ಜೂನ್ 26 – ಅಗ್ನಿಸ್ತಂಭ!
“ಯೆಹೋವನ ಮಂಜೂಷವು ಹೊರಡುವಾಗ ಮೋಶೆ – ಯೆಹೋವನೇ, ಎದ್ದು ಹೊರಡೋಣವಾಗಲಿ; ನಿನ್ನ ವೈರಿಗಳು ಚದರಿಹೋಗಲಿ; ನಿನ್ನ ಹಗೆಗಾರರು ಬೆಂಗೊಟ್ಟು ಓಡಿಹೋಗಲಿ ಎಂದು ಹೇಳುವನು.” (ಅರಣ್ಯ 10:35).
ಇಸ್ರಾಯೇಲ್ ಮಕ್ಕಳು ಮುಂದೆ ಸಾಗಬೇಕೆಂದು ಕರ್ತನು ಬಯಸಿದಾಗಲೆಲ್ಲಾ, ಹಗಲಿನಲ್ಲಿ ಮೇಘಸ್ತಂಭವೂ ಮತ್ತು ರಾತ್ರಿಯಲ್ಲಿ ಅಗ್ನಿಸ್ತಂಭವೂ ಮೇಲಕ್ಕೆ ಏಳುತ್ತಿದ್ದವು. ದೇವರು ಎದ್ದಾಗ ಅಗ್ನಿಸ್ತಂಭವು ಎದ್ದಿತು, ಒಡಂಬಡಿಕೆಯ ಪೆಟ್ಟಿಗೆಯು ಎದ್ದಿತು ಮತ್ತು ಇಸ್ರಾಯೇಲ್ ಜನರು ಎದ್ದರು. ಕರ್ತನು ನಮಗಾಗಿ ಏಳುವಾಗ, ನಾವು ಕೂಡ ಕರ್ತನಿಗಾಗಿ ಏಳಬೇಕು.
ಅಗ್ನಿಸ್ತಂಭವು ಎದ್ದ ಆ ರಾತ್ರಿಯನ್ನು ನಿಮ್ಮ ಕಣ್ಣಮುಂದೆ ತಂದುಕೊಳ್ಳಿ. ಒಂದು ದೊಡ್ಡ ರಾಕೆಟ್ ಚಂದ್ರನ ಕಡೆಗೆ ಬಾಹ್ಯಾಕಾಶಕ್ಕೆ ಉಡಾವಣೆಯಾಗುವಾಗ, ಅದು ಜ್ವಾಲೆ ಮತ್ತು ಬೆಂಕಿಯನ್ನು ಉಗುಳುತ್ತಾ, ವಾತಾವರಣವನ್ನು ಹೊಗೆಯಿಂದ ತುಂಬಿಸಿ ಮೇಲಕ್ಕೆ ಜಿಗಿಯುತ್ತದೆ. ಅದೇ ರೀತಿಯಲ್ಲಿ, ಕರ್ತನು ಏಳುವಾಗ, ಕೋಟ್ಯಂತರ ರಾಕೆಟ್‌ಗಳು ಒಟ್ಟಿಗೆ ಮೇಲಕ್ಕೆ ಏಳುತ್ತಿರುವಂತೆ ಆತನು ಉರಿಯುತ್ತಿರುವ ಜ್ವಾಲೆಗಳೊಂದಿಗೆ ಅಗ್ನಿಸ್ತಂಭವಾಗಿ ಕಾಣಿಸಿಕೊಳ್ಳುತ್ತಾನೆ. ಕಾಡುಮೃಗಗಳು ಮತ್ತು ವಿಷಜಂತುಗಳು ಭಯದಿಂದ ಓಡಿಹೋಗುತ್ತವೆ. ಉರಿ ಸರ್ಪಗಳು ಮತ್ತು ಚೇಳುಗಳು ಭಸ್ಮವಾಗುತ್ತವೆ.
ರಾತ್ರಿಯ ಸಮಯದಲ್ಲಿ ಕತ್ತಲೆಯು ಬೆಳಕಾಯಿತು, ಚಳಿಯು ಉಷ್ಣತೆಯಾಯಿತು ಮತ್ತು ಇಸ್ರಾಯೇಲ್ ಜನರು ಪ್ರಕಾಶಮಾನವಾದ ಬೆಳಕಿನಲ್ಲಿ ಮತ್ತು ಹಿತಕರವಾದ ನೆಮ್ಮದಿಯಲ್ಲಿ ನಡೆದರು. ಕರ್ತನು ನಮ್ಮೊಂದಿಗಿರುವುದು, ನಮ್ಮೊಂದಿಗೆ ಏಳುವುದು ಮತ್ತು ನಮ್ಮ ಮಧ್ಯೆ ವಾಸಿಸುವುದು ಎಷ್ಟು ಧನ್ಯವಾದದ್ದು! ಅಗ್ನಿಸ್ತಂಭವು ಎದ್ದಾಗಲೆಲ್ಲಾ, ಕರ್ತನೇ ತಮಗಾಗಿ ಏಳುತ್ತಿದ್ದಾನೆ ಎಂದು ಇಸ್ರಾಯೇಲ್ಯರು ತಿಳಿದುಕೊಳ್ಳುತ್ತಿದ್ದರು. ಶತ್ರುವು ಪ್ರವಾಹದಂತೆ ಬರುವಾಗ, ಕರ್ತನ ಆತ್ಮನು ಅವನಿಗೆ ವಿರೋಧವಾಗಿ ಧ್ವಜವನ್ನು ಎತ್ತುವನು.
