Appam, Appam - Kannada

ನವೆಂಬರ್ 06 – ಕನಸುಗಳು ಮತ್ತು ದರ್ಶನಗಳ ಮೂಲಕ!

“ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು, ನಿಮ್ಮ ಯೌವನಸ್ಥರಿಗೆ ದಿವ್ಯ ದರ್ಶನಗಳಾಗುವವು.” ಯೋವೇ 2:28

ನಮ್ಮೊಂದಿಗೆ ಮಾತನಾಡಲು ಕರ್ತನು ನಮಗೆ ಕನಸುಗಳನ್ನು ಮತ್ತು ದಿವ್ಯದರ್ಶನಗಳನ್ನು ನೀಡುತ್ತಾನೆ. ಈ ಅಂತ್ಯದಿನಗಳಲ್ಲಿ, ಆತನು ನಮ್ಮೊಂದಿಗೆ ಮಾತನಾಡುವಂತೆ ತನ್ನ ಆತ್ಮವನ್ನು ಎಲ್ಲ ಮನುಷ್ಯರ ಮೇಲೆ ಸುರಿಸುತ್ತಲೇ ಇದ್ದಾನೆ. ಪವಿತ್ರಾತ್ಮನ ಮೂಲಕ, ಆತನು ಪರಲೋಕವನ್ನೂ ಭೂಮಿಯನ್ನೂ ಒಂದಾಗಿ ತರುತ್ತಿದ್ದಾನೆ.

ನಮ್ಮ ಮಧ್ಯದಲ್ಲಿ ಹಿಂಗಾರು ಮಳೆಯು ಸುರಿಯಲ್ಪಡುತ್ತಿರುವಾಗ, ಪ್ರವಾದಿಗಳು ನಮ್ಮ ನಡುವೆ ಎದ್ದೇಳುತ್ತಿದ್ದಾರೆ. ಸುವಾರ್ತಿಕರು ಹಾಗೂ ಕರ್ತನಿಗಾಗಿ ಮಹತ್ಕಾರ್ಯಗಳನ್ನು ಮಾಡುವವರು ಎದ್ದುಬರುತ್ತಿದ್ದಾರೆ. ಇದಲ್ಲದೆ, ನಮ್ಮ ಹಿರಿಯರು ದರ್ಶನಗಳನ್ನು ಹೊಂದುತ್ತಾರೆ ಮತ್ತು ನಮ್ಮ ಯೌವನಸ್ಥರು ಕನಸುಗಳನ್ನು ಕಾಣುತ್ತಾರೆ.

ಹಳೆಯ ಒಡಂಬಡಿಕೆಯಲ್ಲಿ ಯೋಸೇಫನ ಬಗ್ಗೆ ಓದುವಾಗ, ಅವನು ‘ಕನಸುಗಾರ’ ಎಂದು ಪ್ರಸಿದ್ಧನಾಗಿದ್ದನು ಎಂಬುದನ್ನು ಕಾಣುತ್ತೇವೆ. ಅವನು ಯೌವನಸ್ಥನಾಗಿರುವಾಗಲೇ ಕರ್ತನು ಕನಸುಗಳ ಮೂಲಕ ಯೋಸೇಫನೊಂದಿಗೆ ಸಂಭಾಷನೆ ನಡೆಸಿ, ಅವನ ಭವಿಷ್ಯವನ್ನು ಅವನಿಗೆ ಪ್ರಕಟಿಸಿದನು.

ಮೂರು ರೀತಿಯ ಕನಸುಗಳಿವೆ. ಮೊದಲನೆಯದು, ಕನಸನ್ನು ಕಂಡ ವ್ಯಕ್ತಿಯ ಜೀವಿತಾವಧಿಯಲ್ಲೇ ನೆರವೇರುವ ಕನಸುಗಳು – ಉದಾಹರಣೆಗೆ ಯೋಸೇಫನ ಕನಸುಗಳು. ಅವನು ತನ್ನ ಯೌವನದಲ್ಲಿ ಕಂಡ ಹೆಚ್ಚಿನ ಕನಸುಗಳು, ನಂತರ ಅವನು ಐಗುಪ್ತದಲ್ಲಿ ಉನ್ನತ ಪದವಿಗೆ ಏರಿದಾಗ ನೆರವೇರಿದವು. ಕರ್ತನು ಯೋಸೇಫನಿಗೆ ಮುಂಚಿತವಾಗಿಯೇ ಕನಸುಗಳನ್ನು ಮತ್ತು ದರ್ಶನಗಳನ್ನು ನೀಡಿದ್ದರಿಂದ, ತಾನು ಕ್ರಮಿಸಬೇಕಾಗಿದ್ದ ಕಠಿಣವಾದ ಮಾರ್ಗದಲ್ಲಿ ಸಂತೋಷದಿಂದ ಮುನ್ನಡೆಯಲು ಅವನಿಗೆ ಸಾಧ್ಯವಾಯಿತು.

