Appam, Appam - Kannada

ಅಕ್ಟೋಬರ್ 23 – ನಾನು ಸ್ಥಳವನ್ನು ಸಿದ್ಧಮಾಡಿದ ಮೇಲೆ!

“ನಿಮಗೆ ಸ್ಥಳವನ್ನು ಸಿದ್ಧಮಾಡವದಕ್ಕೆ ಹೋಗುತ್ತೇನೆ.” (ಯೋಹಾ 14:2–3)

ಕರ್ತನು ಇಸ್ರಾಯೇಲ್ ಜನರಿಗಾಗಿ ಹಾಲು ಜೇನು ಹರಿಯುವ ಕಾನಾನ್ ದೇಶವನ್ನು ಸಿದ್ಧಮಾಡಿದನು. ಅದು ಅವರಿಗೆ ಸಿದ್ಧವಾಗುವವರೆಗೂ ಅವರು ಐಗುಪ್ತದಲ್ಲಿ ದಾಸರಾಗಿ ಜೀವಿಸುವುದನ್ನು ಮುಂದುವರಿಸಿದರು.

ಒಂದೆಡೆ, ಕಾನಾನ್ ದೇಶವನ್ನು ಸಿದ್ಧಗೊಳಿಸಬೇಕಾಗಿತ್ತು. ಅರಣ್ಯದ ಅಪಾಯಗಳನ್ನು ಎದುರಿಸಬೇಕಾಗಿತ್ತು, ಮನೆಗಳನ್ನು, ದ್ರಾಕ್ಷಾತೋಟಗಳನ್ನು ಮತ್ತು ವ್ಯವಸಾಯದ ಭೂಮಿಯನ್ನು ಸಿದ್ಧಪಡಿಸಬೇಕಾಗಿತ್ತು. ಇನ್ನೊಂದೆಡೆ, ಅಲ್ಲಿ ವಾಸಿಸುತ್ತಿದ್ದ ಜನರ ಅಕ್ರಮವು ಪೂರ್ಣ ಮಟ್ಟಕ್ಕೆ ತಲುಪಬೇಕಾಗಿತ್ತು.

ನಂತರ, ಕರ್ತನು ತಾನೇ ಇಳಿದುಬಂದು ಯಜ್ಞದ ಕುರಿಮರಿಯ ರಕ್ತದ ಮೂಲಕ ಇಸ್ರಾಯೇಲ್ಯರನ್ನು ವಿಮೋಚಿಸಿದನು. ಆತನು ಮೇಘಸ್ತಂಭದ ಮೂಲಕ ಮತ್ತು ಅಗ್ನಿಸ್ತಂಭದ ಮೂಲಕ ಅವರನ್ನು ನಡೆಸಿ, ತಾನು ವಾಗ್ದಾನ ಮಾಡಿದ ಕಾನಾನ್ ದೇಶಕ್ಕೆ ಕರೆತಂದನು. ಅಲ್ಲಿ ಅವರು ತಾವು ಕಟ್ಟದ ಮನೆಗಳನ್ನೂ ತಾವು ನೆಡದ ದ್ರಾಕ್ಷಾತೋಟಗಳನ್ನೂ ಬಾಧ್ಯವಾಗಿ ಪಡೆದುಕೊಂಡರು.

ಅದೇ ರೀತಿಯಲ್ಲಿ, ಆತ್ಮಿಕ ಇಸ್ರಾಯೇಲ್ಯರಾದ ನಮಗಾಗಿ ಪರಲೋಕದ ಕಾನಾನ್ ಸಿದ್ಧವಾಗಿದೆ. ಕರ್ತನು ನಮಗೆ, “ಹೇಗೋ ಮಾರ್ಗವನ್ನು ಕಂಡುಕೊಂಡು ಪರಲೋಕದ ಕಾನಾನನ್ನು ಬಾಧ್ಯವಾಗಿ ಪಡೆದುಕೊಳ್ಳಿರಿ” ಎಂದು ಬರಿ ಹೇಳುವುದಿಲ್ಲ. ಬದಲಾಗಿ, ಆತನು ಅಪಾರ ಪ್ರೀತಿಯಿಂದ ತಾನು ತಿರುಗಿ ಬಂದು, ನಿಮ್ಮನ್ನು ತನ್ನ ಬಳಿಗೆ ಸೇರಿಸಿಕೊಂಡು, ತಾನಿರುವಲ್ಲಿಯಲ್ಲೇ ನಿಮ್ಮನ್ನೂ ಇರಿಸಿಕೊಳ್ಳುವೆನೆಂದು ಭರವಸೆ ನೀಡುತ್ತಾನೆ (ಯೋಹಾ 14:3).

