ಸೆಪ್ಟೆಂಬರ್ 27 –ದೇವರು ನಿಮಗೆ ನೂತನ ಬಲವನ್ನು ಅನುಗ್ರಹಿಸುವನು!
“ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹುಬಲವನ್ನು ದಯಪಾಲಿಸುವನು.” (ಯೆಶಾ 40:29)
ಈ ಲೋಕದಲ್ಲಿ ಜೀವನದ ಯಾವುದೋ ಒಂದು ಹಂತದಲ್ಲಿ ಬಳಲಿಕೆಯನ್ನು ಅನುಭವಿಸದೇ ಇರುವ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ.
ನಂಬಿಕೆಯುಳ್ಳವರು ಮತ್ತು ಸೇವಕರು ಬಳಲುತ್ತಾರೆ. ಬಡವರು ಬಳಲುತ್ತಾರೆ ಮತ್ತು ಶ್ರೀಮಂತರು ಬಳಲುತ್ತಾರೆ. ನಮ್ಮ ಪರಿಸ್ಥಿತಿಗಳು ಹೇಗೇ ಇರಲಿ, ಬಳಲಿಕೆಯು ಪ್ರತಿಯೊಬ್ಬ ಮನುಷ್ಯರನ್ನು ಕಾಡುವ ಅನುಭವವಾಗಿದೆ.
ಸೈತಾನನು ನಂಬಿಕೆಯುಳ್ಳವರ ವಿರುದ್ಧ ಬಳಲಿಕೆಯನ್ನು ಒಂದು ಆಯುಧವಾಗಿ ಆಗಾಗ್ಗೆ ಬಳಸುತ್ತಾನೆ. ಆದರೆ ಕರ್ತನು, ಬಳಲಿಕೆಯ ಸಮಯದಲ್ಲಿ ನಿಮಗೆ ಶಕ್ತಿಯನ್ನು ಕೊಡುತ್ತಾನೆ, ನಿಮ್ಮ ಬಲವನ್ನು ಹೆಚ್ಚಿಸುತ್ತಾನೆ ಮತ್ತು ನಿಮ್ಮ ಧೈರ್ಯವನ್ನು ನವೀಕರಿಸುತ್ತಾನೆ. ಆತನು ನಿಮ್ಮನ್ನು ಸಂತೋಷದ ತೈಲದಿಂದ ಅಭಿಷೇಕಿಸುತ್ತಾನೆ, ಇದರಿಂದ ಕಷ್ಟಕರವಾದ ಆ ಕ್ಷಣಗಳಲ್ಲಿಯೂ ನೀವು ಆತನನ್ನು ಸ್ತುತಿಸಬಹುದು ಮತ್ತು ಆತನ ಸಮ್ಮುಖದಲ್ಲಿ ಆನಂದಿಸಬಹುದು.
ಯೋನನ ಅನುಭವವನ್ನು ಪರಿಗಣಿಸಿ: “ನನ್ನ ಆತ್ಮವು ನನ್ನಲ್ಲಿ ಕುಂದಿದಾಗ ಯೆಹೋವನಾದ ನಿನ್ನನ್ನು ಸ್ಮರಿಸಿದೆನು; ನನ್ನ ಬಿನ್ನಹವು ನಿನಗೆ ಮುಟ್ಟಿತು, ನಿನ್ನ ಪರಿಶುದ್ಧಾಲಯಕ್ಕೆ ಸೇರಿತು.” (ಯೋನ 2:7) ಬಳಲಿಕೆಯು ನಿಮ್ಮ ಮೇಲೆ ಬಂದಾಗಲೆಲ್ಲಾ, ದೃಢವಾದ ನಂಬಿಕೆಯಲ್ಲಿ ಕರ್ತನಲ್ಲಿ ನೆಲೆಗೊಳ್ಳಿರಿ.
