ಜುಲೈ 29 – ಜನರ ಮಧ್ಯೆ ಸಂಚರಿಸುವ ಕರ್ತನು!
“ಯೆಹೋವ ದೇವರು ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿದ್ದಾಗ ಆ ಸ್ತ್ರೀ ಪುರುಷರು ಆತನ ಸಪ್ಪಳವನ್ನು ಕೇಳಿ ಆತನಿಗೆ ಕಾಣಿಸಬಾರದೆಂದು ತೋಟದ ಮರಗಳ ಹಿಂದೆ ಅಡಗಿಕೊಂಡರು.” (ಆದಿಕಾಂಡ 3:8)
ನಮ್ಮ ಕರ್ತನು ತನ್ನ ಜನರ ಮಧ್ಯೆ ಸಂಚರಿಸುವವನಾಗಿದ್ದಾನೆ. ಆತನು ತನ್ನ ಮಕ್ಕಳ ಮನೆಗಳಿಗೂ ಮತ್ತು ಅವರು ಆರಾಧಿಸುವ ಸ್ಥಳಗಳಿಗೂ ಭೇಟಿ ನೀಡಲು ಇಳಿದು ಬರುತ್ತಾನೆ. ಆತನ ಹೆಸರಿನಲ್ಲಿ ಇಬ್ಬರು ಅಥವಾ ಮೂವರು ಎಲ್ಲಿ ಸೇರಿಬರುತ್ತಾರೋ, ಅಲ್ಲಿ ಆತನ ಪ್ರಸನ್ನತೆಯು ಇಳಿದು ಬರುತ್ತದೆ. ಕರ್ತನು ತಾನೇ ಬಂದು ಅವರ ಮಧ್ಯೆ ಸಂಚರಿಸಲು ಪ್ರಾರಂಭಿಸುತ್ತಾನೆ.
ಕರ್ತನು ಹೀಗೆ ವಾಗ್ದಾನ ಮಾಡಿದ್ದಾನೆ: “ನನ್ನ ನಾಮಸ್ಮರಣೆಯನ್ನು ಮಾಡುವ ಪ್ರತಿಯೊಂದು ಸ್ಥಳಕ್ಕೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.” ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಸರ್ವಶಕ್ತನಾದ ದೇವರು ಮನುಷ್ಯರೊಂದಿಗೆ ವಾಸಿಸಲು ಮತ್ತು ಅವರನ್ನು ಆಶೀರ್ವದಿಸಲು ಅವರ ಮಧ್ಯೆ ಸಂಚರಿಸಲು ಅಪೇಕ್ಷಿಸುತ್ತಾನೆ ಎಂಬುದು ಎಷ್ಟು ಅದ್ಭುತ!
ಕರ್ತನು ಸಿಂಹಗಳ ಗವಿಯೊಳಗೂ ನಡೆದು ಬರುವನೇ? ಖಂಡಿತವಾಗಿಯೂ ಬರುತ್ತಾನೆ. ಆತನು ದಾನಿಯೇಲನಿಗೆ ಸಹಾಯ ಮಾಡಲು ಮತ್ತು ಸಿಂಹಗಳ ಬಾಯನ್ನು ಮುಚ್ಚಲು ಇಳಿದು ಬಂದನು. ಆತನು ಶದ್ರಕ್, ಮೇಷಕ್ ಮತ್ತು ಅಬೇದ್ನೆಗೋ ಅವರೊಂದಿಗೆ ಬಿಡುಗಡೆ ಕೊಡುವವನಾಗಿ ಉರಿಯುವ ಬೆಂಕಿಯ ಆವಿಯ ನಡುವೆ ಸಂಚರಿಸಿದನು. ಆತನು ಯೇಸು ಕ್ರಿಸ್ತನಾಗಿ ಭೂಮಿಗೆ ಬಂದಾಗ ಸೊಲೊಮೋನನ ಮಂಟಪದಲ್ಲಿ ಸಂಚರಿಸಿದನು (ಯೋಹಾ 10:23).
ತನ್ನ ಪುನರುತ್ಥಾನದ ನಂತರ, ನಿಲುವಂಗಿಯನ್ನು ಧರಿಸಿ, ಎದೆಗೆ ಬಂಗಾರದ ಪಟ್ಟಿಯನ್ನು ಕಟ್ಟಿಕೊಂಡವನಾಗಿ ಆತನು ಬಂಗಾರದ ದೀಪಸ್ತಂಭಗಳ ಮಧ್ಯೆ ಸಂಚರಿಸುತ್ತಿರುವುದು ಕಂಡುಬಂದಿತು (ಪ್ರಕ 1:13). ಈ ದೀಪಸ್ತಂಭಗಳು ಸಭೆಗಳನ್ನು ಪ್ರತಿನಿಧಿಸುವಂತೆಯೇ, ಕರ್ತನಿಗಾಗಿ ಬೆಳಗಲು ತಮ್ಮನ್ನು ಒಪ್ಪಿಸಿಕೊಟ್ಟವರನ್ನೂ ಸಂಕೇತಿಸುತ್ತವೆ.
