ನವೆಂಬರ್ 02 – ದೇವರ ಮಹಿಮೆ!
“ಏಳು ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ. ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು.” ಯೆಶಾ ೬೦:೧-೨
ಸಮಯ ಕಳೆದಂತೆ, ಈ ಲೋಕವು ಹೆಚ್ಚಿನ ಕತ್ತಲೆಯತ್ತ ಮತ್ತು ಗಾಡಾಂಧಕಾರದತ್ತ ಸಾಗುತ್ತಿದೆ. ಇದು ಕ್ರಿಸ್ತವಿರೋಧಿಯ ಕ್ರೂರವಾದ ಆಳ್ವಿಕೆಯತ್ತ ಸಾಗುತ್ತಿದೆ. ಕತ್ತಲೆಯ ಶಕ್ತಿಗಳು ಬಲಗೊಳ್ಳುತ್ತಿವೆ ಮತ್ತು ಸೈತಾನನು ಅನೇಕರನ್ನು ಮರುಳುಗೊಳಿಸಲು ದೊಡ್ಡ ಸಂಚನ್ನು ಮಾಡುತ್ತಿದ್ದಾನೆ.
ಅದೇ ಸಮಯದಲ್ಲಿ, ನಾವು ಕರ್ತನ ಮಹಿಮೆಯುಳ್ಳ ಆಗಮನದತ್ತ ಧಾವಿಸುತ್ತಿದ್ದೇವೆ. ಯೇಸು ಕ್ರಿಸ್ತನು ತಂದೆಯ ಮಹಿಮೆಯಲ್ಲಿ, ಪ್ರಧಾನ ದೂತನ ತೂತ್ತೂರಿ ಧ್ವನಿಯೊಂದಿಗೆ ಪರಲೋಕದಿಂದ ಇಳಿದುಬರುವನು. ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದೇಳುವರು. ನಂತರ ಜೀವಂತವಾಗಿರುವ ನಾವು ಅವರೊಂದಿಗೆ ಮೇಘಗಳಲ್ಲಿ ಕರ್ತನನ್ನು ಎದುರುಗೊಳ್ಳಲು ಒಟ್ಟಿಗೆ ಒಯ್ಯಲ್ಪಡುವೆವು.
ಕತ್ತಲೆಯು ಮತ್ತು ಗಾಡಾಂಧಕಾರವು ಲೋಕವನ್ನು ಮುಚ್ಚುವಾಗ, ಕರ್ತನ ಮಹಿಮೆಯು ನಿಮ್ಮ ಮೇಲೆ ಏಕೆ ಉದಯಿಸುತ್ತದೆ? ನೀವು ಕರ್ತನಿಗಾಗಿ ಎದ್ದು ಪ್ರಕಾಶಿಸಬೇಕೆಂಬ ಉದ್ದೇಶಕ್ಕಾಗಿ: “ಏಳು ಪ್ರಕಾಶಿಸು; ನಿನಗೆ ಬೆಳಕು ಬಂತು!” (ಯೆಶಾ 60:1).
ಈ ಪ್ರಸ್ತುತ ಕೃಪೆಯ ಕಾಲವು ಕರ್ತನನ್ನು ಶಕ್ತಿಯುತವಾಗಿ ಸೇವಿಸಲು ಸಿಕ್ಕಿರುವ ಅಮೂಲ್ಯವಾದ ಅವಕಾಶವಾಗಿದೆ. ನಿಮಗೆ ಸಾಧ್ಯವಾಗುವಷ್ಟು ಆತನಿಗಾಗಿ ಕೆಲಸ ಮಾಡಿರಿ, ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸುವಾರ್ತೆಯನ್ನು ಸಾರಿರಿ.
