Appam, Appam - Kannada

ಆಗಸ್ಟ್ 28 – ನಿಜವಾದ ದ್ರಾಕ್ಷಿಬಳ್ಳಿ!

“ನಾನೇ ನಿಜವಾದ ದ್ರಾಕ್ಷಿಬಳ್ಳಿ, ನನ್ನ ತಂದೆ ತೋಟಗಾರನು.” (ಯೋಹಾ 15:1)

ಕರ್ತನು ನಮ್ಮ ಸೃಷ್ಟಿಕರ್ತನೂ ನಮ್ಮನ್ನು ರೂಪಿಸಿದವನೂ ಆಗಿದ್ದಾನೆ. ಕೆಲವೊಮ್ಮೆ ನಾವು ಆತನ ಪ್ರೀತಿಯನ್ನು ತಂದೆಯ ಪ್ರೀತಿಯಂತೆ ಅನುಭವಿಸುತ್ತೇವೆ. ಇನ್ನು ಕೆಲವು ಬಾರಿ ನಾವು ತಾಯಿಯಂತಹ ಆತನ ಕರುಣೆಯನ್ನೂ ಮಮತೆಯ ಆರೈಕೆಯನ್ನೂ ಪಡೆಯುತ್ತೇವೆ. ಆತನು ನಮ್ಮನ್ನು ಒಬ್ಬ ನಿಷ್ಠಾವಂತ ಸಹೋದರನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾನೆ. ಆತನು ನಮ್ಮ ಕುಟುಂಬದ ನಂಬಿಗಸ್ತ ಸ್ನೇಹಿತನಾಗಿ ನಮ್ಮೊಂದಿಗೆ ನಡೆಯುತ್ತಾನೆ. ನಮ್ಮ ಬೋಧಕನೂ ಆಶ್ಚರ್ಯಕರವಾದ ಆಲೋಚನಾಕರ್ತನೂ ಆಗಿ, ಆತನು ನಮ್ಮ ಜೀವನವನ್ನು ಮುನ್ನಡೆಸುತ್ತಾನೆ. ಬರಿದಾದ ಈ ಲೋಕದಲ್ಲಿ, ಆತನು ನಮ್ಮ ಪ್ರಿಯನೂ ನಮ್ಮ ಪರಲೋಕದ ವರನೂ ಆಗಿದ್ದಾನೆ – ಆತನ ಮೇಲೆ ನಾವು ಸಂಪೂರ್ಣವಾಗಿ ಭರವಸವಿಡಬಹುದು.

ಯೇಸು ಕ್ರಿಸ್ತನು ಯಾರೆಂದು ತಿಳಿಯಲು ಜಕ್ಕಾಯನು ಆಲದ ಮರವನ್ನು ಹತ್ತಿದಾಗ, ಕರ್ತನು ತನ್ನನ್ನು ಅವನ ರಕ್ಷಕನೆಂದು ಪ್ರಕಟಪಡಿಸಿಕೊಂಡನು (ಲೂಕ 19:4, 9). ಆತನು ತನ್ನ ಪ್ರಾಣವನ್ನು ಪ್ರಾಯಶ್ಚಿತ್ತ ಬಲಿಯಾಗಿ ಅರ್ಪಿಸುವುದರ ಮೂಲಕ ಲೋಕದ ಪಾಪವನ್ನು ಪರಿಹರಿಸುವ ದೇವರ ಕುರಿಮರಿಯಾಗಿದ್ದಾನೆ. ನಾವು ಆತನಿಗೆ ಹತ್ತಿರವಾಗುತ್ತಿದ್ದಂತೆ, ಆತನನ್ನು ಪವಿತ್ರಾತ್ಮನಿಂದಲೂ ಅಗ್ನಿಯಿಂದಲೂ ನಮ್ಮನ್ನು ತುಂಬಿಸುವ ಅಭಿಷಿಕ್ತನೆಂದು ನಾವು ಕಂಡುಕೊಳ್ಳುತ್ತೇವೆ.

ಆತನನ್ನು ಇನ್ನು ನಿಕಟವಾಗಿ ತಿಳಿಯಲು ಬಯಸುವವರಿಗೆ, ಆತನು ತನ್ನನ್ನು ಸಕಲ ರೋಗಗಳನ್ನು ಗುಣಪಡಿಸುವ ಮಹಾ ವೈದ್ಯನೆಂದು ಪ್ರಕಟಪಡಿಸುತ್ತಾನೆ. ಕರ್ತನು ಯಾರೆಂದು ನೀವು ದಾವೀದನನ್ನು ಕೇಳಿದರೆ, ಅವನು, “ಕರ್ತನು ನನಗೆ ಕುರುಬನು; ನಾನು ಆತನ ಮಂದೆಯಲ್ಲಿ ಒಬ್ಬನು; ” ಎಂದು ಉತ್ತರಿಸುವನು.

