Appam, Appam - Kannada

ನವೆಂಬರ್ 08 – ಪವಿತ್ರಾತ್ಮನ ಧ್ವನಿ!

“ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ನಡೆಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ನಡೆಸುವನು.” ಯೋಹಾ ೧೬:೧೩

ಹಲವು ಬಾರಿ, ನಾವು ಜೀವನದ ಕವಲುದಾರಿಯಲ್ಲಿ ನಿಂತು, ಯಾವ ಮಾರ್ಗದಲ್ಲಿ ಹೋಗಬೇಕೆಂದು ತಿಳಿಯದೆ ಗೊಂದಲಕ್ಕೊಳಗಾಗುತ್ತೇವೆ. ಹಲವು ಮಾರ್ಗಗಳಲ್ಲಿ ಒಂದನ್ನು ನಾವು ಆರಿಸಿಕೊಳ್ಳಬೇಕಾಗುತ್ತದೆ, ಆದರೂ ಆ ಮಾರ್ಗಗಳ ಬಗ್ಗೆ ನಮಗೆ ಪೂರ್ಣ ಜ್ಞಾನವಿರುವುದಿಲ್ಲ. ನಮ್ಮ ಸ್ವಂತ ಜ್ಞಾನವು ಮಿತಿಯುಳ್ಳದ್ದು.

ಆದರೆ ಪವಿತ್ರಾತ್ಮನು ಎಲ್ಲವನ್ನೂ ಪರಿಶೋಧಿಸುತ್ತಾನೆ ಮತ್ತು ಬಲ್ಲವನಾಗಿದ್ದಾನೆ. ಆತನು ಪ್ರತಿಯೊಂದನ್ನೂ ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾನೆ ಮತ್ತು ಸರಿಯಾದ ಮಾರ್ಗದಲ್ಲಿ ನಮ್ಮನ್ನು ನಡೆಸಬಲ್ಲ ಏಕೈಕ ವ್ಯಕ್ತಿಯಾಗಿದ್ದಾನೆ. ಆತನು ನಮ್ಮನ್ನು ನಡೆಸುವಾಗ, ನಾವು ಎಂದಿಗೂ ದಾರಿ ತಪ್ಪುವುದಿಲ್ಲ. ಕರ್ತನ ಮಾರ್ಗಗಳು ನಮ್ಮ ಜೀವನಕ್ಕೆ ನಿತ್ಯವಾದ ಆಶೀರ್ವಾದಗಳನ್ನು ತರುತ್ತವೆ.

ಪವಿತ್ರಾತ್ಮನು ನಮ್ಮೊಂದಿಗಿರುವುದು ಮತ್ತು ನಮ್ಮೊಳಗೆ ವಾಸಿಸುವುದು ಎಂತಹ ಅದ್ಭುತವಾದ ಧನ್ಯತೆ! ಸತ್ಯವೇದವನ್ನು ಓದುತ್ತಾ ಇರಿ, ನಿಮ್ಮನ್ನು ನಡೆಸುವ ಆತ್ಮನು ಮಾತನಾಡಲು ನಿಮಗೆ ಜ್ಞಾನವನ್ನು ನೀಡುವನು. “ಯಾಕಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು” (ಲೂಕ 12:12).

ಸರಿಯಾದ ಸಮಯದಲ್ಲಿ, ಪವಿತ್ರಾತ್ಮನು ನಿಮ್ಮ ನಾಲಿಗೆಯ ಮೇಲೆ ಜ್ಞಾನದ ಮತ್ತು ಸೂಕ್ತವಾದ ಮಾತುಗಳನ್ನಿಟ್ಟು, ನೀವು ಉನ್ನತವಾದ ಜ್ಞಾನದಿಂದ ಮಾತನಾಡಲು ಶಕ್ತಗೊಳಿಸುವನು. ಪೇತ್ರನು ಹೇಳಿದ ಮಾತುಗಳನ್ನು ಕೇಳಿ ಎಲ್ಲರೂ ಆಶ್ಚರ್ಯಪಟ್ಟರು. ವಿದ್ಯೆಯಿಲ್ಲದ ಬೆಸ್ತನಾಗಿದ್ದ ಪೇತ್ರನ ಮಾತುಗಳು ಸತ್ಯವೇದದಲ್ಲಿ ಎಷ್ಟು ಬರೆಯಲ್ಪಟ್ಟಿವೆ ಎಂಬುದನ್ನು ಆಲೋಚಿಸಿ. ಆತನು ಬರೆದ ಪತ್ರಗಳನ್ನೂ ಪವಿತ್ರಾತ್ಮನು ಸತ್ಯವೇದದ ಭಾಗವಾಗಿ ಕಾಯ್ದಿರಿಸಿದ್ದಾನೆ!

