Appam, Appam - Kannada

ನವೆಂಬರ್ 12 – ದೇವರ ಅನುಮತಿಯ ಚಿತ್ತ!

“ಸ್ವಾಮಿ ಅದು ನನ್ನಿಂದಾಗದು; … ಆದರೆ ಬೆಟ್ಟಕ್ಕೆ ಓಡಿಹೋಗಲಾರೆನು: ನಾನು ಹೋಗುತ್ತಿರುವಾಗ ಆ ವಿಪತ್ತು ನನಗೂ ಉಂಟಾಗಿ ಸತ್ತೇನು” ಆದಿ 19:18–19

ದೇವರು ತಾನು ಆಡಿದ ಮಾತನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ, ಅಥವಾ ತನ್ನ ವಾಗ್ದಾನವನ್ನು ಬದಲಾಯಿಸುವುದಿಲ್ಲ. ಆದ್ದರಿಂದ, ಕರ್ತನು ನಿಮಗೆ ಏನನ್ನಾದರೂ ಮಾಡಲು ಹೇಳಿದ ನಂತರವೂ, “ಕರ್ತನೇ, ಆಗಲ್ಲ” ಎಂದು ಆತನೊಂದಿಗೆ ವಾದ ಮಾಡಬೇಡಿ. ಬೇರೆ ಏನನ್ನಾದರೂ ಮಾಡಲು ಆತನು ನಿಮಗೆ ಅನುಮತಿ ನೀಡಬೇಕೆಂದು ಸಲಹೆ ಮಾಡಬೇಡಿ. ಆತನ ಪರಿಪೂರ್ಣ ಚಿತ್ತದ ಕೇಂದ್ರದಲ್ಲಿ ನೆಲೆಸಿರುವುದೇ ನಿಮ್ಮ ಜೀವನಕ್ಕೆ ಮಹಾ ಆಶೀರ್ವಾದವನ್ನು ತರುತ್ತದೆ.

ಸೊದೋಮ್ ಗೊಮೋರ ಪಟ್ಟಣಗಳು ನಾಶವಾಗುವ ಹಂತದಲ್ಲಿದ್ದಾಗ, ಕರ್ತನು ಲೋಟನಿಗೆ, “ಓಡಿ ಹೋಗು, ಪ್ರಾಣವನ್ನು ಉಳಿಸಿಕೋ; ಹಿಂದಕ್ಕೆ ನೋಡಬೇಡ; ಈ ಪ್ರದೇಶದೊಳಗೆ ಎಲ್ಲಿಯೂ ನಿಲ್ಲದೇ ಬೆಟ್ಟದ ಸೀಮೆಗೆ ಓಡಿ ಹೋಗು; ನಿನಗೂ ನಾಶವುಂಟಾದೀತು” ಎಂದು ಹೇಳಿದನು (ಆದಿ 19:17).

ಹಿಂದೆ ನೋಡಕೂಡದೆಂಬ ಕರ್ತನ ಆಜ್ಞೆಗೆ ಲೋಟನ ಹೆಂಡತಿಯು ವಿಧೇಯಳಾಗಲು ಇಷ್ಟಪಡಲಿಲ್ಲ. ಅವಳು ಹಿಂದೆ ತಿರುಗಿ ನೋಡಿದಳು ಮತ್ತು ಉಪ್ಪಿನ ಸ್ತಂಭವಾದಳು. ಲೋಟನು ಸಹ ಕರ್ತನು ತನಗೆ ಸೂಚಿಸಿದಂತೆ ಬೆಟ್ಟಕ್ಕೆ ಹೋಗಲು ಇಷ್ಟಪಡಲಿಲ್ಲ. ಬದಲಾಗಿ, ಅವನು ಸಮೀಪದಲ್ಲಿದ್ದ ಚೋವಾರ್ ಪಟ್ಟಣಕ್ಕೆ ಹೋಗಲು ಬಯಸಿದನು. ಆ ಸಮಯದಲ್ಲಿ ಕರ್ತನು ಅವನಿಗೆ ಹಾಗೆ ಮಾಡಲು ಅನುಮತಿ ನೀಡಿದರೂ, ಆ ಸ್ಥಳವು ಲೋತನಿಗೆ ಆಶೀರ್ವಾದಕರವಾಗಿರಲಿಲ್ಲ.

ಎಲ್ಲಿ ದೇವರ ಪರಿಪೂರ್ಣ ಚಿತ್ತವಿರುತ್ತದೋ ಅಲ್ಲಿಆತನ ಅನುಮತಿಯ ಚಿತ್ತವೂ ಇರುತ್ತದೆ. ನಾವು ದೇವರ ಪರಿಪೂರ್ಣ ಚಿತ್ತದ ಕೇಂದ್ರದಲ್ಲಿರುವಾಗ, ಶಾಂತಿಯನ್ನೂ ಸಂತೋಷವನ್ನೂ ಅನುಭವಿಸುತ್ತೇವೆ. ಆದಾಗ್ಯೂ, ಕೆಲವೊಮ್ಮೆ ನಾವು ಆತನ ಪರಿಪೂರ್ಣ ಚಿತ್ತಕ್ಕೆ ಶರಣಾಗಲು ನಿರಾಕರಿಸಿ, “ಕರ್ತನೇ, ಆಗಲ್ಲ” ಎಂದು ನಮ್ಮದೇ ಇಷ್ಟಗಳನ್ನು ಸಾಧಿಸಲು ಮುಂದಾಗುತ್ತೇವೆ. ನಾವು ಹಾಗೆ ಮಾಡಿದಾಗ, ಆ ವಿಷಯದಲ್ಲಿ ನಮಗೆ ಶಾಂತಿಯೂ ಸಂತೋಷವೂ ಸಿಗುವುದಿಲ್ಲ.

