ಆಗಸ್ಟ್ 29 – ಕರ್ತನೇ, ನೀನು ಯಾರು?
“ಅವನು– ಕರ್ತನೇ, ನೀನಾರು? ಎಂದು ಕೇಳಿದ್ದಕ್ಕೆ ಕರ್ತನು– “ನೀನು ಹಿಂಸೆಪಡಿಸುವ ಯೇಸುವೇ ನಾನು. ನೀನೆದ್ದು ಊರೋಳಕ್ಕೆ ಹೋಗು, ನೀನು ಮಾಡಬೇಕಾದದ್ದು ಅಲ್ಲಿ ನಿನಗೆ ತಿಳಿಸಲ್ಪಡುವದು” ಎಂದು ಹೇಳಿದನು ಮುಳ್ಳುಗೋಲಿಗೆ ಒದೆಯುವುದು ನಿನಗೆ ಕಷ್ಟ” ಎಂದನು. (ಅಪೊ ಕೃತ್ಯ 9:5)
ಯೇಸು ಯಾರೆಂದು ತಿಳಿಯಲು ಜಕ್ಕಾಯನು ಹಂಬಲಿಸಿದಾಗ, ಕರ್ತನು ತನ್ನನ್ನು ರಕ್ಷಕನೆಂದು ಅವನಿಗೆ ಪ್ರಕಟಪಡಿಸಿಕೊಂಡನು. ಆದರೆ ದಮಸ್ಕದ ದಾರಿಯಲ್ಲಿ ತನಗೆ ಕಾಣಿಸಿಕೊಂಡ ಆ ಮಹಿಮೆಯುಳ್ಳವನು ಯಾರೆಂದು ತಿಳಿಯಲು ಸೌಲನು ಅಪೇಕ್ಷಿಸಿದಾಗ, ಕರ್ತನು ತಕ್ಷಣವೇ ತನ್ನ ಕುರಿತು ಹೆಚ್ಚೇನೂ ಪ್ರಕಟಿಸಲಿಲ್ಲ. ಬದಲಾಗಿ, ಆತನು ಸೌಲನ ಸ್ವಂತ ಹೃದಯದ ನಿಜವಾದ ಸ್ಥಿತಿಯನ್ನು ಪ್ರಕಟಿಸಿದನು.
ಯೇಸು, “ಸೌಲನೇ, ನೀನು ನನ್ನನ್ನು ಹಿಂಸಿಸುತ್ತಿದ್ದೀ. ಮುಳ್ಳುಗೋಲಿಗೆ ಒದೆಯುವುದು ನಿನಗೆ ಕಷ್ಟ. ನೀನು ಹಿಂಸಿಸುವ ಯೇಸುವೇ ನಾನು” ಎಂದನು. ಆ ಮಾತುಗಳು ಸೌಲನ ಅಹಂಕಾರವನ್ನು ಧೂಳೀಪಟ ಮಾಡಿ, ಅವನ ಜೀವನವನ್ನು ಮಾರ್ಪಡಿಸಿದವು. ಕಾಲಕ್ರಮೇಣ, ಅವು ಅವನನ್ನು ಬಲವುಳ್ಳ ಅಪೊಸ್ತಲನಾದ ಪೌಲನನ್ನಾಗಿ ರೂಪಿಸಿದವು.
ಕೆಲವರಿಗೆ, ಕರ್ತನು ತನ್ನ ಹೆಸರುಗಳ ಮೂಲಕ ತನ್ನ ಸ್ವಭಾವವನ್ನು ಪ್ರಕಟಿಸುತ್ತಾನೆ. ಸತ್ಯವೇದವು ಹೀಗೆ ಘೋಷಿಸುತ್ತದೆ: “ಆತನ ಹೆಸರು ಅದ್ಭುತ ಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು.” (ಯೆಶಾ 9:6)
ಕರ್ತನು ಯಾರೆಂದು ವಿಶ್ವಾಸಿಗಳನ್ನು ಕೇಳಿದಾಗ, ಅವರು ಆಗಾಗ್ಗೆ ಆತನ ಗುಣಲಕ್ಷಣಗಳಿಗೆ ಅನುಗುಣವಾಗಿ ಆತನನ್ನು ವರ್ಣಿಸುತ್ತಾರೆ. ಆತನು ಒಳ್ಳೆಯವನು, ಪರಾಕ್ರಮಿಯು ಮತ್ತು ದಯಾಸಾಗರನಾಗಿದ್ದಾನೆಂದು ಅವರು ಸಾಕ್ಷಿ ಹೇಳುತ್ತಾರೆ.
