ಅಕ್ಟೋಬರ್ 13 – ನಂಬಿಕೆಯ ನೀತಿ!
“ಅಬ್ರಾಮನು ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಿದನು.” (ಆದಿ 15:6)
ನೀತಿಯು ನಂಬಿಕೆಯ ಮೂಲಕ ಬರುತ್ತದೆ (ರೋಮಾ 10:6). ಒಬ್ಬ ವ್ಯಕ್ತಿಯು ಎಷ್ಟು ಹೆಚ್ಚು ಕರ್ತನಲ್ಲಿ ನಂಬಿಕೆ ಇಟ್ಟು ಆತನನ್ನು ಅವಲಂಬಿಸುತ್ತಾನೋ, ಅಷ್ಟು ಹೆಚ್ಚು ಅವನು ದೇವರ ನೀತಿಯನ್ನು ಬಾಧ್ಯತೆಯಾಗಿ ಪಡೆದುಕೊಳ್ಳುತ್ತಾನೆ. ಕರ್ತನು ತಾನೇ ಅವನಿಗೆ ನೀತಿಯ ಅಂಗಿಯನ್ನು ತೊಡಿಸುತ್ತಾನೆ (ಯೆಶಾ 61:10).
ಒಬ್ಬ ವ್ಯಕ್ತಿಯು ರಕ್ಷಣೆ ಹೊಂದುವ ಮೊದಲು, ಅವನು ತನ್ನ ಸ್ವಂತ ನೀತಿಯನ್ನು ಅವಲಂಬಿಸಲು ಬಯಸುತ್ತಾನೆ. ಆದರೆ ದೇವರ ವಾಕ್ಯವು ಅಂತಹ ನೀತಿಯನ್ನು ಕೊಳಕು ಬಟ್ಟೆಗೆ ಹೋಲಿಸುತ್ತವೆ. ಅವನು ಆ ಕೊಳಕು ಬಟ್ಟೆಗಳನ್ನು ಬದಿಗಿಟ್ಟು ಕ್ರಿಸ್ತನ ನೀತಿಯನ್ನು ಧರಿಸಿಕೊಂಡಾಗ, ಅವನು ದೇವರ ದೃಷ್ಟಿಯಲ್ಲಿ ನೀತಿವಂತನೆಂದು ಎಣಿಸಲ್ಪಡುವ ಉನ್ನತವಾದ ಸ್ಥಾನಕ್ಕೆ ಪ್ರವೇಶಿಸುತ್ತಾನೆ.
ಒಬ್ಬ ಬಡ ಭಿಕ್ಷುಕ ಹುಡುಗನ ಕುರಿತಾದ ಒಂದು ಹಳೆಯ ಕಥೆಯಿದೆ; ಅವನು ತೆಂಗಿನಕಾಯಿಯ ಸರಳವಾದ ಚಿಪ್ಪನ್ನು ಪಿಟೀಲಿನಂತಹ ವಸ್ತುವಾಗಿ ರೂಪಿಸಿ ಅದರಿಂದ ಸುಂದರವಾದ ಸಂಗೀತವನ್ನು ಹೊರಡಿಸುತ್ತಿದ್ದನು. ಒಂದು ದಿನ, ಶ್ರೀಮಂತನೊಬ್ಬನ ಮಗನು ಆ ಹುಡುಗನನ್ನು ನೋಡಿ ತನ್ನ ಭವ್ಯವಾದ ಮಹಲ್ಗೆ ಆಹ್ವಾನಿಸಿದನು. ಅವನು ಆ ಹುಡುಗನ ಸಂಗೀತವನ್ನು ಆನಂದದಿಂದ ಕೇಳಿ ಅವನೊಂದಿಗೆ ಆಟವಾಡಿದನು. ಸ್ವಲ್ಪ ಸಮಯದಲ್ಲೇ ಇಬ್ಬರೂ ಒಳ್ಳೆಯ ಸ್ನೇಹಿತರಾದರು.
ಹಠಾತ್ತನೆ, ಶ್ರೀಮಂತ ತಂದೆಯು ಕೋಣೆಯೊಳಗೆ ಪ್ರವೇಶಿಸಿದನು. ಆ ಬಡ ಹುಡುಗನು ತನ್ನ ಮನೆಯ ದುಬಾರಿ ಸೋಫಾಗಳಲ್ಲಿ ಒಂದರ ಮೇಲೆ ಕುಳಿತಿರುವುದನ್ನು ನೋಡಿದಾಗ, ಅವನಿಗೆ ಬಹಳ ಕೋಪ ಬಂದಿತು. “ಈ ಹುಡುಗ ಯಾರು?” ಎಂದು ಅವನು ಕೇಳಿದನು. ಕಣ್ಣೀರಿನಿಂದ ತುಂಬಿದ ಕಣ್ಣುಗಳಿಂದ ಅವನ ಮಗನು ಉತ್ತರಿಸಿದನು: “ಅಪ್ಪಾ, ದಯವಿಟ್ಟು ಕೋಪಗೊಳ್ಳಬೇಡಿರಿ. ಇವನು ನನ್ನ ಸ್ನೇಹಿತ. ಅಪ್ಪಾ, ನಾನು ಇವರನ್ನು ಪ್ರೀತಿಸುತ್ತೇನೆ.”