ಇಸ್ರಾಯೇಲ್ಯರು ಪರಲೋಕದ ದೇವದೂತರ ಆಹಾರವಾದ ಮನ್ನಾವನ್ನು ತಿಂದು, ಶೂರರಂತೆ ಬಲಗೊಂಡು, ಕಾನಾನ್ ದೇಶದಲ್ಲಿದ್ದ ಮೂವತ್ತೊಂದು ರಾಜರನ್ನು ಜಯಿಸಬೇಕೆಂಬುದು ದೇವರ ಪರಿಪೂರ್ಣ ಚಿತ್ತವಾಗಿತ್ತು. ಆದರೆ ಇಸ್ರಾಯೇಲ್ಯರು ದೇವರ ಚಿತ್ತವನ್ನೂ ಉದ್ದೇಶವನ್ನೂ ಅರ್ಥಮಾಡಿಕೊಳ್ಳಲು ವಿಫಲರಾದರು. ಅವರು ದೇವರು ನೀಡಿದ ಮನ್ನಾವನ್ನು ತಿರಸ್ಕರಿಸಿದರು – ಐಗುಪ್ತದಲ್ಲಿ ತಾವು ಸೇವಿಸುತ್ತಿದ್ದ ಸೌತೆಕಾಯಿಗಳನ್ನು, ಬೆಳ್ಳುಳ್ಳಿಯನ್ನು ಮತ್ತು ಮೀನುಗಳನ್ನು ನೆನಪಿಸಿಕೊಂಡು ಅತ್ತರು. ಅವರು ಮಾಂಸಕ್ಕಾಗಿ ಹಂಬಲಿಸಿದರು. ಕರ್ತನು ಅವರ ಆಸೆಯ ಪ್ರಕಾರವೇ ಮಾಂಸವನ್ನು ನೀಡಿದರೂ, ಅದನ್ನು ಅತ್ಯಾಸೆಯಿಂದ ತಿಂದವರ ಮೇಲೆ ಆತನು ಅತ್ಯಂತ ಕೋಪಗೊಂಡು, ಅವರಿಗೆ ಘೋರವಾದ ಮಾರಕ ರೋಗವನ್ನು ದಯಪಾಲಿಸಿದನು.

ನಿನೆವೆಗೆ ಹೋಗುವಂತೆ ಕರ್ತನು ಪ್ರವಾದಿಯಾದ ಯೋನನಿಗೆ ಆಜ್ಞಾಪಿಸಿದನು, ಆದರೆ ಯೋನನ ಕಣ್ಣುಗಳು ತಾರ್ಷೀಷಿನ ಕಡೆಗಿದ್ದವು. ಬಹುಶಃ ಯೋನನು ಬಂದರು ತಲುಪಿದಾಗ, ತಾರ್ಷೀಷಿಗೆ ಹೊರಡಲು ಸಿದ್ಧವಾಗಿದ್ದ ಒಂದು ಹಡಗು ಅಲ್ಲಿತ್ತು. ಆದರೆ ಅವನು ಅದರಲ್ಲಿ ಪ್ರಯಾಣಿಸಿದಾಗ, ಬಿರುಗಾಳಿಯು ಎದ್ದು ಸಮುದ್ರವು ಅಲ್ಲೋಲಕಲ್ಲೋಲವಾಯಿತು. ಅಂತಿಮವಾಗಿ ಯೋನನು ಪಶ್ಚಾತ್ತಾಪಪಡುವ ಮುಂಚೆ ಮೀನಿನ ಹೊಟ್ಟೆಯಲ್ಲಿ ಮಹಾ ಯಾತನೆಯನ್ನು ಅನುಭವಿಸಿದನು.

ಪ್ರಿಯ ದೇವರ ಮಕ್ಕಳೇ, ಕರ್ತನು ನಿಮಗೆ ಏನನ್ನಾದರೂ ಮಾಡಲು ಹೇಳಿದಾಗ, ಯಾವುದೇ ಪ್ರತಿರೋಧವನ್ನಾಗಲಿ ಅಥವಾ ಹಿಂಜರಿಕೆಯನ್ನಾಗಲಿ ತೋರದೆ ಆತನಿಗೆ ಸಂಪೂರ್ಣವಾಗಿ ವಿಧೇಯರಾಗಿರಿ. ಆತನ ಆಶೀರ್ವಾದಗಳನ್ನು ಸ್ವೀಕರಿಸಲು ಇದುವೇ ಮಾರ್ಗವಾಗಿದೆ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ದೇವರು ಮನುಷ್ಯರಂತೆ ಎರಡು ಮಾತಿನವನಲ್ಲ; ಮಾನವರಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ?” (ಅರಣ್ಯ 23:19).

Leave A Comment

Your Comment
All comments are held for moderation.