ಕ್ರಿಸ್ತನು ಎರಡನೇ ಬಾರಿಗೆ ಬರುವಾಗ, ಆತನು ಮರಿಯಳ ಶಿಶುವಾಗಿ ಬರುವುದಿಲ್ಲ. ಆತನು ತಂದೆಯ ಮಹಿಮೆಯನ್ನು ಧರಿಸಿಕೊಂಡು, ದೇವದೂತರ ತುತೂರಿ ಧ್ವನಿಯೊಂದಿಗೆ ಪರಲೋಕದಿಂದ ಇಳಿದುಬರುವನು.

ಸತ್ಯವೇದವು ಕ್ರಿಸ್ತನ ಎರಡನೇ ಬರೋಣದ ಕಡೆಗೆ ನಮ್ಮ ಗಮನವನ್ನು ಪದೇ ಪದೇ ಸೆಳೆಯುತ್ತದೆ. ಆತನ ತಿರುಗಿಬರುವಿಕೆಯ ನಿರೀಕ್ಷೆಯು ಹೊಸ ಒಡಂಬಡಿಕೆಯಾದ್ಯಂತ ಹರಿಯುತ್ತದೆ, ಮತ್ತು ಥೆಸಲೊನೀಕದವರಿಗೆ ಬರೆದ ಪತ್ರಿಕೆಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಆತನ ಆಗಮನಕ್ಕಾಗಿ ಸಿದ್ಧರಾಗಿ ಮತ್ತು ನಿರೀಕ್ಷೆಯಿಟ್ಟು ಜೀವಿಸುವಂತೆ ನಂಬಿಗಸ್ತರಿಗೆ ಮರಳಿ ಮರಳಿ ಎಚ್ಚರಿಸಲಾಗಿದೆ.

ಕರ್ತನು, “ನಿಜವಾಗಿ ನಾನು ಬೇಗನೆ ಬರುತ್ತೇನೆ” ಎಂದು ಹೇಳುವಾಗ, ನಮ್ಮ ಹೃದಯಗಳು ಸಂತೋಷದಿಂದ: “ಆಮೆನ್. ಕರ್ತನಾದ ಯೇಸುವೇ, ಬಾ!” ಎಂದು ಉತ್ತರ ನೀಡಬೇಕು (ಪ್ರಕ 22:20).

ಕರ್ತನು ತನ್ನ ಜನರಿಗಾಗಿ ಸಿದ್ಧಪಡಿಸಿರುವ ಮಹಿಮೆಯುಳ್ಳ ಸ್ಥಳವನ್ನು ತನ್ನ ಶಿಷ್ಯನಾದ ಯೋಹಾನನಿಗೂ ತೋರಿಸಿದನು. ಯೋಹಾನನು “ತನ್ನ ಗಂಡನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು.” ದೇವರಿಂದ ಪರಲೋಕದಿಂದ ಇಳಿದುಬರುವ ನೂತನ ಯೆರೂಸಲೇಮ್ ಎಂಬ ಪವಿತ್ರ ನಗರವನ್ನು ಕಂಡನು (ಪ್ರಕ 21:2).

ನಮ್ಮನ್ನು ನೂತನ ಯೆರೂಸಲೇಮಿಗೆ ಕರೆದುಕೊಂಡು ಹೋಗುವ ಸಮಯ ಬಂದಾಗ, ಕರ್ತನು ಕೇವಲ ತನ್ನ ದೂತರನ್ನಾಗಲಿ ಕೆರೂಬಿಯರನ್ನಾಗಲಿ ಕಳುಹಿಸಿ ತಾನು ಪರಲೋಕದಲ್ಲೇ ಉಳಿಯುವುದಿಲ್ಲ. ಆತನು ತಾನೇ ನಮ್ಮನ್ನು ಸೇರಿಸಿಕೊಳ್ಳಲು ಬರುವನು. ಹಾಗಾದರೆ, ಆತನ ದೃಷ್ಟಿಯಲ್ಲಿ ನಾವು ಎಷ್ಟೊಂದು ಅಮೂಲ್ಯರಾಗಿರಬೇಕು! ವಧುವು ಸಿದ್ಧವಾದಾಗ, ವರನು ತಾನೇ ಆಕೆಯನ್ನು ಸೇರಿಸಿಕೊಳ್ಳಲು ಬರಬೇಡವೇ?

ಪ್ರೀತಿಯ ದೇವರ ಮಕ್ಕಳೇ, ಯೇಸು ನಿಮಗಾಗಿ ಸ್ಥಳವನ್ನು ಸಿದ್ಧಮಾಡಲು ಹೋಗಿದ್ದಾನೆ. ಮತ್ತು ತಂದೆಯ ಪರಿಪೂರ್ಣ ಯೋಜನೆಯಂತೆ ಎಲ್ಲವೂ ಸಿದ್ಧವಾದಾಗ, ಆತನು ಮತ್ತೆ ಬಂದು ನಿಮ್ಮನ್ನು ತನ್ನ ಬಳಿಗೆ ಸೇರಿಸಿಕೊಳ್ಳುವನು.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಆಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವೆವು; ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.” (1 ಥೆಸ 4:17)

Leave A Comment

Your Comment
All comments are held for moderation.