Appam, Appam - Kannada

ಜುಲೈ 27 –ಯಜ್ಞವೇದಿಯ ಮೇಲಿನ ಬೆಂಕಿ!

“ಬೆಂಕಿಯು ಯಜ್ಞವೇದಿಯ ಮೇಲೆ ಯಾವಾಗಲೂ ಉರಿಯುತ್ತಿರಬೇಕು; ಆರಿಹೋಗಬಾರದು.” (ಯಾಜಕ 6:13)

ಹಳೆಯ ಒಡಂಬಡಿಕೆಯಲ್ಲಿ, ಯಜ್ಞವೇದಿಯು ಯಾಜಕರು ದೇವರನ್ನು ಸಂಧಿಸುವ ಸ್ಥಳವಾಗಿತ್ತು. ಯಜ್ಞವೇದಿಯ ಮೇಲೆ ಪ್ರಾಣಿಗಳ ಯಜ್ಞಗಳನ್ನು ಕರ್ತನಿಗೆ ಸಮರ್ಪಿಸಿದಾಗ, ದೇವರು ಅವುಗಳ ಸುವಾಸನೆಯನ್ನು ಆನಂದದಿಂದ ಸ್ವೀಕರಿಸುತ್ತಿದ್ದನು. ಆತನು ಪ್ರಸನ್ನನಾಗಿ ಯಜ್ಞವೇದಿಯ ಜ್ವಾಲೆಯಲ್ಲಿ ಇಳಿದು ಬಂದು ತನ್ನ ಜನರೊಂದಿಗೆ ಮಾತನಾಡುತ್ತಿದ್ದನು.

ಹೊಸ ಒಡಂಬಡಿಕೆಯಲ್ಲಿ, ನೀವೇ ದೇವರ ಯಜ್ಞವೇದಿಯಾಗಿದ್ದೀರಿ. ನಿಮ್ಮ ಆತ್ಮ, ಪ್ರಾಣ ಮತ್ತು ಶರೀರಗಳನ್ನು ಆತನಿಗೆ ಸಜೀವಯಜ್ಞವಾಗಿ ಸಮರ್ಪಿಸಬೇಕು. ನಿಮ್ಮನ್ನು ಪೂರ್ಣವಾಗಿ ಒಪ್ಪಿಸಿಕೊಡಿರಿ. ಆಗ ದೇವರ ಬೆಂಕಿಯು ನಿಮ್ಮ ಹೃದಯದ ಯಜ್ಞವೇದಿಯ ಮೇಲೆ ಇಳಿದು ಬರುವುದು.

ಹಳೆಯ ಒಡಂಬಡಿಕೆಯಲ್ಲಿ, ಯಜ್ಞವೇದಿಗಳನ್ನು ಮೂರು ವಿಧಗಳಲ್ಲಿ ನಿರ್ಮಿಸಲಾಗುತ್ತಿತ್ತು. ಮೊದಲನೆಯದಾಗಿ, ಕೆಲವು ಮಣ್ಣಿನಿಂದ ಮಾಡಲ್ಪಟ್ಟಿದ್ದವು. ಎರಡನೆಯದಾಗಿ, ಕೆಲವು ಮಾನವನ ಉಪಕರಣಗಳಿಂದ ಕೆತ್ತಲ್ಪಡದ ಪೂರ್ಣ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದ್ದವು. ಮೂರನೆಯದಾಗಿ, ದೇವದರ್ಶನ ಗುಡಾರದಲ್ಲಿದ್ದ ಯಜ್ಞವೇದಿಯನ್ನು ಜಾಲೀ ಮರದಿಂದ ಮಾಡಿ ಚಿನ್ನದಿಂದ ಹೊದಿಸಲಾಗಿತ್ತು.

ಮಣ್ಣಿನಿಂದ ಮಾಡಿದ ಯಜ್ಞವೇದಿಯು ನಮ್ಮ ಭೌತಿಕ ಶರೀರವನ್ನು ಪ್ರತಿನಿಧಿಸುತ್ತದೆ (ಕೀರ್ತನೆ 103:14). ಕಲ್ಲುಗಳಿಂದ ನಿರ್ಮಿಸಿದ ಯಜ್ಞವೇದಿಯು ನಮ್ಮ ಪ್ರಾಣವನ್ನು ಸಂಕೇತಿಸುತ್ತದೆ. ಮರದಿಂದ ಮಾಡಿ ಚಿನ್ನದಿಂದ ಹೊದಿಸಿದ ಯಜ್ಞವೇದಿಯು ನಮ್ಮ ಆತ್ಮವನ್ನು ಪ್ರತಿನಿಧಿಸುತ್ತದೆ.