ನಿಮ್ಮ ಮೇಲೆ ಉದಯಿಸುವ ಕರ್ತನ ಮಹಿಮೆಯು ಬೆಳಕನ್ನು ಮತ್ತು ತೇಜಸ್ಸನ್ನು ತರುತ್ತದೆ. ಕತ್ತಲೆಯಿಂದ ಬೆಳಕನ್ನು ಹೊಳೆಯುವಂತೆ ಆಜ್ಞಾಪಿಸಿದ ದೇವರು, ಜನರ ಮುಂದೆ ನೀವು ಪ್ರಕಾಶಿಸುವಂತೆ ಮಾಡುವನು. ರಾತ್ರಿಯಲ್ಲಿ ಬೆಳಕನ್ನು ನೀಡಲು ಆತನು ಸೂರ್ಯ-ಚಂದ್ರ-ನಕ್ಷತ್ರಗಳನ್ನು ಸೃಷ್ಟಿಸಿದಂತೆಯೇ, ಈ ಕತ್ತಲೆಯ ಲೋಕದಲ್ಲಿ ನಿಮ್ಮನ್ನು ಪ್ರಕಾಶಿಸುವ ಬೆಳಕಾಗಿ ಇರಿಸಿದ್ದಾನೆ.
ಪಾಪವು ಕತ್ತಲೆಯಾಗಿದೆ, ಆದರೆ ಸುವಾರ್ತೆಯು ಬೆಳಕಾಗಿದೆ. ಪಾಪವು ಮಾನವನ ಆತ್ಮದಲ್ಲಿ ಕತ್ತಲೆಯನ್ನು ತರುತ್ತದೆ. ಕತ್ತಲೆಯ ರಾಜ್ಯದ ಅಧಿಪತಿಯು ಅನೇಕರ ಮನಸ್ಸನ್ನು ಕುರುಡುಗೊಳಿಸಿ ಕತ್ತಲೆಯಲ್ಲಿ ಬಂಧಿಸಿಟ್ಟಿದ್ದಾನೆ. ನೀವು ಸುವಾರ್ತೆಯನ್ನು ಸಾರುವಾಗ, ಅದರ ಮಹಿಮೆಯುಳ್ಳ ಬೆಳಕು ಆ ಕತ್ತಲೆಯನ್ನು ಓಡಿಸಿ ಪರಲೋಕದ ಬೆಳಕನ್ನು ತರುತ್ತದೆ. ಆಗ ಜನರು ನಿತ್ಯತ್ವಕ್ಕೆ ಬಾಧ್ಯಸ್ಥರಾಗುತ್ತಾರೆ ಮತ್ತು ಮಹಿಮೆಯುಳ್ಳ ಪರಲೋಕ ರಾಜ್ಯದ ಬಗ್ಗೆ ತಿಳಿದುಕೊಳ್ಳುತ್ತಾರೆ.
ಪ್ರಿಯ ದೇವರ ಮಕ್ಕಳೇ, ನಿಮ್ಮಲ್ಲಿರುವ ಬೆಳಕು ದಿನದಿಂದ ದಿನಕ್ಕೆ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿರಲಿ, ಇದರಿಂದ ನೀವು ಬೆಳಕಿನ ಮಕ್ಕಳಾಗಿ ನಡೆಯಬಹುದು. ಪೂರ್ಣ ಶಕ್ತಿಯಿಂದ ಜನರಿಗೆ ಮಹಿಮೆಯ ಸುವಾರ್ತೆಯನ್ನು ಸಾರಿರಿ. ಕರ್ತನ ಬರೋಣವು ಅತೀ ಸಮೀಪದಲ್ಲಿದೆ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಾವೆಲ್ಲರೂ ಮುಸುಕು ತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದ್ರಷ್ಟಿಸುವವರಾಗಿದ್ದು ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಹೋಗುತ್ತಾ ಆ ಪ್ರಭಾವದ ಸಾರೂಪ್ಯವುಳ್ಳವರೇ ಆಗುತ್ತೇವೆ.” (2 ಕೊರಿಂಥ 3:18).