ಯೋನನು ದೇವರ ಚಿತ್ತದಿಂದ ಓಡಿಹೋಗಿದ್ದನು. ಆತನನ್ನು ಒಂದು ದೊಡ್ಡ ಮೀನು ನುಂಗಿತು ಮತ್ತು ಆತನು ಮೀನಿನ ಹೊಟ್ಟೆಯೊಳಗೆ ಸಿಲುಕಿಕೊಂಡನು, ಅಲ್ಲಿ ಆತನು ತೀವ್ರವಾಗಿ ಬಳಲಿ ಹೋದನು ಮತ್ತು ಕಷ್ಟಪಟ್ಟನು. ಆದರೂ, ತನ್ನ ಬಳಲಿಕೆಯ ಮಧ್ಯೆಯೂ ಆತನು ಕರ್ತನನ್ನು ನೋಡಿದನು ಮತ್ತು ನೂತನವಾದ ನಂಬಿಕೆಯಿಂದ ಪ್ರಾರ್ಥಿಸಿದನು. ಕರ್ತನು ಆತನ ಪ್ರಾರ್ಥನೆಯನ್ನು ಕೇಳಿದನು, ಮತ್ತು ಮೀನು ದಡಕ್ಕೆ ಬಂದು ಯೋನನನ್ನು ಒಣ ನೆಲದ ಮೇಲೆ ಕಾರಿಬಿಟ್ಟಿತು. ಆತನ ಬಳಲಿಕೆಯು ನೂತನ ಧೈರ್ಯವಾಗಿ ಮಾರ್ಪಟ್ಟಿತು, ಮತ್ತು ಆತನು ನಿನವೆಗೆ ಹೋಗಿ ದೇವರ ವಾಕ್ಯಗಳನ್ನು ಸಾರಲು ಪ್ರಾರಂಭಿಸಿದನು.
ಒಮ್ಮೆ ಒಬ್ಬ ವ್ಯಾಪಾರಿಯು ತನ್ನ ವ್ಯಾಪಾರದಲ್ಲಿ ಸತತ ನಷ್ಟವನ್ನು ಅನುಭವಿಸಿದನು. ಬಳಲಿಕೆಯು ಮತ್ತು ನಿರಾಶೆಯು ಆತನನ್ನು ಆವರಿಸಿಕೊಂಡಿತು, ಮತ್ತು ಆತನು ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದನು. ಆತನ ತೀವ್ರ ಭಾವನಾತ್ಮಕ ವೇದನೆಯಿಂದಾಗಿ, ಆತನ ದೇಹದಾದ್ಯಂತ ನೋವಿನ ಕೆಂಪು ಬಣ್ಣದ ಗಾಯಗಳು ಕಾಣಿಸಿಕೊಂಡವು. ವೈದ್ಯರು ಆತನಿಗೆ ಹಾಸಿಗೆಯಲ್ಲೇ ಇರಲು ಮತ್ತು ಎದ್ದು ನಡೆಯಬಾರದೆಂದು ಸಲಹೆಯನ್ನು ನೀಡಿದರು.
ನಿರಾಶೆಯ ಆಳದಲ್ಲಿ, ಆತನು ಒಂದು ಕಾಗದದ ಹಾಳೆಯನ್ನು ತೆಗೆದುಕೊಂಡು ತನ್ನ ಹೆಂಡತಿಗೆ ಪತ್ರ ಬರೆದನು: ” ಪ್ರಿಯಳೇ, ನಾಳೆ ನಾನು ಬದುಕಿರುವುದಿಲ್ಲ. ದಯವಿಟ್ಟು ನನ್ನ ಅಂತ್ಯಕ್ರಿಯೆಯ ಕಾರ್ಯಕ್ಕೆ ವ್ಯವಸ್ಥೆ ಮಾಡಿ.”
ಆತನು ವಾಸಿಸುತ್ತಿದ್ದ ಕೋಣೆಯು ಕಾಕತಾಳೀಯವಾಗಿ ಆತ್ಮೀಕ ಸಭೆಯು ನಡೆಯುತ್ತಿದ್ದ ಸ್ಥಳದ ಮೇಲಂತಸ್ತಿನಲ್ಲಿತ್ತು. ಕೆಳಗಿನ ನಂಬಿಕೆಯುಳ್ಳವರು ತುಂಬಾ ಸಂತೋಷದಿಂದ ಕರ್ತನನ್ನು ಆರಾಧಿಸುತ್ತಿದ್ದರು, ಹಾಡುತ್ತಿದ್ದರು ಮತ್ತು ಉತ್ಸಾಹದಿಂದ ಆತನನ್ನು ಸ್ತುತಿಸುತ್ತಿದ್ದರು.
