Appam, Appam - Kannada

ಅಕ್ಟೋಬರ್ 20 – ನೀತಿಯ ಯಜ್ಞಗಳು!

“ಜನರು ನ್ಯಾಯವಾದ ಯಜ್ಞಗಳನ್ನೂ ಸರ್ವಾಂಗ ಹೋಮಗಳನ್ನೂ ಸಮರ್ಪಿಸಿ ನಿನಗೆ ಸಂತೋಷವನ್ನುಂಟುಮಾಡುವರು.” (ಕೀರ್ತನೆ 51:19)

ಸುಂಕವಸೂಲಿ ಮಾಡುವವನು ಮತ್ತು ಫರಿಸಾಯನು ಒಮ್ಮೆ ಪ್ರಾರ್ಥನೆ ಮಾಡಲು ದೇವಾಲಯಕ್ಕೆ ಹೋದರು. ಫರಿಸಾಯನು ಪ್ರಾರ್ಥಿಸಿದಾಗ, ತಾನು ಮಾಡಿದ ಎಲ್ಲಾ ಧಾರ್ಮಿಕ ಸಾಧನೆಗಳನ್ನು ಹೆಮ್ಮೆಯಿಂದ ಪಟ್ಟಿ ಮಾಡಿ ತನ್ನದೇ ಆದ ನೀತಿಯನ್ನು ಘೋಷಿಸಿದನು. ಆದರೆ ಸುಂಕದವನು ದೂರದಲ್ಲಿ ನಿಂತು ತನ್ನ ಕಣ್ಣುಗಳನ್ನು ಪರಲೋಕದ ಕಡೆಗೆ ಎತ್ತಲೂ ಇಲ್ಲ. ಅವನು ತನ್ನ ಎದೆಯನ್ನು ಬಡಿದುಕೊಂಡು, “ದೇವರೇ, ಪಾಪಿಯಾದ ನನಗೆ ಕರುಣಿಸು!” ಎಂದು ಬಿಕ್ಕಿ ಬಿಕ್ಕಿ ಅತ್ತನು (ಲೂಕ 18:10–13).

ಫರಿಸಾಯನು ತಾನು ಮಾಡಿದೆನೆಂದು ಹೇಳಿಕೊಂಡ ಎಲ್ಲಾ ಒಳ್ಳೆಯ ಕೆಲಸಗಳ ಹೊರತಾಗಿಯೂ, ಯೇಸು ಕ್ರಿಸ್ತನು ಅವನಲ್ಲಿ ಸಂತೋಷಪಡಲಿಲ್ಲ. ಆದರೆ ವಿನಯದಿಂದಲೂ ಜಜ್ಜಿದ ಹೃದಯದಿಂದಲೂ ದೇವರ ಮುಂದೆ ತನ್ನ ಹೃದಯವನ್ನು ಸುರಿದುಕೊಂಡ ಸುಂಕದವನು ನೀತಿವಂತನೆಂದು ಘೋಷಿಸಲ್ಪಟ್ಟನು.

ದೇವರ ಕೃಪೆಯು ನಿಮ್ಮೊಳಗೆ ಕೆಲಸ ಮಾಡಲು ನೀವು ಅವಕಾಶ ನೀಡಿದಾಗ, ಅದು ಮುರಿದ ಮತ್ತು ನಜ್ಜುಗುಜ್ಜಾದ ಆತ್ಮವನ್ನು ಉತ್ಪಾದಿಸುತ್ತದೆ. ನಿಮ್ಮ ಹೃದಯದ ಕಠಿಣತೆಯು ಬದಲಾಗುತ್ತದೆ, ಮತ್ತು ನೀವು ಮುರಿದ ಮತ್ತು ಜಜ್ಜಲ್ಪಟ್ಟ ಯಜ್ಞವಾಗಿ ನಿಮ್ಮನ್ನು ದೇವರಿಗೆ ಅರ್ಪಿಸಲು ಸಿದ್ಧರಾಗುತ್ತೀರಿ.