ತಂದೆಯು ತನ್ನ ಮಗನ ಕಣ್ಣೀರನ್ನು ಕಂಡಾಗ, ಅವನ ಕೋಪವು ತಗ್ಗಿತು. ಅವನು ಹೇಳಿದನು: “ಮಗನೆ, ಇವನು ನಿನ್ನ ಸ್ನೇಹಿತನಾಗಿದ್ದರೆ, ಇವನನ್ನು ಸ್ನಾನ ಮಾಡಿಸಿ ಶುದ್ಧಗೊಳಿಸು ಮತ್ತು ನಿನ್ನ ಬಟ್ಟೆಗಳನ್ನು ಇವನಿಗೆ ಕೊಡು. ಇವನು ನಿನ್ನಂತೆ ಸುಂದರವಾಗಿ ಧರಿಸಿಕೊಂಡಿದ್ದರೆ, ಇವನನ್ನು ನನ್ನ ಮನೆಗೆ ಪ್ರೀತಿಯಿಂದ ಸ್ವಾಗತಿಸುತ್ತೇನೆ.”
ಕ್ರಿಸ್ತನು ನಮಗಾಗಿ ಮಾಡಿರುವ ಕಾರ್ಯಕ್ಕೆ ಇದು ಎಷ್ಟು ಸುಂದರವಾದ ಚಿತ್ರಣವಾಗಿದೆ! ನೀವು ತಂದೆಯ ಸನ್ನಿಧಿಗೆ ಬರುವಂತೆ ದೇವಕುಮಾರನು ತನ್ನ ನೀತಿಯಿಂದ ನಿಮ್ಮನ್ನು ಧರಿಸಿಸುತ್ತಾನೆ. ನೀವು ದೀಕ್ಷಾಸ್ನಾನ ಪಡೆದಾಗ, ನೀವು ಕ್ರಿಸ್ತನನ್ನು ಧರಿಸಿಕೊಳ್ಳುತ್ತೀರಿ: “ಕ್ರಿಸ್ತನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿರಿ.” (ಗಲಾತ್ಯ 3:27)
ಕ್ರಿಸ್ತನೆಂಬ ದೇವಕುಮಾರನು ತನ್ನ ರಕ್ತದಿಂದ ನಿಮ್ಮನ್ನು ತೊಳೆದು, ಪರಿಶುದ್ಧಗೊಳಿಸಿ, ನೀತಿವಂತರನ್ನಾಗಿ ಮಾಡಿ, ತನ್ನ ನೀತಿಯ ಅಂಗಿಯನ್ನು ನಿಮಗೆ ತೊಡಿಸಿದ್ದಾನೆ. ಆತನು ರಕ್ಷಣೆಯ ವಸ್ತ್ರದೊಂದಿಗೆ ನಿಮ್ಮ ಬಳಿಗೆ ಬಂದು, “ನನ್ನ ಸ್ನೇಹಿತನೇ, ಈ ವಸ್ತ್ರವನ್ನು ನಿನಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾಗಿದೆ” ಎಂದು ಹೇಳುವಂತಿದೆ.
ಏದೆನ್ ತೋಟದಲ್ಲಿ, ದೇವರು ಆದಾಮ ಹವ್ವರ ಸ್ವಂತ ಸಿದ್ಧತೆಯ ವಸ್ತ್ರಗಳನ್ನು ತೆಗೆದುಹಾಕಿ ಅವರಿಗೆ ಚರ್ಮದ ಅಂಗಿಗಳನ್ನು ತೊಡಿಸಿದನು. ಅದೇ ರೀತಿಯಲ್ಲಿ, ಇಂದು ಆತನು ನಮ್ಮ ಹಳೆಯ ಸ್ವಯಂ-ನೀತಿಯ ಕೊಳಕು ಬಟ್ಟೆಗಳನ್ನು ತೆಗೆದುಹಾಕಿ, ಕ್ರಿಸ್ತನ ನೀತಿಯಿಂದ ನಮ್ಮನ್ನು ಧರಿಸಿಸುತ್ತಾನೆ.
ನಮ್ಮ ಸ್ವ ನೀತಿಯಿಂದ, ಧಾರ್ಮಿಕ ಪ್ರಯತ್ನಗಳಿಂದ ಅಥವಾ ಸ್ವಯಂ-ನೀತಿಯಿಂದ ನಾವು ಎಂದಿಗೂ ಸಾಧಿಸಲು ಸಾಧ್ಯವಿಲ್ಲದ್ದನ್ನು ಕ್ರಿಸ್ತನು ನಮಗಾಗಿ ಸಾಧಿಸಿದ್ದಾನೆ.
ಪ್ರೀತಿಯ ದೇವರ ಮಕ್ಕಳೇ, ಕರ್ತನ ನೀತಿಯನ್ನು ಧರಿಸಿಕೊಂಡ ನಂತರ, ನಿಮ್ಮ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಿರಿ. ನೀವು ರಾಜಾಧಿ ರಾಜನ ಮಕ್ಕಳು. ದೇವರ ಕುಟುಂಬದಲ್ಲಿ ದತ್ತು ಪುತ್ರರಾಗಿ ಮತ್ತು ಪುತ್ರಿಯರಾಗಿ ಸ್ವೀಕರಿಸಲ್ಪಟ್ಟಿದ್ದೀರಿ ಎಂದು ತಿಳಿದುಕೊಂಡು ನಿಮ್ಮ ತಲೆಯನ್ನು ಎತ್ತಿ ನಡೆಯಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಂಬುವವರೆಲ್ಲರಿಗೆ ನೀತಿಯನ್ನು ದೊರಕಿಸಿರುವ ಕ್ರಿಸ್ತನಿಂದಲೇ ಕರ್ಮಮಾರ್ಗಕ್ಕೆ ಅಂತ್ಯವಾಯಿತು.” (ರೋಮಾ 10:4)