“ಏಳು, ಪ್ರಕಾಶಿಸು; ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.” (ಯೆಶಾ 60:1)
ದೀಪಸ್ತಂಭಗಳ ಮಧ್ಯೆ ಯಾರು ಸಂಚರಿಸಬಲ್ಲರು? ದೇವದರ್ಶನ ಗುಡಾರದಲ್ಲಿ ಯಾಜಕರು ಮಾತ್ರ ದೀಪಸ್ತಂಭಗಳ ಮಧ್ಯೆ ಸೇವೆ ಮಾಡಬಹುದಿತ್ತು. ಯೇಸು ಮರಣದಿಂದ ಪುನರುತ್ತಾನ ಹೊಂದಿದ ದಿನದಿಂದ, ಆತನು ನಮ್ಮ ಮಹಾ ಪ್ರಧಾನ ಯಾಜಕನೆಂದು ಘೋಷಿಸಲ್ಪಟ್ಟಿದ್ದಾನೆ (ಇಬ್ರಿ 5:10). ಮೃತ್ಯಂಜಯನಾದ ಕ್ರಿಸ್ತನು ನಮ್ಮ ಪ್ರಧಾನ ಯಾಜಕನಾಗಿ ನಮ್ಮ ಮಧ್ಯೆ ಸಂಚರಿಸುತ್ತಾ, ಆತನ ಮಹಿಮೆಗಾಗಿ ಬೆಳಗಲು ನಮಗೆ ಶಕ್ತಿ ನೀಡುತ್ತಲೇ ಇದ್ದಾನೆ.
ದೀಪಸ್ತಂಭಗಳ ಮಧ್ಯೆ ಸಂಚರಿಸುವಾಗ ಯೇಸು ಏನು ಮಾಡುತ್ತಾನೆ? ಮೊದಲನೆಯದಾಗಿ, ಆತನು ನಮ್ಮನ್ನು ಬೆಳಗಿಸುತ್ತಾನೆ. ಲೋಕದೊಳಗೆ ಬರುವ ಪ್ರತಿಯೊಬ್ಬ ಮನುಷ್ಯನನ್ನು ಬೆಳಗಿಸುವ ನಿಜವಾದ ಬೆಳಕು ಆತನೇ ಆಗಿದ್ದಾನೆ. ಆತನ ಜನರು ಪ್ರಕಾಶಮಾನವಾಗಿ ಉರಿಯುವಂತೆ ಆತನು ನಿರಂತರವಾಗಿ ಅಭಿಷೇಕದ ತೈಲವನ್ನು ಸುರಿಯುತ್ತಾನೆ. ಆತನು ಮಂದವಾಗಿ ಉರಿಯುವ ಬತ್ತಿಯನ್ನು ಬಲಪಡಿಸುತ್ತಾನೆ ಮತ್ತು ನಮ್ಮೊಳಗಿರುವ ಆತ್ಮದ ವರಗಳನ್ನು ಪುನರುಜ್ಜೀವನಗೊಳಿಸುತ್ತಾನೆ.
ಅದೇ ರೀತಿ ಆತನು ಮತ್ತೊಂದು ಕಾರ್ಯವನ್ನೂ ಮಾಡುತ್ತಾನೆ. ಆತನು ಉಪಯೋಗವಿಲ್ಲದ ಬತ್ತಿಯನ್ನು ಕತ್ತರಿಸಿ ತೆಗೆಯುತ್ತಾನೆ. ನಮ್ಮ ಜೀವನದಲ್ಲಿ ಸ್ವಾರ್ಥ, ಹೆಮ್ಮೆ, ಅಹಂಕಾರ ಅಥವಾ ಸ್ವಯಂ-ಹೆಚ್ಚಿಸಿಕೊಳ್ಳುವದು ಕಂಡುಬಂದಾಗ, ನಮ್ಮ ಬೆಳಕು ಹೆಚ್ಚು ಸ್ಪಷ್ಟವಾಗಿ ಬೆಳಗುವಂತೆ ಆತನು ಪ್ರೀತಿಯಿಂದ ಅವುಗಳನ್ನು ತಿದ್ದಿ ಸರಿಪಡಿಸುತ್ತಾನೆ.
ಪ್ರಿಯ ದೇವರ ಮಕ್ಕಳೇ, ಕತ್ತಲೆಯಲ್ಲಿರುವ ಈ ಲೋಕಕ್ಕೆ ಕರ್ತನ ಬೆಳಕನ್ನು ತರಲು ನಾವು ಕರೆಯಲ್ಪಟ್ಟಿದ್ದೇವೆ. ಆತನು ನಮ್ಮ ಮಧ್ಯೆ ಸಂಚರಿಸಲು, ನಮ್ಮನ್ನು ಪರಿಶುದ್ಧಗೊಳಿಸಲು ಮತ್ತು ತನ್ನ ಮಹಿಮೆಗಾಗಿ ನಮ್ಮನ್ನು ಬೆಳಗಿಸಲು ನಾವು ಆತನಿಗೆ ಒಪ್ಪಿಸಿಕೊಡೋಣ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ದೇವರು ಬೆಳಕಾಗಿದ್ದಾನೆ, ಆತನಲ್ಲಿ ಎಷ್ಟು ಮಾತ್ರವೂ ಕತ್ತಲೆಯಿಲ್ಲ.” (1 ಯೋಹಾ 1:5)