ದೇವರು ಮೂರು ವಿಧಾನಗಳಲ್ಲಿ ನಮ್ಮನ್ನು ಮುರಿಯುತ್ತಾನೆ ಎಂದು ದೇವರ ವಾಕ್ಯವು ತೋರಿಸುತ್ತವೆ.

ದೇವರ ವಾಕ್ಯದ ಮೂಲಕ: ಪವಿತ್ರಾತ್ಮದಿಂದ ತುಂಬಿದ ಪೇತ್ರನು ಅಭಿಷೇಕದೊಂದಿಗೆ ದೇವರ ಜೀವಂತ ವಾಕ್ಯವನ್ನು ಸಾರಿದಾಗ, ಅದನ್ನು ಕೇಳಿದವರು ಹೃದಯದಲ್ಲಿ ಮುರಿಯಲ್ಪಟ್ಟರು (ಅಪೊ ಕೃತ್ಯ 2:37).

ದೇವರ ವಾಕ್ಯವು ಬಂಡೆಯನ್ನು ತುಂಡು ತುಂಡಾಗಿ ಒಡೆಯುವ ಸುತ್ತಿಗೆಯಂತಿದೆ. ಅದು ಅತ್ಯಂತ ಕಠಿಣವಾದ ಹೃದಯವನ್ನೂ ಸಹ ಒಡೆಯಬಲ್ಲದು. ದೇವರ ವಾಕ್ಯವು ಸಜೀವವುಳ್ಳದ್ದೂ ಬಲವುಳ್ಳದ್ದೂ ಯಾವ ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದೂ ಆಗಿದ್ದು, ಪ್ರಾಣವನ್ನೂ ಆತ್ಮವನ್ನೂ ಕೀಲು ಮಜ್ಜೆಗಳನ್ನು ವಿಭಾಗಿಸುವಷ್ಟು ಆಳವಾಗಿ ನುಗ್ಗುತ್ತದೆ ಮತ್ತು ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸಬಲ್ಲದು ಎಂದು ಇಬ್ರಿಯ ಪತ್ರಿಕೆಯಲ್ಲಿ ಓದುತ್ತೆವೆ (ಇಬ್ರಿ 4:12).

ಪವಿತ್ರಾತ್ಮನ ಕೆಲಸದ ಮೂಲಕ: ಪವಿತ್ರಾತ್ಮನು ನಮ್ಮ ಹೃದಯದಲ್ಲಿ ಮುರಿಯಲ್ಪಡುವಿಕೆಯನ್ನು ತರುತ್ತಾನೆ. ಕರ್ತನು ಈ ಭರವಸೆಯನ್ನು ನೀಡುತ್ತಾನೆ: “ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು.” (ಯೆಹೆ 11:19)

ಹೌದು, ಪವಿತ್ರಾತ್ಮನು ನಿಮ್ಮ ಹೃದಯದ ಆಳದಿಂದ ಪದಗಳಿಲ್ಲದವನಾಗಿ ನರಳಾಟದಿಂದ ಪ್ರಾರ್ಥಿಸುವಾಗ ದೇವರ ಪ್ರಸನ್ನತೆಯು ನಿಮ್ಮನ್ನು ಆವರಿಸಿಕೊಳ್ಳುತ್ತದೆ.

