Appam, Appam - Kannada

ಅಕ್ಟೋಬರ್ 22 – ನಂಬಿಕೆಯುಳ್ಳವರಾಗಿರಿ!

“ದೇವರನ್ನು ನಂಬಿರಿ, ನನ್ನನ್ನು ನಂಬಿರಿ.” (ಯೋಹಾ 14:1)

ಆತಂಕದ ಜಾಗದಲ್ಲಿ ಶಾಂತಿ ಮತ್ತು ಸಂತೋಷವನ್ನು ತರುವ ಶಕ್ತಿ ನಂಬಿಕೆಗಿದೆ. ಸತ್ಯವೇದವು ಹೀಗೆ ಘೋಷಿಸುತ್ತದೆ: “ನಂಬುವವನು ಆತುರಪಡನು” (ಯೆಶಾ 28:16), ಮತ್ತು “ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ” (1 ಯೋಹಾ 5:4). ಲೋಕವನ್ನು ಜಯಿಸುವವರು ಭಯದಲ್ಲಾಗಲಿ ಆತಂಕದಲ್ಲಾಗಲಿ ಜೀವಿಸಬೇಕಾಗಿಲ್ಲ.

ಇಂದು, ಅನೇಕ ಜನರು ಮನುಷ್ಯರಲ್ಲಿ, ಹಣದಲ್ಲಿ, ಕುಟುಂಬದ ಸಂಬಂಧಗಳಲ್ಲಿ ಮತ್ತು ಲೌಕಿಕ ಬಾಂಧವ್ಯಗಳಲ್ಲಿ ತಮ್ಮ ಭರವಸೆಯನ್ನೂ ನಂಬಿಕೆಯನ್ನೂ ಇಡುತ್ತಾರೆ. ನೀವು ಯಾರಲ್ಲಿ ನಂಬಿಕೆ ಇಟ್ಟಿದ್ದೀರಿ?

ಯೇಸು ಕ್ರಿಸ್ತನು ಹೇಳಿದನು: “ದೇವರನ್ನು ನಂಬಿರಿ, ನನ್ನನ್ನು ನಂಬಿರಿ.”

ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯವೆಂದು ಸತ್ಯವೇದವು ಬೋಧಿಸುತ್ತದೆ; ಏಕೆಂದರೆ ದೇವರ ಬಳಿಗೆ ಬರುವವನು ಆತನಿದ್ದಾನೆಂದೂ, ತಮ್ಮನ್ನು ಆಸಕ್ತಿಯಿಂದ ಹುಡುಕುವವರಿಗೆ ಆತನು ಪ್ರತಿಫಲ ನೀಡುವವನೆಂದೂ ನಂಬಬೇಕು (ಇಬ್ರಿ 11:6).

ಕ್ರೈಸ್ತ ಜೀವನದ ಅಡಿಪಾಯವೇ ನಂಬಿಕೆ. ಅಪೊಸ್ತಲನಾದ ಪೌಲನು ನಂಬಿಕೆಯ ಮೂಲತತ್ವಗಳ ಬಗ್ಗೆ ಮಾತನಾಡಿದಾಗ, ಆತನು ದೇವರ ಮೇಲಣ ನಂಬಿಕೆಯನ್ನು ಪ್ರತ್ಯೇಕವಾಗಿ ಸೇರಿಸಿದನು (ಇಬ್ರಿ 6:1).

ಆದ್ದರಿಂದ, ನಿಶ್ಚಿತ ಅಡಿಪಾಯವಾದ ಕ್ರಿಸ್ತನ ಮೇಲೆ ನಿಮ್ಮ ಜೀವನವನ್ನು ಕಟ್ಟುಕೊಳ್ಳಲು ಮತ್ತು ದೇವರಿಗೆ ಮೆಚ್ಚಿಕೆಯಾಗುವ ಆತ್ಮಿಕ ಮಂದಿರವಾಗಿ ಬೆಳೆಯಲು ಬಯಸುವುದಾದರೆ, ಆತನಲ್ಲಿ ದೃಢವಾಗಿ ನಂಬಿಕೆಯಿಡಿರಿ.