ಇಂದು ಕರ್ತನು ಹೀಗೆ ಹೇಳುತ್ತಿದ್ದಾನೆ: “ನನ್ನ ಮಗನೇ/ಮಗಳೇ, ನಿನ್ನ ಆತ್ಮ, ಪ್ರಾಣ ಮತ್ತು ಶರೀರವನ್ನು ನನ್ನ ಯಜ್ಞವೇದಿಯ ಮೇಲೆ ಅರ್ಪಿಸು. ನಿನ್ನನ್ನು ಸಂಪೂರ್ಣವಾಗಿ ನನಗೆ ಸಮರ್ಪಣೆಮಾಡು. ಇಂದು ನಾನು ನಿನ್ನ ಮೇಲೆ ಪರಲೋಕದ ಬೆಂಕಿಯನ್ನು ಸುರಿಸಲು ಬಯಸುತ್ತೇನೆ. ನಿನ್ನನ್ನು ನನ್ನ ಬೆಂಕಿಯಿಂದ ತುಂಬಿಸಿ, ನನ್ನ ಅಭಿಷೇಕವನ್ನು ಅಳತೆಯಿಲ್ಲದೆ ನಿನ್ನ ಮೇಲೆ ಸುರಿಯಲು ಅಪೇಕ್ಷಿಸುತ್ತೇನೆ. ನೀನು ನನಗಾಗಿ ಪ್ರಕಾಶಮಾನವಾಗಿ ಉರಿಯಬೇಕು ಮತ್ತು ನಿನ್ನೊಳಗೆ ನಾನು ಇರಿಸುವ ಬೆಂಕಿಯು ಎಂದಿಗೂ ಆರಿಹೋಗಲು ಬಿಡಬಾರದು.”

ಕರ್ತನು ನೀಡುವ ಪವಿತ್ರಾತ್ಮನ ಬೆಂಕಿಯು ಅತ್ಯಮೂಲ್ಯವಾದದ್ದು. ಅನೇಕರು ಅದರ ಮೌಲ್ಯವನ್ನು ಗುರುತಿಸದೆ ಅದನ್ನು ಕಳೆದುಕೊಳ್ಳುತ್ತಾರೆ. ಲಾವೊದಿಕೀಯ ಸಭೆಯ ಬಗ್ಗೆ ಕರ್ತನು ದುಃಖದಿಂದ ಹೀಗೆ ಹೇಳಿದನು: “ನಿನ್ನ ಕೃತ್ಯಗಳನ್ನು ಬಲ್ಲೆನು; ನೀನು ತಣ್ಣಗೂ ಇಲ್ಲ, ಬೆಚ್ಚಗೂ ಅಲ್ಲ; ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇದ್ದರೆ ಒಳ್ಳೇದಾಗಿತ್ತು. ನೀನು ತಣ್ಣಗೂ ಇಲ್ಲದೇ ಬೆಚ್ಚಗೂ ಇಲ್ಲದೆ ಉಗುರುಬೆಚ್ಚಗಿರುವದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರುವೆನು.” (ಪ್ರಕ 3:15–16)

ಆತನ ಪ್ರಸನ್ನತೆಯಿಂದ ಉರಿಯಲು ಕರೆಯಲ್ಪಟ್ಟ ದೇವರ ಜನರು ಎಂದಿಗೂ ಉಗುರುಬೆಚ್ಚಗಾಗಬಾರದು. ನಾವು ಮಂದವಾಗಿ ಉರಿಯುವ ಬತ್ತಿಯಂತೆ ಇರಬಾರದು. ದೀಪಗಳು ಆರಿಹೋಗಿದ್ದ ಬುದ್ಧಿಹೀನ ಕನ್ಯೆಯರಂತೆ ನಾವು ಇರಬಾರದು. ಬೆಂಕಿಯು ಪ್ರಕಾಶಮಾನವಾಗಿ ಉರಿಯುತ್ತಲೇ ಇರಬೇಕು. ಗುಣವಂತಳಾದ ಸ್ತ್ರೀಯ ಬಗ್ಗೆ ಸತ್ಯವೇದವು ಹೀಗೆ ಹೇಳುತ್ತದೆ: “ಆಕೆಯ ದೀಪವು ರಾತ್ರಿಯೆಲ್ಲಾ ಆರದು.” (ಜ್ಞಾನೋಕ್ತಿ 31:18)

ಪ್ರೀತಿಯ ದೇವರ ಮಕ್ಕಳೇ, ಜೀವನದ ಕತ್ತಲೆಯ ಸಯಯದಲ್ಲೂ ಕರ್ತನ ಮೇಲಿನ ಪ್ರೀತಿ ಮತ್ತು ಪ್ರಾರ್ಥನೆಯ ಜ್ವಾಲೆಯು ನಿಮ್ಮ ಹೃದಯಗಳಲ್ಲಿ ಪವಿತ್ರ ಅಗ್ನಿಯಂತೆ ಸದಾ ಉರಿಯುತ್ತಿರಲಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಆದದರಿಂದ ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವದೇನಂದರೆ-ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಕೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು.” (ರೋಮಾ 12:1)

Leave A Comment

Your Comment
All comments are held for moderation.