ಪವಿತ್ರಾತ್ಮನು ಪೌಲನನ್ನೂ ಬಾರ್ನಬನನ್ನೂ ತಮ್ಮ ಸೇವೆಯಲ್ಲಿ ಎಷ್ಟೋ ಅದ್ಭುತವಾಗಿ ನಡೆಸಿದನು, ಅವರಿಗೆ ದೈವಿಕ ಪ್ರಕಟನೆಗಳನ್ನು ನೀಡಿದನು (ಅಪೊ ಕೃತ್ಯ 13:2)! ತಮ್ಮ ಸೇವೆಯನ್ನು ಪ್ರಾರಂಭಿಸಲು ಅವರಿಗೆ ಅಪ್ಪಣೆ ನೀಡಿದಾತನು, ಅದರ ಮಧ್ಯದ ಹಂತಗಳಲ್ಲಿ ಮತ್ತು ಕೊನೆಯವರೆಗೂ ಅವರನ್ನು ನಡೆಸುತ್ತಲೇ ಇದ್ದನು.

ಕರ್ತನು ನಿಮ್ಮನ್ನು ನಡೆಸುವಂತೆ ನಿಮ್ಮ ಕೈಗಳನ್ನು ಮಾತ್ರವಲ್ಲ, ನಿಮ್ಮ ಹೃದಯವನ್ನೂ ಆತನಿಗೆ ಸಮರ್ಪಿಸಿರಿ. ಆತನು ಅಲ್ಫಾ ಮತ್ತು ಒಮೆಗಾನಾಗಿದ್ದಾನೆ. ಆತನು ನಮ್ಮ ನಂಬಿಕೆಯನ್ನು ಪ್ರಾರಂಭಿಸುವವನೂ ಪೂರ್ಣಗೊಳಿಸುವವನೂ ಆಗಿದ್ದಾನೆ. ನಿಮ್ಮನ್ನು ಆತನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ, ನೀವು ಯಾವುದರ ಬಗ್ಗೆಯೂ ಚಿಂತಿಸಬೇಕಾಗಿಲ್ಲ.

ನಿಮ್ಮ ಸಂಪೂರ್ಣ ಭಾರವನ್ನು ಕರ್ತನ ಮೇಲೆ ಹಾಕಿ ಆತನಲ್ಲಿ ವಿಶ್ರಮಿಸಿರಿ.ಫಿಲಿಪ್ಪನು ಸಮಾರ್ಯದಲ್ಲಿ ದೇವರಿಂದ ಶಕ್ತಿಯುತವಾಗಿ ಉಪಯೋಗಿಸಲ್ಪಟ್ಟ ನಂತರ, ಗಾಜಾಕ್ಕೆ ಹೋಗುವ ಅರಣ್ಯ ಮಾರ್ಗಕ್ಕೆ ಹೋಗುವಂತೆ ಪವಿತ್ರಾತ್ಮನು ಅವನಿಗೆ ಸೂಚಿಸಿದನು (ಅಪೊ ಕೃತ್ಯ 8:26).

ಅದೇ ರೀತಿಯಲ್ಲಿ, ಕರ್ತನು ನಿಮ್ಮೊಂದಿಗೆ ಸ್ಪಷ್ಟವಾದ ಧ್ವನಿಯ ಮೂಲಕ, ಖಚಿತವಾದ ಯೋಜನೆಗಳ ಮೂಲಕ ಅಥವಾ ಸೂಕ್ಷ್ಮವಾದ ಮೆಲ್ಲನೆಯ ಧ್ವನಿಯ ಮೂಲಕ ಮಾತನಾಡುವನು.

ಪ್ರೀತಿಯ ದೇವರ ಮಕ್ಕಳೇ, ನಿಮ್ಮನ್ನು ನಡೆಸುವ ಸರ್ವಶಕ್ತನಾದ ದೇವರು ನಿಮ್ಮ ಜೀವನದ ಒಡೆಯನಾಗಿದ್ದಾನೆ. ಆತನೇ ನಿಮ್ಮ ಜೀವನದ ಏಕೈಕ ಕರ್ತನಾಗಿದ್ದಾನೆ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮೆಮ ಕಿವಿಗೆ ಬೀಳುವದು” (ಯೆಶಾ 30:21).

Leave A Comment

Your Comment
All comments are held for moderation.