ನಮ್ಮ ಕರ್ತನು ಹೇಗಿದ್ದಾನೆ? “ಆತನ ಕಣ್ಣುಗಳು ಅಗ್ನಿಜ್ವಾಲೆಯಂತಿದ್ದವು.” (ಪ್ರಕ 1:14). ಪ್ರವಾದಿ ಯೆಹೆಜ್ಕೇಲನು ಹೀಗೆ ಬರೆಯುತ್ತಾನೆ: “ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತಕಾಂತಿಯನ್ನು ಕಂಡೆನು; .” (ಯೆಹೆ 1:27).
ಮತ್ತೊಮ್ಮೆ ಸತ್ಯವೇದವು ಹೀಗೆ ಹೇಳುತ್ತದೆ: “ನಾನು ನೋಡುತ್ತಿದ್ದ ಹಾಗೆ ನ್ಯಾಯಾಸನಗಳು ಹಾಕಲ್ಪಟ್ಟವು, ಮಹಾವೃದ್ಧನೊಬ್ಬನು ಅಸೀನನಾದನ; ಆತನ ಉಡುಪು ಹಿಮದಂತೆ ಶುಭ್ರವಾಗಿತ್ತು, ಆತನ ತಲೆಯ ಕೂದಲು ನಿರ್ಮಲವಾದ ಬಿಳಿಯ ಉಣ್ಣೆಯಂತಿತ್ತು; ಆತನ ನ್ಯಾಯಾಸನವು ಅಗ್ನಿಜ್ವಾಲೆಗಳು, ಅದರ ಚಕ್ರಗಳು ಧಗಧಗಿಸುವ ಬೆಂಕಿಯೇ. ನ್ಯಾಯಾಸನದ ಮುಂದೆ ಉರಿಯ ಪ್ರವಾಹವು ಉಕ್ಕಿ ಹರಿದುಬಂತು.” (ದಾನಿಯೇಲ 7:9,10).
ಇಂತಹ ಸರ್ವಶಕ್ತನಾದ ದೇವರು ಎದ್ದು ನಿಂತರೆ, ಆ ದೃಶ್ಯವು ಎಷ್ಟು ಮಹಿಮೆಯುಳ್ಳದ್ದಾಗಿರಬಹುದು! ಆತನ ಶತ್ರುಗಳು ಓಡಿಹೋಗಿ ಚದರಿಹೋಗುತ್ತಾರೆ. ಅಶುದ್ಧಾತ್ಮಗಳು ಆತನ ಸನ್ನಿಧಿಯಲ್ಲಿ ಕೂಗಾಡುತ್ತಾ ಓಡಿಹೋಗುತ್ತವೆ. ಮಾಟಮಂತ್ರಗಳು ಮುರಿದುಬೀಳುತ್ತವೆ. ದುಷ್ಟ ಶಕ್ತಿಗಳು ನಾಶವಾಗುತ್ತವೆ. ಕ್ಷುದ್ರವಿದ್ಯೆಯ ಬಂಧನಗಳು ಸುಟ್ಟು ಬೂದಿಯಾಗುತ್ತವೆ.
ಪ್ರೀತಿಯ ದೇವರ ಮಕ್ಕಳೇ, ಈ ದೇವರು ನಮ್ಮ ಪಕ್ಷದಲ್ಲಿದ್ದಾನೆ. ಆತನು ನಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾನೆ. ಆತನು ನಮಗಾಗಿ ಏಳುವನು. ಆತನು ನಮ್ಮ ಪ್ರೀತಿಯ ತಂದೆಯಾಗಿದ್ದಾನೆ. ಅದೇ ಸಮಯದಲ್ಲಿ, ಆತನು ನಮ್ಮ ಶತ್ರುಗಳ ಪಾಲಿಗೆ “ದಹಿಸುವ ಅಗ್ನಿಯಾಗಿದ್ದಾನೆ” (ಇಬ್ರಿ 12:29).
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “‘ನಾನೇ ಅದರ ಸುತ್ತುಮುತ್ತಲು ಅಗ್ನಿಪ್ರಾಕಾರವೂ ಅದರೊಳಗೆ ವೈಭವವೂ ಆಗಿರುವೆನು ಎಂಬುದು ಯೆಹೋವನ ನುಡಿ.” (ಜೆಕ 2:5).