ಜೂನ್ 18 – ಮರೆತು ಹೋಗಿಲ್ಲ!
“ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತು ಹೋಗುವದಿಲ್ಲ.” (ಲೂಕ 12:6)
ಕರ್ತನ ಮಾತುಗಳು ನಮ್ಮನ್ನು ಎಷ್ಟು ಅದ್ಭುತವಾಗಿ ಸಾಂತ್ವನಗೊಳಿಸುತ್ತವೆ! “ಆಕಾಶದ ಪಕ್ಷಿಗಳನ್ನು ನೋಡಿರಿ” ಎಂದು ಕರ್ತನು ಹೇಳಿದನು. ಹೌದು, ನಾವು ಆಕಾಶದ ಪಕ್ಷಿಗಳನ್ನು ಗಮನಿಸಿದಾಗ, ಅವುಗಳನ್ನು ನೋಡಿಕೊಳ್ಳುವ ನಮ್ಮ ಪರಲೋಕದ ತಂದೆಯು ನಮ್ಮನ್ನು ಇನ್ನೂ ಹೆಚ್ಚಿನ ಪ್ರೀತಿ ಮತ್ತು ಕಾಳಜಿಯಿಂದ ಪೋಷಿಸುತ್ತಾನೆ ಎಂಬ ನಂಬಿಕೆ ನಮ್ಮಲ್ಲಿ ಉಂಟಾಗುತ್ತದೆ.
ಪಕ್ಷಿಗಳಲ್ಲಿ ಗುಬ್ಬಿಯು ಅತ್ಯಂತ ಬಲಹೀನವಾದವುಗಳಲ್ಲಿ ಒಂದಾಗಿದೆ. ಅದರ ರೆಕ್ಕೆಗಳು ನವಿಲಿನಂತೆ ಸುಂದರವಾಗಿಲ್ಲ. ಅದರ ಧ್ವನಿಯು ಕೋಗಿಲೆಯಂತೆ ಮಧುರವಾಗಿಲ್ಲ. ಅದು ತುಂಬಾ ಸೂಕ್ಷ್ಮವಾಗಿದ್ದು, ಹೆಚ್ಚಾಗಿ ಮನುಷ್ಯರ ವಾಸಸ್ಥಳಗಳ ಬಳಿಯೇ ಆಶ್ರಯವನ್ನು ಹುಡುಕುತ್ತದೆ.
ಆದಾಗ್ಯೂ ಕರ್ತನೇ ಈ ಗುಬ್ಬಿಗಳನ್ನು ಪೋಷಿಸುತ್ತಾನೆ. ಈ ಲೋಕವು ಅವುಗಳನ್ನು ಅಗ್ಗದ ಬೆಲೆಗೆ ಕೊಂಡು ಮಾರಿದರೂ, ದೇವರ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ.
ಗುಬ್ಬಿಯಂತೆ ಈ ಲೋಕದಲ್ಲಿ ಸಾವಿರಾರು ಪಕ್ಷಿಗಳಿವೆ — ಸಣ್ಣವು ಮತ್ತು ದೊಡ್ಡವು, ಪ್ರತಿಯೊಂದೂ ವಿಭಿನ್ನ ಅಭ್ಯಾಸ ಮತ್ತು ಗುಣಲಕ್ಷಣಗಳನ್ನು ಹೊಂದಿವೆ. ಆದರೂ ನಮ್ಮ ಪರಲೋಕದ ತಂದೆಯು ಪ್ರತಿದಿನ ಅವುಗಳಲ್ಲಿ ಪ್ರತಿಯೊಂದಕ್ಕೂ ಆಹಾರವನ್ನು ನೀಡುತ್ತಾನೆ. ಅವು ಭವಿಷ್ಯತ್ತಿನ ಬಗ್ಗೆ ಚಿಂತಿಸುವುದೂ ಇಲ್ಲ, ಯಾವುದೇ ವಸ್ತುಗಳನ್ನು ಸಂಗ್ರಹಿಸಿಡುವುದೂ ಇಲ್ಲ.
ಪ್ರೀತಿಯ ದೇವರ ಮಕ್ಕಳೇ, ಅದೇ ದೇವರು ನಿಮಗೂ ಹೇಗೆ ಒದಗಿಸಬೇಕೆಂದು ಬಲ್ಲವರಾಗಿದ್ದಾರೆ. ಆತನ ಕಣ್ಣುಗಳು ಮತ್ತು ಆಲೋಚನೆಗಳು ನಿಮ್ಮ ಜೀವನದ ಪ್ರತಿಯೊಂದು ಕಾರ್ಯಗಳ ಮೇಲೆ ಕೇಂದ್ರಿಕರಿಸಲ್ಪಟ್ಟಿರುತ್ತದೆ. ಇದು ಎಂತಹ ಮಹಿಮೆಯುಳ್ಳ ಸತ್ಯವಲ್ಲವೇ!