ನಾವು ಕರ್ತನಿಗೆ ಎಷ್ಟು ಹತ್ತಿರವಾಗುತ್ತೇವೋ, ಅಷ್ಟಾಗಿ ನಮ್ಮ ಹೃದಯಗಳು ಕೃತಜ್ಞತೆಯಿಂದ ತುಳುಕಿ, “ಕರ್ತನು ಒಳ್ಳೆಯವನು!” ಎಂದು ಮತ್ತೆ ಮತ್ತೆ ಸಾರುವಂತೆ ಮಾಡುತ್ತದೆ. “ಯೆಹೋವನು ಸರ್ವೋತ್ತಮನೆಂದು ಅನುಭವಸವಿದು ನೋಡಿರಿ.” (ಕೀರ್ತನೆ 34:8)
ಆತನನ್ನು ತುಂಬಾ ಕ್ರೂರವಾಗಿ ಶಿಲುಬೆಗೇರಿಸಿದರೂ, ಆತನು ಅಪರಾಧಿಯಾಗಲಿ ಕೆಟ್ಟ ಮನುಷ್ಯನಾಗಲಿ ಆಗಿರಲಿಲ್ಲ. ಆತನು ಪರಿಪೂರ್ಣ ಒಳ್ಳೆಯವನಾಗಿದ್ದನು. ಆದರೂ, ನಮ್ಮ ಪಾಪಗಳ ನಿಮಿತ್ತ, ಪಾಪವಿಲ್ಲದ ಆತನು ನಮ್ಮ ಪ್ರಾಯಶ್ಚಿತ್ತಕ್ಕಾಗಿ ತಾನು ಬಲಿಯಾದನು. ಆತನು ನಿರಪರಾಧಿಯಾಗಿದ್ದರೂ, ಅಪರಾಧಿಯೋ ಎಂಬಂತೆ ಶಿಲುಬೆಯಲ್ಲಿ ತೂಗಾಡಿದನು. ಆತನು ನಿಜವಾಗಿಯೂ ಒಳ್ಳೆಯವನು.
ಪಿಲಾತನು ಆತನನ್ನು ವಿಚಾರಣೆ ಮಾಡಿದ ನಂತರ, ಆತನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ಪಿಲಾತನ ಹೆಂಡತಿ ಕೂಡ ಆ ನೀತಿವಂತನಿಗೆ ಯಾವ ಹಾನಿಯನ್ನೂ ಮಾಡಬೇಡವೆಂದು ತನ್ನ ಗಂಡನಲ್ಲಿ ಬೇಡಿಕೊಂಡಳು. ಹೌದು, ಆತನು ಉತ್ತಮನಾಗಿದ್ದಾನೆ.
ಎರಡನೆಯದಾಗಿ, ಕರ್ತನು ಒಳ್ಳೆಯವನು ಮಾತ್ರವಲ್ಲ – ಆತನು ಸರ್ವಶಕ್ತನಾಗಿದ್ದಾನೆ. “ನಾನು ಸರ್ವಶಕ್ತನಾದ ದೇವರು…” (ಆದಿ17:1) ಆತನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಸೃಷ್ಟಿಯೇ ಆತನ ಅನಂತ ಶಕ್ತಿಗೆ ಸಾಕ್ಷಿ ಹೇಳುತ್ತಲೇ ಇದೆ. ಆತನು ಮಾಡಿದ ಪ್ರತಿಯೊಂದು ಅದ್ಭುತವೂ ಆತನು ರೋಗಿಗಳನ್ನು ಗುಣಪಡಿಸಲು, ದೆವ್ವಗಳನ್ನು ಬಿಡಿಸಲು ಮತ್ತು ಸತ್ತವರನ್ನು ಎಬ್ಬಿಸಲು ಶಕ್ತನಾಗಿದ್ದಾನೆ ಎಂಬುದನ್ನು ಪ್ರಕಟಿಸುತ್ತದೆ. ಅದೇ ಸರ್ವಶಕ್ತನಾದ ಕರ್ತನು ಇಂದು ನಿನ್ನ ಜೀವನದಲ್ಲಿಯೂ ದೊಡ್ಡ ಅದ್ಭುತಗಳನ್ನು ಮಾಡಲು ಶಕ್ತನಾಗಿದ್ದಾನೆ.
ಮೂರನೆಯದಾಗಿ, ಕರ್ತನು ಕರುಣಾಸಂಪನ್ನನಾಗಿದ್ದಾನೆ ಮತ್ತು ಸಾವಿರ ತಲೆಮಾರುಗಳ ವರೆಗೂ ಸ್ಥಿರವಾದ ಕರುಣೆಯನ್ನು ತೋರಿಸುತ್ತಾನೆ. ಆತನ ಅಪಾರ ಕರುಣೆಯ ನಿಮಿತ್ತವೇ ಈ ಲೋಕವು ಇನ್ನೂ ಅಸ್ತಿತ್ವದಲ್ಲಿದೆ.
ಪ್ರಿಯ ದೇವ ಮಗುವೇ, ಕ್ರಿಸ್ತನ ಈ ಮೂರು ಸುಂದರ ಗುಣಗಳು – ಆತನ ಒಳ್ಳೆಯತನ, ಆತನ ಶಕ್ತಿ ಮತ್ತು ಆತನ ಕರುಣೆ – ನಿನ್ನ ಸ್ವಂತ ಜೀವನದಲ್ಲಿ ಹೆಚ್ಚೆಚ್ಚು ಸ್ಪಷ್ಟವಾಗಿ ಕಾಣಿಸಲಿ. ನೀನು ಆತನ ಸ್ವಭಾವವನ್ನು ಪ್ರತಿಫಲಿಸುವಾಗ, ನಿನ್ನನ್ನು ನೋಡುವ ಇತರರು ನಿನ್ನ ಜೀವನದ ಮೂಲಕ ತಂದೆಯಾದ ದೇವರ ಸೌಂದರ್ಯವನ್ನು ಕಾಣುವರು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು ಆಗಿದ್ದಾನೆ.” (ವಿಮೋ 34:6)