ಕರ್ತನ ಪ್ರಸನ್ನತೆಯಲ್ಲಿ, ಒಂದು ಕಾಲದಲ್ಲಿ ಬೆಟ್ಟದಂತೆ ಕಠಿಣವಾಗಿದ್ದ ಹೃದಯವು ಮೇಣದಂತೆ ಕರಗಲು ಪ್ರಾರಂಭಿಸುತ್ತದೆ (ಕೀರ್ತನೆ 97:5). ಅದಕ್ಕಾಗಿಯೇ ದಾವೀದನು ಹೇಳುತ್ತಾನೆ: “ನಿಮ್ಮ ಹೃದಯವನ್ನು ಆತನ ಮುಂದೆ ಹೊಯ್ದು ಬಿಡಿರಿ.” (ಕೀರ್ತನೆ 62:8)

ಶ್ರಮೆಗಳು ಮತ್ತು ಕಷ್ಟಗಳ ಮೂಲಕ: ಶ್ರಮೆಗಳೂ ಸಂಕಟಗಳೂ ಸಹ ನಮ್ಮ ಹೃದಯದಲ್ಲಿ ಮುರಿತವನ್ನು ತರಬಹುದು.

ಹನ್ನಳ ಜೀವನವನ್ನು ಪರಿಗಣಿಸಿರಿ. ಒಂದು ಕಡೆ ಮಕ್ಕಳಿಲ್ಲದಿರುವ ತೀವ್ರವಾದ ವೇದನೆ ಇತ್ತು. ಮತ್ತೊಂದು ಕಡೆ ಮಗುವಿಲ್ಲದಿರುವ ಕಾರಣಕ್ಕಾಗಿ ಅವಳನ್ನು ಅಣಕಿಸಿದ ತನ್ನ ತಂಗಿಯ ನಿರಂತರ ಪ್ರಚೋದನೆ ಮತ್ತು ಘಾಸಿಗೊಳಿಸುವ ಮಾತುಗಳು ಇದ್ದವು. ದಿನದಿಂದ ದಿನಕ್ಕೆ ಆ ಮಾತುಗಳು ಅವಳ ಹೃದಯವನ್ನು ಗಾಯಗೊಳಿಸಿದವು.

ಆದ್ದರಿಂದ, ಹನ್ನಳು ಮುರಿದ ಮತ್ತು ಜಜ್ಜಿದ ಹೃದಯದಿಂದ ಕರ್ತನ ಮುಂದೆ ಬಂದು ತನ್ನ ಹೃದಯವನ್ನು ಆತನ ಮುಂದೆ ಹೊಯ್ದಳು (1 ಸಮು 1:15).

ಕರ್ತನು ಅವಳನ್ನು ಕೃಪೆಯಿಂದ ನೋಡುವುದು ಮಾತ್ರವಲ್ಲದೆ ಅವಳ ಪ್ರಾರ್ಥನೆಗೆ ಉತ್ತರಿಸಿ ಅವಳಿಗೊಬ್ಬ ಮಗನನ್ನು—ದೇವರ ಉನ್ನವಾದ ಪ್ರವಾದಿಯಾದ ಸಮುವೇಲನನ್ನು ನೀಡಿದನು. ಎಂಥ ಸುಂದರವಾದ ಪಾಠ! ದೇವರು ನಮ್ಮ ಹೃದಯವನ್ನು ಒಡೆಯುವ ಅನುಭವಗಳನ್ನೇ ಬಳಸಿ ನಮ್ಮನ್ನು ಆತನ ಸಮೀಪಕ್ಕೆ ಸೆಳೆದುಕೊಳ್ಳಬಹುದು; ಮತ್ತು ತನ್ನ ಆಶೀರ್ವಾದಗಳನ್ನು ನಮ್ಮ ಮೇಲೆ ಸುರಿಯಬಹುದು.

ಮುಂದಿನ ಧ್ಯಾನಕ್ಕಾಗಿ ದೇವರ ವಾಕ್ಯ:

“ಹುಳಿ ಹಿಟ್ಟನ್ನು ಕೃತಜ್ಞತಾರ್ಪಣವಾಗಿ ಹೋಮಮಾಡಿರಿ, ಕೊಟ್ಟ ಕಾಣಿಕೆಗಳನ್ನು ಪ್ರಕಟಿಸಿರಿ, ಸಾರಿಕೊಳ್ಳಿರಿ.” (ಆಮೋ 4:5)

Leave A Comment

Your Comment
All comments are held for moderation.