ಆತನು ಅರಣ್ಯದಲ್ಲಿ ಇಸ್ರಾಯೇಲ್ಯರ ಮಹಾಸಮೂಹವನ್ನು ಪೋಷಿಸಲಿಲ್ಲವೇ? ಆತನು ಪ್ರತಿದಿನ ಆಕಾಶದಿಂದ ಮನ್ನವನ್ನು ಸುರಿಸಲಿಲ್ಲವೇ? ಅವರ ಬಿಡಾರಗಳ ಸುತ್ತಲೂ ಲಾವಕ್ಕಿಗಳು ಬೀಳುವಂತೆ ಮಾಡಲಿಲ್ಲವೇ? (ಧರ್ಮೋ 2:7)
ಎಲೀಯನನ್ನು ನೋಡಿರಿ. ಕ್ಷಾಮದ ಸಮಯದಲ್ಲಿ, ಕರ್ತನು ಕಾಗೆಗಳ ಮೂಲಕ ಅವನಿಗೆ ಅದ್ಭುತವಾಗಿ ಆಹಾರವನ್ನು ಉಣಿಸಿದನು. ನೀರಿಗಾಗಿ, ದೇವರು ಕೆರೀತ್ ಹಳ್ಳವನ್ನು ಒದಗಿಸಿದನು. ಕ್ಷಾಮವು ಇನ್ನು ತೀವ್ರವಾದಾಗ, ಕರ್ತನು ಚಾರೆಪ್ತದ ವಿಧವೆಯ ಮನೆಯಲ್ಲಿದ್ದ ಹಿಟ್ಟು ಮತ್ತು ಎಣ್ಣೆಯು ಮುಗಿದುಹೋಗದಂತೆ ಮಾಡುವ ಮೂಲಕ ತನ್ನ ಪ್ರವಾದಿಯನ್ನು ಪೋಷಿಸಿದನು. ಎಲೀಯನು ಅರಣ್ಯದಲ್ಲಿದ್ದಾಗ, ದೇವರು ಅವನಿಗೆ ಆಹಾರವನ್ನು ನೀಡಲು ಒಬ್ಬ ದೂತನನ್ನೇ ಕಳುಹಿಸಿದನು. ಓ, ನಮ್ಮ ಕರ್ತನ ಪ್ರೀತಿ ಮತ್ತು ಕರುಣೆ ಎಷ್ಟು ದೊಡ್ಡದಾಗಿದೆ!
ಈಗ ಹೊಸ ಒಡಂಬಡಿಕೆಗೆ ಬರೋಣ. ಯೇಸು ಕ್ರಿಸ್ತನು ಅರಣ್ಯದಲ್ಲಿ ಹಗಲಿರುಳು ಬೋಧಿಸುತ್ತಿದ್ದಾಗ, ಆತನು ಐದು ಸಾವಿರ ಜನರಿಗೆ ಉಣಿಸಿದನು. ಕೇವಲ ಐದು ರೊಟ್ಟಿ ಮತ್ತು ಎರಡು ಮೀನುಗಳಿಂದ ಆತನು ಇಡೀ ಜನಸಮೂಹಕ್ಕೆ ಆಹಾರವನ್ನು ಒದಗಿಸಿದನು. ಹೌದು, ಅದೇ ದೇವರು ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಲು ಶಕ್ತನಾಗಿದ್ದಾನೆ.
ಆದ್ದರಿಂದಲೇ ಅಪೊಸ್ತಲನಾದ ಪೌಲನು ಹೀಗೆ ಬರೆದನು: “ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ಚರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು.” (ಫಿಲಿ 4:19)
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಸದ್ಭಕ್ತರಿಗೋಸ್ಕರ ನೀನು ಇಟ್ಟುಕೊಂಡಿರುವ ಮೇಲೂ ಆಶ್ರಿತರಿಗೋಸ್ಕರ ನೀನು ಎಲ್ಲರ ಮುಂದೆ ಮಾಡಿದ ಉಪಕಾರಗಳೂ ಎಷ್ಟೋ ವಿಶೇಷವಾಗಿವೆ!” (ಕೀರ್ತ 31:19)