Appam, Appam - Kannada

ನವೆಂಬರ್ 26 – ಬೇಡಿಕೊಳ್ಳಿರಿ!

“ನೀವು ಇದುವರೆಗೆ ನನ್ನ ಹೆಸರಿನ ಮೇಲೆ ಯಾವದೊಂದನ್ನೂ ಬೇಡಿಕೊಂಡಿಲ್ಲ; ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು.” ಯೋಹಾ 16:24

ನಿಮ್ಮೊಳಗೆ ಪ್ರಾರ್ಥಿಸುವ ಆಳವಾದ ಹಂಬಲವನ್ನು ಬೆಳೆಸಿಕೊಳ್ಳಿರಿ. ಶಕ್ತಿಶಾಲಿ ಪ್ರಾರ್ಥನಾ ಯೋಧರಾಗಲು ಬಯಕೆಯುಳ್ಳವರಾಗಿರಬೇಕು. ಪ್ರಾರ್ಥನೆಯ ಮೇಲಿನ ನಿಮ್ಮ ಉತ್ಸಾಹವನ್ನು ಅಧಿಕಗೊಳಿಸುವ ಪುಸ್ತಕಗಳನ್ನು ಓದಿರಿ. ಪ್ರಾರ್ಥನೆಯನ್ನು ನಿಮ್ಮ ಜೀವನದ ಪ್ರತಿಯೊಂದು ಸ್ಪಂದನಕ್ಕೂ ಮತ್ತು ಪ್ರತಿಯೊಂದು ಉಸಿರಿಗೂ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಿರಿ.

ಒಬ್ಬ ವೃದ್ಧ ವ್ಯಕ್ತಿಯು ಇತ್ತೀಚೆಗೆ ರಕ್ಷಿಸಲ್ಪಟ್ಟಿದ್ದರು. ಅವರಿಗೆ ಪ್ರಾರ್ಥಿಸುವ ದೊಡ್ಡ ಆಸೆಯಿತ್ತು ಆದರೆ ಹೇಗೆ ಪ್ರಾರ್ಥಿಸಬೇಕೆಂದು ಅವರಿಗೆ ತಿಳಿದಿರಲಿಲ್ಲ. ಅವರ ಸಭಾಪಾಲಕರ ಬಳಿಗೆ ಬಂದು, “ಅಯ್ಯಾ, ಪ್ರಾರ್ಥನೆಯು ಬಹಳ ಸರಳವಾದದ್ದು. ಅದು ಕರ್ತನೊಂದಿಗೆ ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಮಾತನಾಡುವುದೇ ಆಗಿದೆ. ಪ್ರತಿದಿನ ಬೆಳಿಗ್ಗೆ ನೀವು ಎದ್ದಾಗ, ನಿಮ್ಮ ಪಕ್ಕದಲ್ಲಿ ಒಂದು ಕುರ್ಚಿಯನ್ನು ಇಟ್ಟುಕೊಂಡು ಯೇಸುಕ್ರಿಸ್ತನು ಅದರಲ್ಲಿ ಕುಳಿತಿದ್ದಾನೆಂದು ಕಲ್ಪಿಸಿಕೊಳ್ಳಿರಿ.

“ನೀವು ನಿಮ್ಮ ಸ್ನೇಹಿತರೊಂದಿಗೆ ಎಷ್ಟು ಮುಕ್ತವಾಗಿ ಮತ್ತು ಉತ್ಸಾಹದಿಂದ ಮಾತನಾಡುತ್ತೀರೋ, ಹಾಗೆಯೇ ಕ್ರಿಸ್ತನನ್ನು ನಿಮ್ಮ ಸ್ನೇಹಿತನೆಂದು ಪರಿಗಣಿಸಿ ಎಲ್ಲ ವಿಷಯಗಳ ಬಗ್ಗೆಯೂ ಆತನೊಂದಿಗೆ ಮಾತನಾಡಿ. ನಿಮ್ಮ ಸಮಸ್ಯೆಗಳನ್ನು ಆತನಿಗೆ ತಿಳಿಸಿ ಮತ್ತು ನಿಮ್ಮ ಕಷ್ಟಗಳನ್ನು ಹಂಚಿಕೊಳ್ಳಿರಿ. ಆತನು ನಿಮ್ಮನ್ನು ತನ್ನ ಸ್ನೇಹಿತನೆಂದು ಕರೆದಿದ್ದಾನೆ, ಆದ್ದರಿಂದ ನೀವು ಧೈರ್ಯದಿಂದ ಆತನ ಬಳಿಗೆ ಹೋಗಬಹುದು.”

ಅಂದಿನಿಂದ, ಆ ವ್ಯಕ್ತಿಯು ತನ್ನ ಮುಂದೆ ಒಂದು ಕುರ್ಚಿಯನ್ನು ಇಟ್ಟು, ಯೇಸು ಅಲ್ಲಿ ಕುಳಿತಿದ್ದಾನೆಂದು ಕಲ್ಪಿಸಿಕೊಂಡು, ಒಬ್ಬ ಸ್ನೇಹಿತನೊಂದಿಗೆ ಮಾತನಾಡುವಂತೆಯೇ ಆತನೊಂದಿಗೆ ಮಾತನಾಡುತ್ತಿದ್ದರು. ಅವರು ಯೇಸುವಿನೊಂದಿಗೆ ಎಷ್ಟು ಹೆಚ್ಚು ಮಾತನಾಡಿದರೋ, ಅಷ್ಟು ಹೆಚ್ಚು ಧೈರ್ಯಶಾಲಿಯಾದರು. ಅದು ಅವರಿಗೆ ಮಹಾ ಸಂತೋಷವನ್ನು ತಂದಿತು. ಕರ್ತನು ತಮ್ಮ ಪ್ರಾರ್ಥನೆಗಳನ್ನು ಕೇಳುತ್ತಿದ್ದಾನೆ ಎಂಬ ಯೋಚನೆಯು ಅವರನ್ನು ಆನಂದದಿಂದ ತುಂಬಿತು.