ಅವರ ಆರಾಧನೆಯನ್ನು ಕೇಳಿ, ಆತನು ಮೆಲ್ಲನೆ ಕೆಳಗೆ ಬಂದು ಪ್ರಾರ್ಥನಾ ಕೋಣೆಗೆ ಪ್ರವೇಶಿಸಿದನು. ಅದೇ ಕ್ಷಣದಲ್ಲಿ, ಬೋಧಿಸುತ್ತಿದ್ದ ಸೇವಕನು ಈ ವಚನದ ಆಧಾರದ ಮೇಲೆ ತನ್ನ ಸಂದೇಶವನ್ನು ನೀಡುತ್ತಿದ್ದನು: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೊಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7)
ಆ ಮಾತುಗಳು ಆತನ ಹೃದಯವನ್ನು ಆಳವಾಗಿ ಸ್ಪರ್ಶಿಸಿದವು. ಆತನು ಹೀಗೆ ಯೋಚಿಸಿದನು, “ನನ್ನ ಕುರಿತು ಕಾಳಜಿ ವಹಿಸುವವರು ಯಾರಾದರೂ ಇದ್ದರೆ, ನಾನು ಏಕೆ ಚಿಂತಿಸುವುದನ್ನು ಮತ್ತು ನಿರಾಶೆಗೊಳ್ಳುವುದನ್ನು ಮುಂದುವರಿಸಬೇಕು?” ಅಷ್ಟೇ ಸಾಕಿತ್ತು. ಹಠಾತ್ತನೇ, ಅಣೆಕಟ್ಟನ್ನು ಭೇದಿಸಿಕೊಂಡು ಹರಿಯುವ ಪ್ರವಾಹದಂತೆ, ದೇವರ ಶಕ್ತಿಯು ಆತನ ಮೇಲೆ ಬಂದಿತು. ಮೇಲಿನಿಂದ ಬಲವು ಆತನನ್ನು ಆವರಿಸಿಕೊಂಡಿತು. ಆತನು ಕರ್ತನಲ್ಲಿ ತನ್ನನ್ನು ತಾನು ಧೈರ್ಯಪಡಿಸಿಕೊಂಡನು, “ಇಂದಿನಿಂದ, ನಾನು ನನ್ನನ್ನು ಬಳಲಿಕೆಗೆ ಒಪ್ಪಿಸುವುದಿಲ್ಲ” ಎಂದು ಹೇಳಿದನು. ಅಂದಿನಿಂದ, ಆತನ ಜೀವನದಲ್ಲಿ ಉನ್ನತವಾದ ಹೊಸತನ ಪ್ರಾರಂಭವಾಯಿತು.
ಪ್ರೀತಿಯ ದೇವರ ಮಕ್ಕಳೇ, ನಿಮ್ಮನ್ನು ಕಾಳಜಿ ವಹಿಸುವ ಕರ್ತನು ನಿಮ್ಮ ಬಳಲಿಕೆಯನ್ನು ಶಕ್ತಿಯನ್ನಾಗಿ ಬದಲಾಯಿಸುತ್ತಾನೆ ಮತ್ತು ಖಂಡಿತವಾಗಿ ನಿಮ್ಮ ಜೀವನದಲ್ಲಿ ಅದ್ಭುತವನ್ನು ಮಾಡುತ್ತಾನೆ. ನಿಮ್ಮ ಪ್ರಸ್ತುತ ಸ್ಥಿತಿಯು ನಿಮ್ಮ ಕಥೆಯ ಅಂತ್ಯವಲ್ಲ. ನಿಮ್ಮ ಶಕ್ತಿಯು ವಿಫಲವಾದಾಗ, ಆತನ ಶಕ್ತಿಯು ಸಾಕಾಗುತ್ತದೆ. ನಿಮ್ಮ ನಂಬಿಕೆಯನ್ನು ಮೌನಗೊಳಿಸಲು ಬಳಲಿಕೆಯನ್ನು ಅನುಮತಿಸಬೇಡಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22)