ಅಕ್ಟೋಬರ್ 12 – ನಿನ್ನ ನೀತಿ ವಿಧಿಗಳಿಗೊಸ್ಕರ!
“ನಿನ್ನ ನೀತಿ ವಿಧಿಗಳಿಗೊಸ್ಕರ ನಿನ್ನನ್ನು ದಿನಕ್ಕೆ ಏಳು ಸಾರಿ ನಿನ್ನನ್ನು ಕೊಂಡಾಡುತ್ತೇನೆ.” (ಕೀರ್ತನೆ 119:164)
ಕರ್ತನ ನೀತಿ ವಿಧಿಗಳು ದಾವೀದನನ್ನು ಆನಂದದಿಂದಲೂ ವಿಸ್ಮಯದಿಂದಲೂ ತುಂಬಿಸಿದವು. ಅದಕ್ಕಿಂತ ಹೆಚ್ಚಾಗಿ, ದಿನಕ್ಕೆ ಏಳು ಬಾರಿ ಕರ್ತನನ್ನು ಸ್ತುತಿಸಲು ಅವು ಆತನನ್ನು ಪ್ರೇರೇಪಿಸಿದವು. ನಾವು ಆತನ ನೀತಿಯ ಬಗ್ಗೆ ಧ್ಯಾನಿಸುತ್ತಾ ಕರ್ತನನ್ನು ಸ್ತುತಿಸಿದಾಗ, ಆತನು ನಮ್ಮ ಜೀವನದಲ್ಲಿ ನ್ಯಾಯವನ್ನು ಸ್ಥಾಪಿಸುವನು ಎಂಬ ವಿಶ್ವಾಸವನ್ನು ನಾವು ಹೊಂದಿರಬಹುದು.
ದಾವೀದನ ಈ ಹೇಳಿಕೆಯನ್ನು ಗಮನಿಸಿರಿ: “ನಿನ್ನ ನೀತಿ ವಿಧಿಗಳಿಗೊಸ್ಕರ ನಿನ್ನನ್ನು ದಿನಕ್ಕೆ ಏಳು ಸಾರಿ ನಿನ್ನನ್ನು ಕೊಂಡಾಡುತ್ತೇನೆ.”
ಏಳು ಎಂಬ ಸಂಖ್ಯೆಯು ಪರಿಪೂರ್ಣತೆ ಮತ್ತು ಸಂಪೂರ್ಣ ತೃಪ್ತಿಯನ್ನು ಸೂಚಿಸುತ್ತದೆ. · ನಮಾನನು ತನ್ನ ಕುಷ್ಠರೋಗದಿಂದ ಗುಣಮುಖನಾಗಲು ಯೋರ್ದನ್ ನದಿಯಲ್ಲಿ ಒಂದೆರಡು ಸಲ ಮಾತ್ರ ಮುಳುಗಲಿಲ್ಲ; ಅವನು ಏಳು ಸಲ ಮುಳುಗಿದನು. · ಶುನೆಮ್ಮಿನಾಳಿನ ಮಗನು ಪುನಃ ಜೀವಿತಕ್ಕೆ ಬಂದಾಗ, ಆ ಮಗನು ಏಳು ಸಲ ಸೀನಿ ತನ್ನ ಕಣ್ಣುಗಳನ್ನು ತೆರೆದನು. ·
ಯಾಕೋಬನು ತನ್ನ ಸಹೋದರನಾದ ಏಸಾವನೊಂದಿಗೆ ರಾಜಿ ಮಾಡಿಕೊಳ್ಳಲು ಬಯಸಿದಾಗ, ಅವನು ತನ್ನ ಸಹೋದರನನ್ನು ಸಮೀಪಿಸುತ್ತಿದ್ದಂತೆ ನೆಲದ ಮೇಲೆ ಏಳು ಬಾರಿ ಬಾಗಿದನು (ಆದಿ 33:3).
