Appam, Appam - Kannada

ನವೆಂಬರ್ 18 – ಸದ್ಗುಣಶೀಲನಾದ ಯಾಕೋಬ!

“ಯಾಕೋಬನು ಸಾಧುಮನುಷ್ಯನಾಗಿ ಗುಡಾರಗಳಲ್ಲಿ ವಾಸಿಸಿದನು” ಆದಿ 25:27

ಯಾಕೋಬನು ಮೂಲಪಿತೃಗಳಲ್ಲಿ ಒಬ್ಬನಾಗಿದ್ದನು, ಮತ್ತು ಕರ್ತನು ಅವನನ್ನು ಬಹಳವಾಗಿ ಆಶೀರ್ವದಿಸಿದನು. ಆತನು ಯಾಕೋಬನಿಗೆ ಇಸ್ರಾಯೇಲ್ ಎಂಬ ಹೆಸರನ್ನು ನೀಡಿದನು, ಅಂದರೆ ದೇವರೊಂದಿಗೆ ಹೋರಾಡುವವನು ಎಂದರ್ಥ. ಯಾಕೋಬನ ಸ್ವಭಾವವೂ ಚಾರಿತ್ರ್ಯವೂ ಗಮನಾರ್ಹವಾಗಿವೆ. ಅವನು ಗುಡಾರಗಳಲ್ಲಿ ವಾಸಿಸುತ್ತಿದ್ದ ಸದ್ಗುಣಶೀಲ ಸಾತ್ವಿಕ ಮನುಷ್ಯನಾಗಿದ್ದನು. ಅವನ ತಾಯಿಯು ಗುಣವತಿಯಾದ ಸ್ತ್ರೀಯಾಗಿದ್ದಳು, ಮತ್ತು ಯಾಕೋಬನು ಸ್ವತಃ ಸದ್ಗುಣಶೀಲ ಚಾರಿತ್ರ್ಯವನ್ನು ಹೊಂದಿದ್ದನು.

“ಗುಣವತಿಯಾದ ಸತಿಯು ಎಲ್ಲಿ ಸಿಕ್ಕಾಳು? ಎಂದು ಸತ್ಯವೇದವು ಪ್ರಶ್ನಿಸುತ್ತದೆ?” ಮತ್ತು ಅವಳ ಬೆಲೆಯು ಮುತ್ತುರತ್ನಗಳಿಗಿಂತ ಬಹಳ ಹೆಚ್ಚಿನದು ಎಂದು ಸಾರುತ್ತದೆ. ಅವಳ ಮಕ್ಕಳು ಎದ್ದು ಅವಳನ್ನು ಧನ್ಯಳೆಂದು ಕರೆಯುತ್ತಾರೆ (ಜ್ಞಾನೋ 31:10, 28). ಸದ್ಗುಣಶೀಲ ಸ್ತ್ರೀಯರು ಸದ್ಗುಣಶೀಲ ಚಾರಿತ್ರ್ಯವುಳ್ಳ ಮಕ್ಕಳನ್ನು ಬೆಳೆಸುತ್ತಾರೆ. ಯಾಕೋಬನು ತನ್ನ ತಾಯಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದನು, ಮತ್ತು ಅವನೇ ಸದ್ಗುಣಶೀಲ ಮನುಷ್ಯನೆಂದು ವರ್ಣಿಸಲ್ಪಟ್ಟನು.

ನಮ್ಮ ಆಧ್ಯಾತ್ಮಿಕ ಜೀವನದಲ್ಲಿ, ತಾಯಿಯಂತೆ ನಮ್ಮನ್ನು ಪೋಷಿಸುವ ದೇವರ ಸೇವಕರು ನಮಗೆ ಬೇಕಾಗಿದ್ದಾರೆ. ಅಪೊಸ್ತಲನಾದ ಪೌಲನು ಅಂತಹ ದೇವರ ಸೇವಕನಾಗಿದ್ದನು. ತಾನು ಮಕ್ಕಳನ್ನು ಪ್ರೀತಿಯಿಂದ ಸಾಕುವ ಹಾಲುಣಿಸುವ ತಾಯಿಯಂತೆ ವಿಶ್ವಾಸಿಗಳನ್ನು ಪಾಲಿಸಿದೆನೆಂದು ಅವನು ಬರೆದನು. ಅವನು ಅವರನ್ನು ಎಷ್ಟು ಪ್ರೀತಿಯಿಂದ ಪ್ರೀತಿಸುತ್ತಿದ್ದನೆಂದರೆ, ದೇವರ ಸುವಾರ್ತೆಯನ್ನು ಮಾತ್ರವಲ್ಲ, ತನ್ನ ಸ್ವಂತ ಪ್ರಾಣವನ್ನೂ ಅವರಿಗಾಗಿ ಅರ್ಪಿಸಲು ಸಿದ್ಧನಾಗಿದ್ದನು, ಏಕೆಂದರೆ ಅವರು ಅವನಿಗೆ ಅಷ್ಟು ಪ್ರಿಯರಾಗಿದ್ದರು (1 ಥೆಸ 2:7–8).