ಕ್ರೈಸ್ತೀಯ ಜೀವನದಲ್ಲಿ ಬಹುಮಟ್ಟಿಗೆ ಪ್ರತಿಯೊಂದೂ ನಂಬಿಕೆಯಿಂದಲೇ ನಡೆಯುತ್ತದೆ.

ನಂಬಿಕೆಯು ರಕ್ಷಣೆಯನ್ನು ತರುತ್ತದೆ: ನಾವು ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದ್ದೇವೆ (ಎಫೆಸ 2:8). ಕ್ರಿಸ್ತನು ನನಗಾಗಿ ಸತ್ತನು, ಹೂಣಲ್ಪಟ್ಟನು ಮತ್ತು ಮರಣದಿಂದ ಎದ್ದನು ಎಂದು ನಂಬಿದ ನಂತರವೇ ಒಬ್ಬ ವ್ಯಕ್ತಿಯು ದೀಕ್ಷಾಸ್ನಾನಕ್ಕೆ ಸಿದ್ಧವಾಗಬೇಕು. ನಂಬಿ ದೀಕ್ಷಾಸ್ನಾನ ಹೊಂದಿದವನು ರಕ್ಷಿಸಲ್ಪಡುವನು ಎಂದು ಯೇಸು ಹೇಳಿದನು (ಮಾರ್ಕ 16:16).

ನಂಬಿಕೆಯು ಪವಿತ್ರಾತ್ಮನನ್ನು ಸ್ವೀಕರಿಸುತ್ತದೆ: ಪವಿತ್ರಾತ್ಮನ ಅಭಿಷೇಕ ಮತ್ತು ಪೂರ್ಣತೆಯನ್ನು ಪಡೆದುಕೊಳ್ಳಲು ನಂಬಿಕೆಯು ಅತ್ಯಗತ್ಯ. ನನ್ನಲ್ಲಿ ನಂಬಿಕೆಯಿಡುವವನ ಅಂತರಂಗದಿಂದ “ಜೀವಕರವಾದ ನೀರಿನ ಬುಗ್ಗೆಗಳು” ಹರಿಯುವವು ಎಂದು ಯೇಸು ಘೋಷಿಸಿದನು. ಯೇಸು ತನ್ನನ್ನು ನಂಬುವವರು ಪಡೆದುಕೊಳ್ಳಲಿರುವ ಪವಿತ್ರಾತ್ಮನ ಕುರಿತಾಗಿ ಮಾತನಾಡುತ್ತಿದ್ದನೆಂದು ಯೋಹಾನನು ವಿವರಿಸುತ್ತಾನೆ (ಯೋಹಾ 7:38–39).

ನಂಬಿಕೆಯು ಸ್ವಸ್ಥತೆಯನ್ನು ತರುತ್ತದೆ: ನೀವು ದೈವಿಕ ಸ್ವಸ್ಥತೆಯನ್ನೂ ಆರೋಗ್ಯವನ್ನೂ ಬಯಸುತ್ತೀರಾ? ನಿಮಗೆ ನಂಬಿಕೆ ಬೇಕು. ನಂಬಿಕೆಯಿಂದ ಕೂಡಿದ ಪ್ರಾರ್ಥನೆಯು ರೋಗಿಯನ್ನು ಸ್ವಸ್ಥ ಮಾಡುತ್ತದೆ ಮತ್ತು ಕರ್ತನು ಅವನನ್ನು ಎಬ್ಬಿಸುವನು ಎಂದು ವಾಕ್ಯವು ಬೋಧಿಸುತ್ತದೆ (ಯಾಕೋ 5:15). ಆದ್ದರಿಂದ, ನೀವು ಕಾಯಿಲೆಯಲ್ಲಿದ್ದಾಗ ಅಥವಾ ಶಾರೀರಿಕ ದೌರ್ಬಲ್ಯವನ್ನು ಎದುರಿಸುತ್ತಿರುವಾಗ, ನಿಮ್ಮ ಅಗತ್ಯವನ್ನು ನಂಬಿಕೆಯಿಂದ ಕರ್ತನ ಮುಂದೆ ತನ್ನಿರಿ ಮತ್ತು ಆತನ ಶಕ್ತಿ ಹಾಗೂ ಕರುಣೆಯನ್ನು ನಂಬಿರಿ.

