Appam, Appam - Kannada

ನವೆಂಬರ್ 09 – ನಮಗೋಸ್ಕರ ಬೇಡುವವನು!

“ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿದ್ದಾನೆ.” ರೋಮಾ 8:34

ಪುನರುತ್ಥಾನ ಹೊಂದಿದ ಯೇಸು ಕ್ರಿಸ್ತನು ಒಂದೆಡೆ ನಮ್ಮೊಂದಿಗೆ ಮಾತನಾಡುತ್ತಾನೆ, ಇನ್ನೊಂದೆಡೆ ತಂದೆಯ ಮುಂದೆ ನಮಗಾಗಿ ವಿಜ್ಞಾಪನೆ ಮಾಡುತ್ತಾನೆ. ಆತನು ನಮ್ಮೊಂದಿಗಿದ್ದಾನೆ, ಅದೇ ಸಮಯದಲ್ಲಿ ತಂದೆಯ ಬಲಗಡೆಯಲ್ಲಿ ಕುಳಿತು, ನಮಗಾಗಿ ವಿಜ್ಞಾಪನೆ ಮಾಡುತ್ತಿದ್ದಾನೆ.

ಹಲವು ವರ್ಷಗಳ ಹಿಂದೆ, ಒಬ್ಬ ಯುವಕನು ತನ್ನ ಸ್ವಂತ ಕುಟುಂಬದ ಒಂಬತ್ತು ಜನರನ್ನು ಕ್ರೂರವಾಗಿ ಹತ್ಯೆ ಮಾಡಿ ದೊಡ್ಡ ಸಂಚಲನವನ್ನು ಸೃಷ್ಟಿಸಿದನು. ಇಡೀ ಪ್ರಪಂಚವು ಅವನ ಮೇಲೆ ಕೋಪಗೊಂಡಿತ್ತು, ಮತ್ತು ಅವನ ಸ್ವಂತ ಕುಟುಂಬದವರೂ ಅವನನ್ನು ತಿರಸ್ಕರಿಸಿದರು. ಆದರೆ ಅವನ ಪರ ವಕೀಲನು ಅವನ ಪರವಾಗಿ ವಾದಿಸಿ ವಿಜ್ಞಾಪಿಸಿದನು. ಆ ಅಪರಾಧಿಯು ತನ್ನ ವಕೀಲನಿಗೆ ಎಷ್ಟು ಕೃತಜ್ಞನಾಗಿದ್ದಿರಬೇಕು!

ಒಬ್ಬ ವ್ಯಕ್ತಿಯು ಎಷ್ಟೇ ದೊಡ್ಡ ಅಪರಾಧಿಯಾಗಿರಲಿ, ಅಥವಾ ಈ ಲೋಕದಲ್ಲಿ ಎಷ್ಟೇ ದೊಡ್ಡ ಪಾಪಿಯಾಗಿದ್ದರೂ, ಅವನು ನಿಜವಾದ ಪಶ್ಚಾತ್ತಾಪದಿಂದ ಮತ್ತು ಮುರಿಯಲ್ಪಟ್ಟ ಹೃದಯದಿಂದ ಕ್ರಿಸ್ತನ ಬಳಿಗೆ ಬಂದಾಗ ಅವನಿಗೆ ವಿಮೋಚನೆಯಿದೆ. ಒಬ್ಬನು ತನ್ನನ್ನು ತಾನು ತಗ್ಗಿಸಿಕೊಂಡು, “ಯೇಸುವೇ, ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸು” ಎಂದು ಅರಿಕೆ ಮಾಡುವಾಗ, ಕ್ರಿಸ್ತನು ತನ್ನ ಗಾಯಗಳನ್ನು ಮತ್ತು ತನ್ನ ರಕ್ತವನ್ನು ತಂದೆಯ ಮುಂದೆ ಅರ್ಪಿಸಿ, ಆ ವ್ಯಕ್ತಿಯ ಪರವಾಗಿ ವಾದಿಸುತ್ತಾನೆ.

