿಗೆ ಮಾತನಾಡಿದನು.

ದೇವರು ಸ್ನೇಹಿತರನ್ನು ಇಷ್ಟಪಡುತ್ತಾನೆ. ಆತನ ಭಾರಗಳನ್ನು ಹೊತ್ತುಕೊಂಡು ಪ್ರಾರ್ಥನೆಯಲ್ಲಿ ಆತನೊಂದಿಗೆ ಭಾಗವಹಿಸುವವರನ್ನು ಆತನ ಕಣ್ಣುಗಳು ಹುಡುಕುತ್ತವೆ. ಸೊದೋಮ್ ಗೊಮೋರಗಳ ನಾಶನದ ಬಗ್ಗೆ ಕರ್ತನು ಅಬ್ರಹಾಮನಿಗೆ ತಿಳಿಸಿದಾಗ, ಅಬ್ರಹಾಮನು ತಕ್ಷಣವೇ ಮೊಣಕಾಲೂರಿ, ನೀತಿವಂತರು ನಾಶವಾಗದಂತೆ ಭಾರದಿಂದ ವಿಜ್ಞಾಪಿಸಿದನು.

ಈ ರೀತಿಯ ತೀವ್ರವಾದ ಮಧ್ಯಸ್ಥಿಕೆ ಪ್ರಾರ್ಥನೆಯನ್ನು ಅರ್ಪಿಸಿದ ಸತ್ಯವೇದದ ಮೊದಲ ವ್ಯಕ್ತಿ ಅಬ್ರಹಾಮನಾಗಿದ್ದನು. ಅಬ್ರಹಾಮನು ಪ್ರಾರ್ಥಿಸುತ್ತಾ ಹೋದಂತೆಲ್ಲಾ, ಕರ್ತನು ಪ್ರತಿ ಬಾರಿಯೂ ಅವನಿಗೆ ಉತ್ತರಿಸಿದನು. ಆತನು, “ಸೊದೋಮಿನಲ್ಲಿ ಐವತ್ತು ಮಂದಿ ನೀತಿವಂತರು ನನಗೆ ಸಿಕ್ಕಿದರೆ ಅವರ ನಿಮಿತ್ತ ಊರನ್ನೆಲ್ಲಾ ಉಳಿಸುವೆನು” ಎಂದು ಉತ್ತರಿಸಿದನು (ಆದಿ 18:26).

ಅಲ್ಲಿ ನಲವತ್ತೈದು ಮಂದಿ ನೀತಿವಂತರು ಸಿಕ್ಕಿದರೆ ಕರ್ತನು ಪಟ್ಟಣವನ್ನು ಉಳಿಸುವನೇ ಎಂದು ಅಬ್ರಹಾಮನು ಕೇಳಿದನು. ಕರ್ತನು ತಾನು ಅದನ್ನು ನಾಶಮಾಡುವುದಿಲ್ಲ ಎಂದು ಉತ್ತರಿಸಿದನು. ಅಬ್ರಹಾಮನು ನಲವತ್ತು ಎಂದು ಮತ್ತೆ ಕೇಳಿದಾಗ, ನಲವತ್ತು ಮಂದಿ ನೀತಿವಂತರ ನಿಮಿತ್ತ ಪಟ್ಟಣವನ್ನು ಉಳಿಸುವುದಾಗಿ ಕರ್ತನು ಹೇಳಿದನು (ಆದಿ 18:29).

ಅಬ್ರಹಾಮನು ಮೂವತ್ತು, ಇಪ್ಪತ್ತು ಮತ್ತು ಕೊನೆಗೆ ಹತ್ತರ ಬಗ್ಗೆ ಕೇಳುತ್ತಾ ಹೋದಂತೆಲ್ಲಾ, ಕರ್ತನು ಅತ್ಯಂತ ತಾಳ್ಮೆಯಿಂದ ಪ್ರತಿ ಬಾರಿಯೂ ಉತ್ತರಿಸಿದನು.