ಆದರೆ ಈ ದಿನದ ವಾಕ್ಯದಲ್ಲಿ, ಯೇಸು ತನ್ನ ಕುರಿತಾಗಿ ಮತ್ತು ತಂದೆಯ ಕುರಿತಾಗಿ ಎರಡು ಅದ್ಭುತವಾದ ಸತ್ಯಗಳನ್ನು ಪ್ರಕಟಿಸುತ್ತಾನೆ. ಆತನು, “ನಾನೇ ನಿಜವಾದ ದ್ರಾಕ್ಷಿಬಳ್ಳಿ” ಎಂದು ಘೋಷಿಸುತ್ತಾನೆ, ತರುವಾಯ “ನನ್ನ ತಂದೆಯು ತೋಟಗಾರನು” ಎಂದು ಹೇಳುತ್ತಾನೆ.

ಮೂರನೆಯ ಸತ್ಯವೂ ಪ್ರಕಟಿಸಲ್ಪಟ್ಟಿದೆ: ವಿಶ್ವಾಸಿಗಳೇ ಕೊಂಬೆಗಳು. “ನಾನು ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು…” (ಯೋಹಾ 15:5)

ಕರ್ತನು ನಮ್ಮೊಂದಿಗೆ ಈ ಸುಂದರವಾದ ಬಾಂಧವ್ಯವನ್ನು ಸ್ಥಾಪಿಸುವಾಗ, ಆತನು ತನ್ನ ನಿರೀಕ್ಷೆಯನ್ನೂ ಪ್ರಕಟಿಸುತ್ತಾನೆ. ನಾವು ಫಲಕೊಡದ ಕೊಂಬೆಗಳಾಗಿರಬೇಕೆಂದಾಗಲಿ ಅಥವಾ ಹುಳಿ ಮತ್ತು ನಿಷ್ಪ್ರಯೋಜಕ ಫಲಗಳನ್ನು ಕೊಡುವ ಬಳ್ಳಿಗಳಾಗಿರಬೇಕೆಂದಾಗಲಿ ಆತನು ಬಯಸುವುದಿಲ್ಲ. ಬದಲಾಗಿ, ನಾವು ಹೇರಳವಾಗಿ ಒಳ್ಳೆಯ ಫಲವನ್ನು ಕೊಡಬೇಕೆಂಬುದೇ ಆತನ ಅಪೇಕ್ಷೆಯಾಗಿದೆ.

ಆತ್ಮನ ಫಲವೇ ಆ ಒಳ್ಳೆಯ ಫಲವಾಗಿದೆ. “ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ ೦ ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥಹವುಗಳೇ.” (ಗಲಾತ್ಯ 5:22–23)

ಒಂದು ಕೊಂಬೆಯು ಬಳ್ಳಿಯೊಂದಿಗೆ ಜೋಡಿಸಲ್ಪಟ್ಟಿರುವುದರಿಂದಲೇ ತನ್ನ ಎಲ್ಲಾ ಪೋಷಣೆಯನ್ನು ಪಡೆಯುತ್ತದೆ. ಅದೇ ರೀತಿಯಲ್ಲಿ, ನೀವು ಕ್ರಿಸ್ತನೊಂದಿಗೆ ಐಕ್ಯರಾಗಿ ನೆಲೆಗೊಂಡಿರುವಾಗ, ಆತನ ಜೀವವು ನಿಮ್ಮೊಳಗೆ ಹರಿಯುತ್ತದೆ. ಆತನ ಸ್ವಭಾವ, ಆತನ ಗುಣ ಮತ್ತು ಆತನ ಕೃಪೆಯು ನಿಮ್ಮ ಜೀವನದಲ್ಲಿ ಹೆಚ್ಚೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ, ಮತ್ತು ಕ್ರಿಸ್ತನ ಮಧುರತೆಯು ನಿಮ್ಮ ಮೂಲಕ ಪ್ರತಿಫಲಿಸುತ್ತದೆ.

ಪ್ರಿಯ ದೇವರ ಮಕ್ಕಳೇ, ಇತರರು ನಿನ್ನ ಜೀವನದಲ್ಲಿ ಆತ್ಮನ ಫಲವನ್ನು ಕಾಣುವಾಗ, ಕರ್ತನು ಉತ್ತಮನಾಗಿದ್ದಾನೆಂಬುದನ್ನು ಅವರು ಸ್ವತಃ ಅನುಭವಿಸುವರು.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನೀವು ಬಹಳ ಫಲಕೊಡುವುದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುತ್ತದೆ; ಮತ್ತು ನನ್ನ ಶಿಷ್ಯರಾಗಿರುವಿರಿ.” (ಯೋಹಾ 15:8)

Leave A Comment

Your Comment
All comments are held for moderation.