ಎರಡನೆಯದು, ದಾನಿಯೇಲನಿಗೆ ನೀಡಲ್ಪಟ್ಟಂತಹ ಕನಸುಗಳು ಮತ್ತು ಪ್ರವಾದನೆಗಳು. ಇವುಗಳ ನೆರವೇರಿಕೆಯು ಸುದೀರ್ಘ ಅವಧಿಯ ನಂತರ ನಡೆಯುವುದಾಗಿತ್ತು. ಈ ಕನಸುಗಳ ಕೆಲವು ಭಾಗಗಳು ಇಂದಿಗೂ ನೆರವೇರಬೇಕಾಗಿವೆ. ದಾನಿಯೇಲನು ತನ್ನ ಕನಸುಗಳ ಮೂಲಕ ಸಾವಿರ ವರ್ಷಗಳ ಆಳ್ವಿಕೆಯ ಬಗ್ಗೆ ಮತ್ತು ನಿತ್ಯತ್ವದ ಬಗ್ಗೆಯೂ ತಿಳಿದುಕೊಂಡನು.

ಮೂರನೆಯ ವಿಧದ ಕನಸು ಏನಂದರೆ, ಘಟನೆಗಳು ನಡೆಯುತ್ತಿರುವಂತೆಯೇ ಅವುಗಳನ್ನು ಕಾಣುವುದು. ಭಾರತದಲ್ಲಿ ಇಲ್ಲಿ ಕುಳಿತುಕೊಂಡೇ ನಾವು ಬಾಹ್ಯಾಕಾಶ ನೌಕೆಗಳ ಘಟನೆಗಳು ಸೇರಿದಂತೆ ಪ್ರಪಂಚದ ಯಾವುದೇ ಭಾಗದಲ್ಲಿ ನಡೆಯುವ ಘಟನೆಗಳನ್ನು ದೂರದರ್ಶನದಲ್ಲಿ (TV) ವೀಕ್ಷಿಸುವಂತೆ, ಕರ್ತನು ಕೆಲವು ಘಟನೆಗಳು ನಡೆಯುತ್ತಿರುವಂತೆಯೇ ಅವುಗಳನ್ನು ಕಾಣಲು ನಮಗೆ ಕೃಪೆಯಿಂದ ಅನುಗ್ರಹಿಸುತ್ತಾನೆ.

ಕನಸು ಎಂಬುದು ದೈವಿಕ ಭಾಷೆಯಾಗಿದೆ. ಕೆಲವೊಮ್ಮೆ ನಾವು ಕನಸನ್ನು ನೇರವಾಗಿ ಅರ್ಥಮಾಡಿಕೊಳ್ಳಬಹುದು; ಇನ್ನು ಕೆಲವು ಬಾರಿ, ಅದು ಸಾಮ್ಯದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕರ್ತನು ಅದರ ಅರ್ಥವನ್ನು ರಹಸ್ಯವಾಗಿಡಬಹುದು.

ಪ್ರಿಯ ದೇವರ ಮಕ್ಕಳೇ, ಕರ್ತನು ಕನಸುಗಳ ಮೂಲಕ ನಿಮ್ಮೊಂದಿಗೆ ಮಾತನಾಡುವನು. ಆತನು ನೀಡುವ ಕನಸುಗಳು ಮತ್ತು ದರ್ಶನಗಳು ಆಳವಾದ ಅರ್ಥಗಳನ್ನು ಹೊಂದಿರುತ್ತವೆ, ಮತ್ತು ಆತನೇ ಅವುಗಳ ಅರ್ಥವನ್ನು ನಿಮಗೆ ಪ್ರಕಟಿಸುವನು.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಆತನು ಅವರಿಗೆ, ‘ನನ್ನ ಮಾತುಗಳನ್ನು ಕೇಳಿರಿ. ನಿಮ್ಮಲ್ಲಿ ಪ್ರವಾದಿಯಿದ್ದರೆ, ನಾನು ಅವನಿಗೆ ಜ್ಞಾನದೃಷ್ಟಿಯಲ್ಲಿ ಕಾಣಿಸಿಕೊಳ್ಳುವೆನು, ಇಲ್ಲವೇ ಸ್ವಪ್ನದಲ್ಲಿ ಅವರ ಸಂಗಡ ಮಾತನಾಡುವೆನು.” (ಅರಣ್ಯ 12:6).

Leave A Comment

Your Comment
All comments are held for moderation.