ಯಾಕೋಬನ ಮುಂದಿನ ವಿಶಿಷ್ಟ ಗುಣವೇನಾಗಿತ್ತು? ಅವನು ಗುಡಾರಗಳಲ್ಲಿ ವಾಸಿಸುವವನಾಗಿದ್ದನು. ಗುಡಾರವು ಈ ಲೋಕವು ತಾತ್ಕಾಲಿಕವಾದುದು ಎಂಬುದನ್ನೂ, ನಮ್ಮ ಭೂಮಿಯ ನಿವಾಸವನ್ನು ತೆಗೆದುಹಾಕಿ ಸ್ಥಳಾಂತರಿಸಬಹುದೆಂಬುದನ್ನೂ ನಮಗೆ ನೆನಪಿಸುತ್ತದೆ. ಸತ್ಯವೇದವು ಅನೇಕ ಗುಡಾರಗಳ ಕುರಿತು ತಿಳಿಸುತ್ತದೆ. ನೋಹನು ದ್ರಾಕ್ಷಾರಸವನ್ನು ಕುಡಿದು ಮತ್ತನಾಗಿ ತನ್ನ ಗುಡಾರದೊಳಗೆ ಬಟ್ಟೆಯಿಲ್ಲದೆ ಮಲಗಿದ್ದನು (ಆದಿ 9:21).

ಲೋಟನು ನೀರು ಸಮೃದ್ಧವಾಗಿರುವ ಮತ್ತು ಫಲವತ್ತಾದ ಭೂಮಿಯಾಗಿರುವ ಸೊದೋಮಿನ ಕಡೆಗೆ ತನ್ನ ಗುಡಾರವನ್ನು ಹಾಕಿದನು (ಆದಿ 13:12). ಲಾಬಾನನ ಗುಡಾರ (ಆದಿ 31:34), ಇಸಾಕನ ಗುಡಾರಗಳ (ಧರ್ಮೋ 33:18) ಮತ್ತು ಆಕಾನನ ಗುಡಾರದ (ಯೆಹೋ 7:24) ಬಗ್ಗೆಯೂ ನಾವು ಓದುತ್ತೇವೆ. ಸತ್ಯವೇದದಲ್ಲಿ ಗುಡಾರಗಳ ಬಗ್ಗೆ ಇನ್ನೂ ಅನೇಕ ಉಲ್ಲೇಖಗಳಿವೆ.

ಅವುಗಳೆಲ್ಲರ ಮಧ್ಯೆ, ಕರ್ತನು ಯಾಕೋಬನ ಗುಡಾರಗಳನ್ನು ನೋಡಿ, “ಯಾಕೋಬ್ಯರೇ, ನಿಮ್ಮ ಡೇರೆಗಳು ಎಷ್ಟೋ ಚೆಲುವಾಗಿವೆ!” ಎಂದು ಸಾರಿದನು (ಅರಣ್ಯ 24:5).

ʼಉತ್ಸಾಹ ಧ್ವನಿಯೂ ಜಯಘೋಷವೂ ನೀತಿವಂತರ ಗುಡಾರಗಳಲ್ಲಿವೆ; ಯೆಹೋವನ ಬಲಗೈ ಪರಾಕ್ರಮವನ್ನು ನಡಿಸುತ್ತವೆʼ ಎಂದು ಸತ್ಯವೇದವು ತಿಳಿಸುತ್ತದೆ (ಕೀರ್ತನೆ 118:15). ಗುಡಾರದಲ್ಲಿ ವಾಸಿಸುವ ಜೀವನವನ್ನು ಯಾಕೋಬನಿಗೆ ಕಲಿಸಿಕೊಟ್ಟವನು ಅಬ್ರಹಾಮನಾಗಿದ್ದನು. ತಮ್ಮ ಭೂಮಿಯ ಜೀವಿತಾವಧಿಯಲ್ಲಿ, ಅಬ್ರಹಾಮನಾಗಲಿ ಇಸಾಕನಾಗಲಿ ತಮ್ಮ ನಿಮಿತ್ತ ಶಾಶ್ವತವಾದ ಮನೆಯನ್ನು ಕಟ್ಟಿಕೊಳ್ಳಲಿಲ್ಲ.

ಅಬ್ರಹಾಮನು ನಂಬಿಕೆಯಿಂದಲೇ ವಾಗ್ದಾತ್ತದೇಶಕ್ಕೆ ಬಂದಾಗ ಅಲ್ಲಿ ಇಸಾಕನೊಂದಿಗೂ ಯಾಕೋಬನೊಂದಿಗೂ ಅನ್ಯದೇಶದಲ್ಲಿ ಇದ್ದವರಂತೆ ಬಿಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಗಳಾಗಿ ಬದುಕಿದರು ಎಂದು ಸತ್ಯವೇದವು ನಮಗೆ ತಿಳಿಸುತ್ತದೆ. (ಇಬ್ರಿಯ 11:9).

ಪ್ರೀತಿಯ ದೇವರ ಮಕ್ಕಳೇ, ನಿಮ್ಮ ಗುಡಾರವು ಹೇಗಿದೆ? ಅದು ಯಥಾರ್ಥತೆಯಿಂದಲೂ ನೀತಿಯಿಂದಲೂ ಗುರುತಿಸಲ್ಪಟ್ಟ ವಾಸಸ್ಥಾನವಾಗಿದೆಯೇ?

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಾವಾದರೋ ಪರಲೋಕಸಂಸ್ಥಾನದವರು; ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವದನ್ನು ಎದುರುನೊಡುತ್ತಾ ಇದ್ದೇವೆ” (ಫಿಲಿಪ್ಪಿ 3:20).

Leave A Comment

Your Comment
All comments are held for moderation.