ಅವರು ಎಲ್ಲಿಗೆ ಹೋದರೂ ಆ ಕುರ್ಚಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಲು ಪ್ರಾರಂಭಿಸಿದರು. ಊಟ ಮಾಡುವಾಗ ಅದನ್ನು ಊಟದ ಮೇಜಿನ ಬಳಿ ಇಡುತ್ತಿದ್ದರು. ರಾತ್ರಿಯಲ್ಲಿ ಅದನ್ನು ತಮ್ಮ ಹಾಸಿಗೆಯ ಪಕ್ಕದಲ್ಲಿ ಇಡುತ್ತಿದ್ದರು. “ಇದು ಯೇಸುಕ್ರಿಸ್ತನ ಕುರ್ಚಿ. ಯಾರಿಗೂ ಇದರ ಮೇಲೆ ಕೂರಲು ಅವಕಾಶವಿಲ್ಲ” ಎಂದು ಅವರು ಹೇಳುತ್ತಿದ್ದರು.

ಅವರು ವೃದ್ಧರಾಗಿ ಗಂಭೀರವಾಗಿ ಅಸ್ವಸ್ಥರಾದಾಗಲೂ, ಆ ಕುರ್ಚಿಯು ಅವರ ಕಣ್ಣುಗಳ ಮುಂದೆಯೇ ಇತ್ತು. ಕರ್ತನನ್ನು ಯಾವಾಗಲೂ ತನ್ನ ಮುಂದೆ ಇಟ್ಟುಕೊಂಡಿದ್ದರಿಂದ ತಾನು ಎಂದಿಗೂ ಕದಲುವುದಿಲ್ಲ ಎಂದು ಅವರು ಹೇಳುತ್ತಿದ್ದರು. ಕೆಲವು ದಿನಗಳ ನಂತರ, ಅವರಿಗೆ ಮಾತನಾಡುವ ಶಕ್ತಿಯು ಕುಂದಿಹೋಯಿತು. ಅವರು ಸಾಯುವ ಹಂತದಲ್ಲಿದ್ದಾಗ, ತಮ್ಮ ಎರಡೂ ಕೈಗಳನ್ನು ಚಾಚಿ ಆ ಕುರ್ಚಿಯ ಮೇಲೆ ಇಡಲು ಬಹಳಷ್ಟು ಹೆಣಲಾಡಿದರು. ನಂತರ ಅವರು ಕೊನೆಯುಸಿರೆಳೆದರು. ಕರ್ತನೊಂದಿಗೆ ಎಂತಹ ಸುಂದರವಾದ ಸಂಬಂಧ ಮತ್ತು ಸ್ನೇಹ!

ಕರ್ತನ ಕಡೆಗೆ ಪ್ರೀತಿಯಿಂದ ನೋಡುವುದು ಕೂಡ ಒಂದು ರೀತಿಯ ಪ್ರಾರ್ಥನೆಯಾಗಿದೆ. ಆತನೇ ದೇವರಾಗಿದ್ದಾನೆ ಎಂದು ತಿಳಿದುಕೊಂಡು, ಭೂಮಿಯ ಸಕಲ ದಿಕ್ಕುಗಳೂ ತನ್ನ ಕಡೆಗೆ ನೋಡಿ ರಕ್ಷಣೆ ಹೊಂದುವಂತೆ ಕರ್ತನು ಆಹ್ವಾನಿಸುತ್ತಾನೆ (ಯೆಶಾ 45:22). ಪರಲೋಕವನ್ನೂ ಭೂಮಿಯನ್ನೂ ಸೃಷ್ಟಿಸಿದ ಕರ್ತನಿಂದಲೇ ತನಗೆ ಸಹಾಯ ಬರುವುದೆಂದು ತಿಳಿದುಕೊಂಡು, ದಾವೀದನು ಸಹ ತನ್ನ ಕಣ್ಣುಗಳನ್ನು ಪರ್ವತಗಳ ಕಡೆಗೆ ಎತ್ತುವೆನು ಎಂದು ಸಾರಿದನು (ಕೀರ್ತನೆ 121:1–2).

ಪ್ರಿಯ ದೇವರ ಮಕ್ಕಳೇ, ಯೇಸುಕ್ರಿಸ್ತನು ನಿಮ್ಮ ಪಕ್ಕದಲ್ಲೇ ನಿಂತು ನಿಮ್ಮನ್ನು ಕಾಯುತ್ತಿದ್ದಾನೆ ಎಂದು ತಿಳಿದುಕೊಂಡು, ಪ್ರಾರ್ಥನೆಯಲ್ಲಿ ದೃಢವಾಗಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ ಅದನ್ನು ಆತನು ನನ್ನ ಹೆಸರಿನ ಮೇಲೆ ನಿಮಗೆ ಕೊಡುವನು” (ಯೋಹಾ 16:23).

Leave A Comment

Your Comment
All comments are held for moderation.