ಆದ್ದರಿಂದ, ನಿಮ್ಮ ಹಕ್ಕುಗಳನ್ನು ಉಲ್ಲಂಘಿಸಿದಾಗ ಮತ್ತು ನ್ಯಾಯವನ್ನು ತಿರುಚಿದಾಗ, ನೀತಿವಂತನಾದ ದೇವರನ್ನು ದಿನವಿಡೀ ಪುನಃಪುನಃ ಸ್ತುತಿಸಿ. ಆತನನ್ನು ಎಪ್ಪತ್ತು ಏಳು ಬಾರಿ ಸ್ತುತಿಸಿ! “ನ್ಯಾಯವನ್ನು ನಡಿಸುವ ದೇವರೇ, ನಿನಗೆ ಸ್ತೋತ್ರ!” ಎಂದು ಹೇಳುತ್ತಲೇ ಇರಿ.
ಕರ್ತನು ನಿಮ್ಮ ಪರವಾಗಿ ಖಂಡಿತವಾಗಿಯೂ ನ್ಯಾಯಯುತವಾಗಿ ವರ್ತಿಸುವನು. ಜನರು ನಿಮ್ಮೊಂದಿಗೆ ಅನ್ಯಾಯದಿಂದ ವರ್ತಿಸಬಹುದು, ನಿಮಗೆ ವಿರೋಧವಾಗಿ ಕೆಟ್ಟದ್ದು ಮಾಡಬಹುದು ಮತ್ತು ನಿಮಗೆ ಸಲ್ಲಬೇಕಾದ್ದನ್ನು ತಿರುಚಬಹುದು. ಆದರೆ ಕರ್ತನು ನೀತಿಯುಳ್ಳ ನ್ಯಾಯಾಧೀಶನಾಗಿದ್ದು, ಆತನು ನಿಮ್ಮ ಪಕ್ಷವನ್ನು ವಹಿಸಿ ನಿಮಗಾಗಿ ನ್ಯಾಯವನ್ನು ಸ್ಥಾಪಿಸುವನು.
ನೀವು ಕರ್ತನ ನೀತಿಗಾಗಿ ಮತ್ತು ನ್ಯಾಯಕ್ಕಾಗಿ ಆತನನ್ನು ಸ್ತುತಿಸುವಾಗ, ನಿಮ್ಮ ಸ್ವಂತ ಸಮಗ್ರತೆಗೆ ಧಕ್ಕೆ ತರದೆ, ಸತ್ಯದಿಂದಲೂ ಯಥಾರ್ಥತೆಯಿಂದಲೂ ಬದುಕಲು ದೃಢಸಂಕಲ್ಪ ಮಾಡಿ. ಕರ್ತನಾದ ಯೇಸು ಹೀಗೆ ಹೇಳಿದನು: “ಆತನು ಬಂದು ಪಾಪ ನೀತಿ ನ್ಯಾಯತೀರ್ವಿಕೆ ಈ ವಿಷಯಗಳಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುವನು.” (ಯೋಹಾ 16:8)
ದೇವರ ದೃಷ್ಟಿಯಲ್ಲಿ ನಮ್ಮನ್ನು ನೀತಿವಂತರನ್ನಾಗಿ ಮಾಡುವುದರಲ್ಲಿ ಕ್ರಿಸ್ತನ ಪಾತ್ರವು ಅತ್ಯಂತ ಪ್ರಮುಖವಾಗಿದೆ. ನಾವು ಆತನನ್ನು ತಿಳಿದುಕೊಳ್ಳುತ್ತಿದ್ದಂತೆ, ಆತನ ನೀತಿಯು ನಮ್ಮ ಜೀವನದೊಳಗೆ ಪ್ರವೇಶಿಸಿ ನಮ್ಮಲ್ಲಿ ನೆಲೆಸುತ್ತದೆ. ನಾವು ಕ್ರಿಸ್ತನ ನೀತಿಯನ್ನು ಬಾಧ್ಯತೆಯಾಗಿ ಪಡೆದುಕೊಳ್ಳುತ್ತೇವೆ. ಯೆಶಾಯನು ಹೀಗೆ ಪ್ರವಾದಿಸಿದನು: “ನನ್ನ ನೀತಿವಂತನಾದ ಸೇವಕನು ತನ್ನ ಜ್ಞಾನದ ಮೂಲಕ ಬಹುಜನರನ್ನು ಧರ್ಮಮಾರ್ಗಕ್ಕೆ ತರುವನು.” (ಯೆಶಾ 53:11) ಆದ್ದರಿಂದ, ಕ್ರಿಸ್ತನ ನೀತಿಯೊಂದಿಗೆ ಒಂದಾಗಿರಿ.