ಹಳೆಯ ಒಡಂಬಡಿಕೆಯ ಕಾಲದಲ್ಲಿ, ಯಾಜಕನು ಅಪರಾಧಿಯಾದ ಪಾಪಿಗೂ ನೀತಿವಂತನಾದ ದೇವರಿಗೂ ಮಧ್ಯೆ ನಿಲ್ಲುತ್ತಿದ್ದನು. ಅವನು ಪಾಪಿಯ ಪರವಾಗಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿ, ದೇವರಿಗೆ ವಿಜ್ಞಾಪನೆ ಮಾಡುತ್ತಾ, “ಓ ದೇವರೇ, ಈ ವ್ಯಕ್ತಿಯ ಪಾಪಗಳನ್ನು ಕ್ಷಮಿಸು ಮತ್ತು ಅವನ ಅಧರ್ಮಗಳನ್ನು ಇನ್ನು ನೆನಪಿಗೆ ತರಬೇಡ” ಎಂದು ಹೇಳುತ್ತಿದ್ದನು. ಇಂದು, ಕ್ರಿಸ್ತನು ನಮ್ಮ ಮಹಾಯಾಜಕನಾಗಿ ನಿಂತಿದ್ದಾನೆ. ಒಂದೆಡೆ, ಆತನು ನಿಮ್ಮೊಂದಿಗೆ ಮಾತನಾಡುತ್ತಾ, “ಹೋಗು, ಇನ್ನು ಮೇಲೆ ಪಾಪ ಮಾಡಬೇಡ” ಎಂದು ಹೇಳುತ್ತಾನೆ. ಇನ್ನೊಂದೆಡೆ, ಆತನು ನಿಮ್ಮ ಪರವಾಗಿ ತಂದೆಯೊಂದಿಗೆ ಮಾತನಾಡಿ, ರಕ್ಷಣೆಯ ಆನಂದವನ್ನು ನಿಮಗಾಗಿ ಪಡೆದುಕೊಡುತ್ತಾನೆ.

“ಕ್ರಿಸ್ತನು ಬರಲಿರುವ ಆರ್ಶೀವಾದಗಳಿಗೆ ಮಹಾಯಾಜಕನಾಗಿ ಬಂದನು” ಮತ್ತು ಮೇಕೆಗಳ ಹಾಗೂ ಕರುಗಳ ರಕ್ತದಿಂದಲ್ಲ, ಆದರೆ ತನ್ನ ಸ್ವಂತ ರಕ್ತದಿಂದ ನಿತ್ಯವಾದ ವಿಮೋಚನೆಯನ್ನು ನಮಗಾಗಿ ಸಾಧಿಸಿ, ಒಂದೇ ಬಾರಿಗೆ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿದನು (ಇಬ್ರಿಯ 9:11–12).

ಸೈತಾನನು ಸಿಮೋನ ಪೇತ್ರನನ್ನು ಗೋಧಿಯಂತೆ ತೂರಲು ಅಪ್ಪಣೆ ಕೇಳಿದಾಗ, ಪೇತ್ರನ ನಂಬಿಕೆಯು ಕ್ಷೀಣಿಸದಂತೆ ಕ್ರಿಸ್ತನು ತಂದೆಯ ಮುಂದೆ ನಿಂತು ಪ್ರಾರ್ಥಿಸಿದನು (ಲೂಕ 22:31–32). ಪೇತ್ರನ ಪರವಾಗಿ ತಂದೆಯೊಂದಿಗೆ ಮಾತನಾಡಿದ್ದ ಯೇಸು, ನಂತರ ಪೇತ್ರನಿಗೆ, “ನೀನು ಗುಣಹೊಂದಿದ ಮೇಲೆ, ನಿನ್ನ ಸಹೋದರರನ್ನು ಸ್ಥಿರಪಡಿಸು” ಎಂದನು.

ಪ್ರಿಯ ದೇವರ ಮಕ್ಕಳೇ, ನಿಮ್ಮ ಪರವಾಗಿ ವಿಜ್ಞಾಪನೆ ಮಾಡುತ್ತಾ, ತಂದೆಯ ಬಲಗಡೆಯಲ್ಲಿ ಅಧಿಕಾರದಿಂದ ನಿಂತಿರುವ ಕ್ರಿಸ್ತನನ್ನು ನೋಡಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:

“ಆದರೆ ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ” (ಯೋಹಾ 17:20).

Leave A Comment

Your Comment
All comments are held for moderation.