ಮೇ 27 –ಒಂದನ್ನು ಆರಿಸಿಕೋ!
“ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ; ಅವುಗಳಲ್ಲಿ ಯಾವದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂದು ಯೆಹೋವನು ಅನ್ನುತ್ತಾನೆ.” (2 ಸಮು 24:12)
ಕರ್ತನು, “ಒಂದನ್ನು ಆರಿಸಿಕೋ” ಎಂದು ಹೇಳುತ್ತಾರೆ. ನಮ್ಮ ಮುಂದೆ ಅನೇಕ ವಿಷಯಗಳು ಇರಬಹುದು: ಸಮಸ್ಯೆಗಳು ಮತ್ತು ಹೋರಾಟಗಳು, ಶೋಧನೆಗಳು ಮತ್ತು ಉರುಳುಗಳು ಅಥವಾ ವಿಭಿನ್ನ ಮಾರ್ಗಗಳು ಮತ್ತು ಆಯ್ಕೆಗಳು. ಆದರೆ ಪ್ರಶ್ನೆಯೇನೆಂದರೆ: ನೀವು ಏನನ್ನು ಆರಿಸಿಕೊಳ್ಳುವಿರಿ?
ಕರ್ತನು ಪ್ರೀತಿಯಿಂದ ಹತ್ತಿರ ಬಂದು, “ಒಂದನ್ನು ಆರಿಸಿಕೋ, ನಾನು ಅದನ್ನು ನಿನಗಾಗಿ ಮಾಡುವೆನು” ಎನ್ನುತ್ತಾರೆ. ಆದ್ದರಿಂದ ಗೊಂದಲಕ್ಕಾಗಲಿ ಅಥವಾ ಚಿಂತೆಗಾಗಲಿ ಯಾವುದೇ ಅಗತ್ಯವಿಲ್ಲ.
ಕಾರ್ಮೆಲ್ ಪರ್ವತದ ಮೇಲೆ ಎಲೀಯನು ಜನರಿಗೆ ಸವಾಲು ಹಾಕಿದನು: “ನೀವು ಬಾಳನನ್ನು ಆರಿಸಿಕೊಳ್ಳುವಿರಾ? ಅಥವಾ ಜೀವವುಳ್ಳ ದೇವರನ್ನೋ?”. ಆದರೆ ಜನರು ಮೌನವಾಗಿದ್ದರು.
ಕಾನಾನನ್ನು ಪ್ರವೇಶಿಸಿದ ನಂತರ ಯೆಹೋಶುವನು, “ನೀವು ಯಾರನ್ನು ಸೇವಿಸಬೇಕೆಂದಿರುವಿರಿ?” ಎಂದು ಕೇಳಿದನು. ನಂತರ ಅವನು ತನ್ನ ಸ್ವಂತ ಆಯ್ಕೆಯನ್ನು ಹೀಗೆ ಘೋಷಿಸಿದನು: “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವೆಮಾಡುವೆವು ಅಂದನು.” (ಯೆಹೋ 24:15)
ದಾವೀದನು ಒಂದು ವಿಷಯವನ್ನು ಆರಿಸಿಕೊಂಡನು: “ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನ ಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು…” (ಕೀರ್ತ 27:4)
ಮಾರ್ಥಳು ಆ ಒಂದು ಉತ್ತಮವಾದದ್ದನ್ನು ಆರಿಸಿಕೊಳ್ಳಲಿಲ್ಲ—ಅವಳು ಚಿಂತೆಗಳಿಂದ ಮತ್ತು ಕೆಲಸಗಳಿಂದ ಗೊಂದಲಕ್ಕೊಳಗಾಗಿದ್ದಳು. ಆದರೆ ಮರಿಯಳು ಉತ್ತಮವಾದ ಭಾಗವನ್ನು ಆರಿಸಿಕೊಂಡಳು—ಅದು ಅವಳಿಂದ ಎಂದಿಗೂ ತಗೆಯಲ್ಪಡುವುದಿಲ್ಲ.
ಅಪೊಸ್ತಲನಾದ ಪೌಲನು ಆ ಒಂದು ವಿಷಯವನ್ನು ಆರಿಸಿಕೊಂಡನು: “ಸಹೋದರರೇ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆ ಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗಿರಿಮಾಡಿಕೊಂಡು ಓಡುತ್ತಾ ಇದ್ದೇನೆ.” (ಫಿಲಿಪ್ಪಿಯವರಿಗೆ 3:13,14). ಮತ್ತು ಅವನು ಕ್ರಿಸ್ತ ಯೇಸುವಿನ ಕಡೆಗೆ ವಿಜಯದ ಓಟವನ್ನು ಓಡಿದನು.
ಒಂದು ದಿನ, ಕರ್ತನು ಸೊಲೊಮೋನನಿಗೆ ಕಾಣಿಸಿಕೊಂಡು, “ನಿನಗೆ ಯಾವ ವರ ಬೇಕು ಕೇಳಿಕೋ?”ಅಂದನು (1 ಅರಸು 3:5). ಸೊಲೊಮೋನನು ತನ್ನನ್ನು ತಗ್ಗಿಸಿಕೊಂಡು, “ಓ ದೇವರೇ, ನಿನ್ನ ಜನರಿಗೆ ನ್ಯಾಯತೀರಿಸಲು ನಿನ್ನ ದಾಸನಿಗೆ ವಿವೇಕವುಳ್ಳ ಹೃದಯವನ್ನು ದಯಪಾಲಿಸು” ಎಂದು ಪ್ರಾರ್ಥಿಸಿದನು. ಈ ನಮ್ರತೆಯು ಕರ್ತನ ದೃಷ್ಟಿಗೆ ಪ್ರಸನ್ನವಾಗಿತ್ತು.
ಅರಸನಾದ ಅಹಷ್ವೇರೋಷನು ಒಮ್ಮೆ ಎಸ್ತೇರ್ ರಾಣಿಗೆ, “ನಿನ್ನ ಬೇಡಿಕೆ ಏನು? ರಾಜ್ಯದ ಅರ್ಧದಷ್ಟಾದರೂ ಅದು ನಿನಗೆ ಕೊಡಲ್ಪಡುವದು!” ಎಂದನು (ಎಸ್ತೇರ 5:3). ಎಸ್ತೇರಳು ಮಾಡಿದ ಆ ಒಂದು ವಿನಂತಿಯು ಎಲ್ಲಾ ಯಹೂದ್ಯರಿಗೆ ಬಿಡುಗಡೆಯನ್ನು ತಂದಿತು. ಅವರ ದುಃಖವು ಆನಂದವಾಗಿ ಮಾರ್ಪಟ್ಟಿತು.
ಪ್ರಿಯ ದೇವರ ಮಕ್ಕಳೇ, ಆ ಒಂದು ಉತ್ತಮವಾದದ್ದನ್ನು ಆರಿಸಿಕೊಳ್ಳಿ. ಕರ್ತನು ಖಂಡಿತವಾಗಿಯೂ ಅದನ್ನು ನಿಮಗಾಗಿ ಮಾಡುವರು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಸಮಾಧಾನದಿಂದ ಹೋಗು; ಇಸ್ರಾಯೇಲ್ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ.” (1 ಸಮು 1:17)