ಯೇಸುಕ್ರಿಸ್ತನ ದಿನಗಳಲ್ಲಿ, ಆತನ ಶಿಷ್ಯರೇ ಆತನ ಸ್ನೇಹಿತರಾಗಿದ್ದರು. ಯೇಸು ಅವರನ್ನು ಪ್ರೀತಿಯಿಂದ, “ನಾನು ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ” ಎಂದನು (ಯೋಹಾ 15:15).

ಕರ್ತನು ನಿಮ್ಮನ್ನು ತನ್ನ ಸ್ನೇಹಿತನಾಗಿ ಆರಿಸಿಕೊಂಡಿದ್ದಾನೆ. ಆತನು ನಿಮ್ಮನ್ನು ತನ್ನ ಸೇವಕನಾಗಿಯೂ ಪ್ರವಾದಿಯಾಗಿಯೂ ಆರಿಸಿಕೊಂಡಿದ್ದಾನೆ. ಸತ್ಯವೇದವು ಹೇಳುತ್ತದೆ, “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ಪ್ರಕಟಪಡಿಸದೆ ಯಾವ ಕಾರ್ಯವನ್ನೂ ಮಾಡುವುದಿಲ್ಲ” (ಆಮೋ 3:7).

ದೈವ ಭಕ್ತನಾದ ಕೆನ್ನೆತ್ ಇ. ಹೇಗಿನ್ ಅವರ ಜೀವನದ ಬಗ್ಗೆ ಓದುವಾಗ ನಾನು ಬಹಳವಾಗಿ ಆಶ್ಚರ್ಯಚಕಿತನಾಗಿದ್ದೇನೆ. ಅವರು ತಮ್ಮ ಯೌವನದಿಂದಲೇ ಕರ್ತನ ನಡೆಸುವಿಕೆಗೆ ತಮ್ಮನ್ನು ತಾವು ಪ್ರಾಮಾಣಿಕವಾಗಿ ಸಮರ್ಪಿಸಿಕೊಂಡು ದೇವರ ಸ್ನೇಹಿತರಾದರು. ಒಬ್ಬ ವ್ಯಕ್ತಿಗಾಗಿ ಪ್ರಾರ್ಥಿಸುವಂತೆ ಕರ್ತನು ಅವರಿಗೆ ಪ್ರೇರಣೆ ನೀಡಿದಾಗಲೆಲ್ಲಾ, ಅವರು ಆಸಕ್ತಿಯಿಂದ ಮತ್ತು ಭಾರದಿಂದ ಅವರಿಗಾಗಿ ಪ್ರಾರ್ಥಿಸುತ್ತಿದ್ದರು . ಕರ್ತನು ಪದೇ ಪದೇ ಪ್ರಾರ್ಥನೆಯ ಭಾರವನ್ನು ಅವರಿಗೆ ನೀಡುತ್ತಿದ್ದರು. ಅವರು ದೇವರ ಸಮ್ಮುಖದಲ್ಲಿ ಕಾಯುತ್ತಾ, ಅನ್ಯಭಾಷೆಗಳಲ್ಲಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದರು. ನಂತರ ಆ ಅನ್ಯಭಾಷೆಗಳ ಅರ್ಥವನ್ನು ತಾವೇ ಗ್ರಹಿಸಿ ದೇವರ ಚಿತ್ತವನ್ನು ತಿಳಿದುಕೊಳ್ಳುತ್ತಿದ್ದರು. ಈ ರೀತಿಯಲ್ಲಿ ಅವರು ಪವಿತ್ರಾತ್ಮನಿಂದ ನಡೆಸಲ್ಪಟ್ಟರು.

ಪ್ರಿಯ ದೇವರ ಮಕ್ಕಳೇ, ಕರ್ತನ ಸ್ನೇಹಿತರಾಗಲು ಇಂದು ನಿಮ್ಮನ್ನು ನೀವು ಆತನಿಗೆ ಸಮರ್ಪಿಸಿಕೊಳ್ಳಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತನಾಡುವನು” (ಮತ್ತಾ 10:20).

Leave A Comment

Your Comment
All comments are held for moderation.