ಸೆಪ್ಟೆಂಬರ್ 21 – ನಿಮ್ಮ ಹೃದಯವು ಕುಗ್ಗದಿರಲಿ!
“ದಾವೀದನು ಸೌಲನಿಗೆ—‘ಆ ಫಿಲಿಷ್ಟಿಯನ ನಿಮಿತ್ತವಾಗಿ ಯಾವನೂ ಎದೆಗೆಡಬಾರದು; ನಿನ್ನ ಸೇವಕನಾದ ನಾನು ಹೋಗಿ ಅವನೊಡನೆ ಯುದ್ಧ ಮಾಡುವೆನು’ ಎಂದನು.” (1 ಸಮು 17:32)
ಫಿಲಿಷ್ಟಿಯ ಯೋಧನಾದ ಗೊಲ್ಯಾತನ ಮಾತುಗಳು ಇಸ್ರಾಯೇಲ್ಯರೆಲ್ಲರ ಹೃದಯಗಳಲ್ಲಿ ಭಯವನ್ನು ಹುಟ್ಟಿಸಿತು. ಆದರೆ ದಾವೀದನು ಆತನನ್ನು ಕಂಡಾಗ ಹೆದರಲಿಲ್ಲ. ಆತನು ಇತರರನ್ನೂ ಪ್ರೋತ್ಸಾಹಿಸಿ, ಹೆದರಬೇಡಿರಿ ಮತ್ತು ಧೈರ್ಯಗೆಡಬೇಡಿರಿ ಎಂದು ಹೇಳಿದನು.
ಜೀವನದಲ್ಲಿ ಚಿಂತೆಗಳು, ಕಷ್ಟಗಳು, ಸಮಸ್ಯೆಗಳು ಮತ್ತು ಶೋಧನೆಗಳನ್ನು ಎದುರಿಸುವುದು ಪ್ರತಿಯೊಬ್ಬ ಮನುಷ್ಯನಿಗೂ ಸಹಜ. ಆದರೆ ದೇವರ ಮಕ್ಕಳಾಗಿ, ನಾವು ತೊಂದರೆಗಳು ಮತ್ತು ಪರಿಸ್ಥಿತಿಗಳಿಂದ ಸೋಲಲ್ಪಡದೆ, ನಂಬಿಕೆಯಿಂದ ಅವುಗಳನ್ನು ಜಯಿಸಲು ಕರೆಯಲ್ಪಟ್ಟಿದ್ದೇವೆ. ಸಮಸ್ಯೆಗಳ ಮೇಲೆ ಅಲ್ಲದೆ ಕರ್ತನ ಮೇಲೆಯೇ ದೃಷ್ಟಿಯಿಡುವ ವ್ಯಕ್ತಿಯು ಅಂತಿಮವಾಗಿ ಜಯದಲ್ಲಿ ನಡೆಯುವನು.
ಸೌಲನು ಮತ್ತು ಆತನ ಸೈನಿಕರು ಗೊಲ್ಯಾತನನ್ನು ನೋಡಿ, ತಮ್ಮ ಮುಂದೆ ಒಬ್ಬ ದೈತ್ಯ ಮನುಷ್ಯನು ನಿಂತಿರುವುದನ್ನು ಕಂಡರು. ಆದರೆ ದಾವೀದನು ಕರ್ತನನ್ನು ತನ್ನ ಕಣ್ಣುಮುಂದೆ ಇಟ್ಟುಕೊಂಡನು. ಆದ್ದರಿಂದ, ಗೊಲ್ಯಾತನು ಹೋಲಿಕೆಯಲ್ಲಿ ಅತ್ಯಂತ ಚಿಕ್ಕವನಾಗಿ ಕಂಡನು. ಕರ್ತನ ಸೈನ್ಯವು ತನ್ನ ಕಡೆಗಿದೆ ಎಂಬುದನ್ನು ದಾವೀದನು ಕಂಡುಕೊಂಡನು. ಕರ್ತನ ನಾಮದಲ್ಲಿ ತನಗೆ ಜಯವು ಬರುತ್ತದೆ ಎಂದು ಆತನು ದೃಢವಾಗಿ ನಂಬಿದನು. ಆತನು ಬರಬಹುದಾದ ಪರಿಣಾಮದ ಕುರಿತು ಆಲೋಚಿಸಲಿಲ್ಲ; ಆತನು ದೇವರ ಪರಾಕ್ರಮದ ಮೇಲೆಯೇ ತನ್ನ ಆಲೋಚನೆಗಳನ್ನು ನಂಬಿಕೆಯನ್ನು ಸ್ಥಿರಗೊಳಿಸಿದನು.
ದಾವೀದನು ತನ್ನನ್ನು ನಿರಾಶೆಗೊಳಿಸಿಕೊಳ್ಳಲು ಬಿಡಲಿಲ್ಲ. ಬದಲಾಗಿ, ಆತನು ಕರ್ತನ ನಾಮದಲ್ಲಿ ಜಯದ ಮಾತುಗಳನ್ನು ಆಡಿದನು. ಅವು ಕೇವಲ ನಂಬಿಕೆಯ ಮಾತುಗಳಷ್ಟೇ ಆಗಿರಲಿಲ್ಲ; ಅವು ನಂಬಿಕೆಯುಳ್ಳ ಬಲವಾದ ಮಾತುಗಳಾಗಿದ್ದವು.
“ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು; ನಾನು ನಿನ್ನನ್ನು ಕೊಂದು ನಿನ್ನ ತಲೆಯನ್ನು ಕಡಿದುಹಾಕಿ ಫಿಲಿಷ್ಟಿ ಸೈನ್ಯದ ಶವಗಳನ್ನು ಮೃಗಪಕ್ಷಿಗಳಿಗೆ ಹಂಚಿಕೊಡುವೆನು. ಇದರಿಂದ ಇಸ್ರಾಯೇಲ್ಯರೋಳಗೆ ದೇವರಿರುತ್ತಾನೆಂಬದು ಭೂಲೋಕದವರಿಗೆಲ್ಲಾ ತಿಳಿದು ಬರುವದು.” (೧ ಸಮು 17:46)
ಅನೇಕ ಸಮಸ್ಯೆಗಳಿಂದ ನಿಮ್ಮ ಹೃದಯವು ಕಂಗಾಲಾಗಿದೆಯೋ? ಲೋಕದಲ್ಲಿ ಯಾರಾದರೂ ನಿಮ್ಮ ವಿರುದ್ಧ ಎದ್ದಿದ್ದಾರೋ? ನಿಮ್ಮ ಆಪ್ತನೂ ನಂಬಿಗಸ್ತನೂ ಆದ ಸ್ನೇಹಿತನೇ ನಿಮ್ಮ ವಿರುದ್ಧ ತಿರುಗಿ ಸಂಚು ಹೂಡಿದ್ದಾನೋ?
ಯೇಸು ಸ್ವಾಮಿಯು ಹೀಗೆ ನುಡಿಯುತ್ತಾರೆ: “ನಿಮ್ಮ ಹೃದಯವು ಕಳವಳಗೊಳ್ಳದಿರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.” (ಯೋಹಾ 14:1) ಮತ್ತು ಪತ್ರಿಕೆಗಳಲ್ಲಿ ಹೀಗೆ ಘೋಷಿಸಲ್ಪಟ್ಟಿದೆ: “ದೇವರು ನಮ್ಮ ಪಕ್ಷದಲ್ಲಿದ್ದರೆ ನಮ್ಮನ್ನು ವಿರೋಧಿಸುವವನು ಯಾರು?” (ರೋಮಾಪ 8:31) “ದೇವರು ಆರಿಸಿಕೊಂಡವರ ಮೇಲೆ ಆರೋಪ ಹೊರಿಸುವವನು ಯಾರು?” (ರೋಮಾ 8:33)
ಪ್ರಿಯ ದೇವರ ಮಕ್ಕಳೇ, ನಿಮ್ಮ ಹೃದಯವು ಭಯಕ್ಕೆ ಬಲಿಯಾಗಲು ಬಿಡಬೇಡಿರಿ. ನಂಬಿಕೆಯ ಕಣ್ಣುಗಳಿಂದ ನಿಮ್ಮ ಸಮಸ್ಯೆಗಳನ್ನು ನೋಡಿ ಹೀಗೆ ಘೋಷಿಸಿರಿ: “ಲೋಕವನ್ನು ಗೆದ್ದಿರುವ ಯೇಸುವಿನ ನಾಮದಲ್ಲಿ ನಾನು ನಿನ್ನನ್ನು ಎದುರಿಸುತ್ತೇನೆ. ನೀನು ನನ್ನ ಮೇಲೆ ಗೆಲುವು ಸಾಧಿಸಲು ಸಾಧ್ಯವಿಲ್ಲ. ನನಗೆ ಜಯವನ್ನು ಅನುಗ್ರಹಿಸುವ ದೇವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.”
ಕರ್ತನಲ್ಲಿ ನಿಮ್ಮ ಭರವಸೆಯನ್ನು ಇಟ್ಟಾಗ, ಬಲವಾದ ಕೋಟೆಗಳು ಮುರಿಯುವುದನ್ನೂ ಅಡೆತಡೆಗಳು ನೆಲಕ್ಕುರುಳುವುದನ್ನೂ ನೀವು ಖಂಡಿತವಾಗಿ ಕಾಣುವಿರಿ. ಯೇಸು ಕ್ರಿಸ್ತನ ನಾಮದಲ್ಲಿರುವ ಶಕ್ತಿಯು ನಿಮಗೆ ಸಂಪೂರ್ಣವಾಗಿ ಸಾಕು.
ಇಂದು ಕಂಗಾಲಾಗಿರುವ ಪ್ರತಿಯೊಂದು ಹೃದಯವನ್ನು ಕರ್ತನು ಗಟ್ಟಿಗೊಳಿಸಲಿ ಮತ್ತು ಪ್ರತಿಯೊಂದು “ಗೊಲ್ಯಾತನನ್ನು” ಧೈರ್ಯದಿಂದ ಎದುರಿಸುವ ನಂಬಿಕೆಯನ್ನು ನಮಗೆ ಕರುಣಿಸಲಿ; ಯುದ್ಧವು ಕರ್ತನದೆಂಬುದನ್ನು ನಾವು ಅರಿಯೋಣ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ “ನನ್ನನ್ನು ಅಂಥ ಸಿಂಹದ ಮತ್ತು ಕರಡಿಯ ಉಗುರುಗಳಿಗೆ ತಪ್ಪಿಸಿದ ಯೆಹೋವನು ಈ ಫಿಲಿಷ್ಟಿಯನ ಕೈಗೂ ತಪ್ಪಿಸುವನು.” (೧ ಸಮು 17:37)