ನಂಬಿಕೆಯು ಪರಿಶುದ್ಧತೆಗೆ ನಡೆಸುತ್ತದೆ: ಪರಿಶುದ್ಧತೆಯಲ್ಲಿ ಬೆಳೆಯಲು ಸಹ ನಂಬಿಕೆ ಅಗತ್ಯ. ದೇವರು ನಂಬಿಕೆಯಿಂದ ಹೃದಯವನ್ನು ಶುದ್ಧೀಕರಿಸುತ್ತಾನೆ ಎಂದು ಅಪೊಸ್ತಲರ ಕೃತ್ಯಗಳು 15:9 ನಮಗೆ ಹೇಳುತ್ತದೆ. ನಾವು ಕ್ರಿಸ್ತನಲ್ಲಿ ಭರವಸೆಯಿಡುವಾಗ, ಆತನು ನಮ್ಮ ಹೃದಯಗಳನ್ನು ಶುದ್ಧೀಕರಿಸುತ್ತಾನೆ ಮತ್ತು ನಮ್ಮ ಜೀವನವನ್ನು ಮಾರ್ಪಡಿಸುತ್ತಾನೆ. ನಂಬಿಕೆ ಎಂದರೆ ದೇವರು ನಮಗಾಗಿ ಏನೋ ಒಂದನ್ನು ಮಾಡಬಲ್ಲನು ಎಂದು ಬರಿ ನಂಬುವುದಷ್ಟೇ ಅಲ್ಲ; ನಮ್ಮ ಇಡೀ ಜೀವನವನ್ನು ಆತನಿಗೆ ಸಮರ್ಪಿಸುವಷ್ಟರ ಮಟ್ಟಿಗೆ ಆತನನ್ನು ನಂಬುವುದಾಗಿದೆ.

ನಂಬಿಕೆಯು ಜಯವನ್ನು ನೀಡುತ್ತದೆ: ದೇವರಲ್ಲಿ ಭರವಸೆಯಿಡುವವರು ಜಯಶಾಲಿಗಳಾಗುತ್ತಾರೆ. “ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ.” (1 ಯೋಹಾನ 5:4)

ನಂಬಿಕೆಯು ಜೀವವನ್ನು ನೀಡುತ್ತದೆ: ನಂಬಿಕೆಯು ಜೀವವನ್ನೂ ತರುತ್ತದೆ. “ನೀತಿವಂತನು ನಂಬಿಕೆಯಿಂದಲೇ ಬದುಕುವನು” (ರೋಮಾ 1:17) ಎಂಬ ಸತ್ಯವೇದದ ಸತ್ಯದಿಂದ ಮಾರ್ಟಿನ್ ಲೂಥರ್ ಆಳವಾಗಿ ಮಾರ್ಪಟ್ಟನು. ಕ್ರೈಸ್ತ ಜೀವನವು ಸಂಪೂರ್ಣವಾಗಿ ದೇವರ ಮೇಲಣ ನಂಬಿಕೆ ಮತ್ತು ಆತನ ಕೃಪೆಯ ಮೇಲೆಯೇ ನಿಲ್ಲಬೇಕು ಎಂಬುದನ್ನು ಆತನು ಅರ್ಥಮಾಡಿಕೊಂಡನು. ಯೇಸು ತಾನೇ ಹೇಳಿದನು: “ನಾನು ಬದುಕುವದರಿಂದ ನೀವು ಸಹ ಬದುಕುವಿರಿ.” (ಯೋಹಾ 14:19) ಎಂತಹ ಅದ್ಭುತವಾದ ಭರವಸೆ!

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:

“ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ.” (ಯೋಹಾ 11:40)

Leave A Comment

Your Comment
All comments are held for moderation.