ಹಳೆಯ ಒಡಂಬಡಿಕೆಯಡಿಯಲ್ಲಿ, ಇಸ್ರಾಯೇಲ್ಯರು ಕ್ರಿಸ್ತನ ಮೂಲಕ ಬರುವ ನೀತಿಯನ್ನು ಅವಲಂಬಿಸುವ ಕಾರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ. ಅವರು ಹತ್ತು ಆಜ್ಞೆಗಳು ಸೇರಿದಂತೆ ಧರ್ಮಶಾಸ್ತ್ರವು ಸೂಚಿಸಿದ ನೀತಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆದರೆ ಆ ನೀತಿಯು ಅವರನ್ನು ಪರಿಪೂರ್ಣರನ್ನಾಗಿ ಮಾಡಲು ಸಾಧ್ಯವಿರಲಿಲ್ಲ. ಇದರ ಪರಿಣಾಮವಾಗಿ, ಅವರು ಶಾಪಗಳನ್ನು, ಕಷ್ಟಗಳನ್ನು ಮತ್ತು ತೀವ್ರವಾದ ದುಃಖವನ್ನು ಅನುಭವಿಸಿದರು.
ಹೊಸ ಒಡಂಬಡಿಕೆಯಲ್ಲಿ ಪರಿಶುದ್ಧರಾದ ನಾವೆಷ್ಟು ಧನ್ಯರು! ನಾವು ನಮ್ಮ ಸ್ವಂತ ನೀತಿಯನ್ನು ಅವಲಂಬಿಸುವುದಿಲ್ಲ. ನಮ್ಮನ್ನು ಪರಿಪೂರ್ಣರನ್ನಾಗಿ ಮಾಡಲು ಅಶಕ್ತವಾಗಿರುವ ನಿಯಮಗಳು ಮತ್ತು ನಿಬಂಧನೆಗಳ ಮೇಲೆ ನಾವು ಭರವಸೆ ಇಡುವುದಿಲ್ಲ.
ಕ್ರಿಸ್ತನೇ ನಮ್ಮ ನೀತಿಯಾಗಿದ್ದಾನೆ. ಪಾಪವನ್ನರಿಯದ ಆತನು ನಮಗೋಸ್ಕರ ಪಾಪವಾದನು. ಆತನು ತನ್ನ ನೀತಿಯ ವಸ್ತ್ರಗಳಿಂದ ನಮ್ಮನ್ನು ಧರಿಸಿ, ದೇವರ ದೃಷ್ಟಿಯಲ್ಲಿ ನಮ್ಮನ್ನು ನೀತಿವಂತರನ್ನಾಗಿ ಮಾಡಿದ್ದಾನೆ.
ಪ್ರಿಯ ದೇವರ ಮಕ್ಕಳೇ, ನಿಮ್ಮ ಓಟದ ಕೊನೆಯಲ್ಲಿ ಕರ್ತನ ಹಸ್ತದಿಂದ ನೀವು ನೀತಿಯ ಕಿರೀಟವನ್ನು ಪಡೆದುಕೊಳ್ಳುವಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನೀವು ಕೇವಲ ನ್ಯಾಯವನ್ನೇ ಅನುಸರಿಸಬೇಕು. ಹಾಗೆ ನಡೆದರೆ ನೀವು ಬದುಕಿಕೊಂಡು ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ.” (ಧರ್ಮೋ 16:20)