Appam, Appam - Kannada

ಸೆಪ್ಟೆಂಬರ್ 11 – ಚಲಿಸುವ ಆತ್ಮನು!

“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. ಭೂಮಿಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು. ದೇವರಾತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತು.” (ಆದಿ 1:2)

ಇಂದಿಗೂ ಸಹ, ಪರಿಶುದ್ಧಾತ್ಮನು ಅಸ್ವಸ್ಥತೆ, ಶೂನ್ಯತೆ ಮತ್ತು ಕತ್ತಲಿನಿಂದ ಕೂಡಿದ ಸನ್ನಿವೇಶಗಳ ಮೇಲೆ ಚಲಿಸುತ್ತಾ, ಸುವ್ಯವಸ್ಥೆ, ಪರಿಪೂರ್ಣತೆ ಮತ್ತು ಬೆಳಕನ್ನು ತರುತ್ತಾನೆ. ಆತನು ಜೀವವನ್ನು ನೀಡಲು ಮತ್ತು ಬರಿದಾಗಿರುವದನ್ನು ತುಂಬಿಸುವವನಾಗಿದ್ದಾನೆ. ಪರಿಶುದ್ಧಾತ್ಮನು ಚಲಿಸಿದಂತೆ, ಗೊಂದಲವು ನೀಗಿ ಹೋಗಿ, ತೃಪ್ತಿ ಮತ್ತು ಜೀವಕ್ಕೆ ಹಾದಿ ಮಾಡಿಕೊಡುತ್ತದೆ; ಕತ್ತಲೆಯು ಬೆಳಕಾಗಿ ಮಾರ್ಪಡುತ್ತದೆ.

ಇಂದು ನಿಮ್ಮ ಮನೆಯೂ ಸಹ ಅಸ್ವಸ್ಥತೆ ಮತ್ತು ಶೂನ್ಯತೆಯಿಂದ ತುಂಬಿರುವಂತೆ ತೋರುತ್ತಿದ್ದರೆ, ಪರಿಶುದ್ಧಾತ್ಮನನ್ನು ನಿಮ್ಮ ಸನ್ನಿವೇಶಕ್ಕೆ ಪ್ರೀತಿಯಿಂದ ಆಹ್ವಾನಿಸಿ. ಹೀಗೆ ಪ್ರಾರ್ಥಿಸಿರಿ: “ಆದಿಯಲ್ಲಿ ಜನಸಮೂಹಗಳ ಮೇಲೆ ಆವರಿಸಿಕೊಂಡಿದ್ದ ಪರಿಶುದ್ಧಾತ್ಮನೇ, ಇಂದು ನಮ್ಮ ಮೇಲೆಯೂ ಆವರಿಸಿಕೊಂಡು, ದೇವರ ಸಂತೋಷ ಮತ್ತು ಸಮಾಧಾನವನ್ನು ನಮಗೆ ಅನುಗ್ರಹಿಸಲಿ.”

ಸತ್ಯವೇದವು ಹೇಳುತ್ತದೆ: “ನೀನು ಜೀವಶ್ವಾಸವನ್ನು ಊದಲು ಅವು ಹೊಸದಾಗಿ ಹುಟ್ಟುತ್ತವೆ. ಭೂಮಿಯನ್ನು ನೂತನಪಡಿಸುತ್ತಿರುತ್ತೀ.” (ಕೀರ್ತನೆ 104:30)

ಪರಿಶುದ್ಧಾತ್ಮನ ಚಲಿಸುವಿಕೆಯನ್ನು ಹಕ್ಕಿಯೊಂದು ತನ್ನ ಮೊಟ್ಟೆಗಳ ಮೇಲೆ ಪ್ರೀತಿಯಿಂದ ಕಾವು ಕೊಡುವುದಕ್ಕೆ ಹೋಲಿಸಲಾಗಿದೆ. ಹಕ್ಕಿಯು ಮೊಟ್ಟೆಗಳ ಮೇಲೆ ಕುಳಿತಾಗ, ಅದರ ಕಾವು ಆರಂಭದಲ್ಲಿ ಶೂನ್ಯ ವಸ್ತುವಿನಂತೆ ಕಾಣುತ್ತಿದ್ದ ಮೊಟ್ಟೆಯೊಳಗೆ ಒಂದು ಜೀವಂತ ಮತ್ತು ಸುಂದರವಾದ ಮರಿಯು ಬೆಳೆಯುವಂತೆ ಮಾಡುತ್ತದೆ. ಇದು ಮಾನವ ತಿಳುವಳಿಕೆಗೆ ಮೀರಿದ್ದಾಗಿದೆ. ಅದೇ ರೀತಿಯಲ್ಲಿ, ಪರಿಶುದ್ಧಾತ್ಮನು ಖಾಲಿ ಮತ್ತು ನಿರಾಶಾದಾಯಕವಾಗಿ ಕಾಣುವ ಪರಿಸ್ಥಿತಿಗಳ ಮೇಲೆ ಚಲಿಸಿ, ದೇವರ ಉದ್ದೇಶಕ್ಕೆ ತಕ್ಕಂತೆ ಮಹಿಮೆಯುಳ್ಳದ್ದನ್ನು ಹೊರತರುತ್ತಾನೆ.

ನಾವು ಸತ್ಯವೇದದಲ್ಲಿ ಪರಿಶುದ್ಧಾತ್ಮನನ್ನು ಮೊದಲ ಬಾರಿಗೆ ಆದಿಕಾಂಡ 1:2 ರಲ್ಲಿ ಕಾಣುತ್ತೇವೆ. ಅಲ್ಲಿ ತನ್ನ ಕೆಲಸವನ್ನು ಪ್ರಾರಂಭಿಸಿದ ಆತ್ಮನು, ಸತ್ಯವೇದದಾದ್ಯಂತ ಪ್ರಕಟನೆ 22:17 ರವರೆಗೆ ತನ್ನ ಕ್ರಿಯೆಯನ್ನು ಮುಂದುವರಿಸುತ್ತಾನೆ. ಆತನು ಕಾರ್ಯಮಾಡುವ ಎಲ್ಲಾ ಸ್ಥಳದಲ್ಲಿ ಜೀವವು ಉಂಟಾಗುತ್ತದೆ ಮತ್ತು ದೇವರ ಸೃಷ್ಟಿಯ ಶಕ್ತಿಯು ವ್ಯಕ್ತವಾಗುತ್ತದೆ. ಆದರೆ, ಆತನ ಕ್ರಿಯೆಯನ್ನು ವಿರೋಧಿಸಿದಾಗ ಅಥವಾ ನಿರ್ಲಕ್ಷಿಸಿದಾಗ, ಅಸ್ವಸ್ಥತೆ, ಶೂನ್ಯತೆ ಮತ್ತು ಕತ್ತಲೆಯು ಮತ್ತೆ ಆವರಿಸಿಕೊಳ್ಳಬಹುದು.

ಆದಿಯಲ್ಲಿ ಸೃಷ್ಟಿಯ ಮೇಲೆ ಚಲಿಸಿದ ಆತ್ಮನು, ನಂತರ ಮಾನವ ಹೃದಯಗಳ ಮೇಲೆ ಚಲಿಸಲು ಪ್ರಾರಂಭಿಸಿದನು. ಪಾಪ ಮತ್ತು ಅಪರಾಧಗಳಿಂದಾಗಿ ಆಧ್ಯಾತ್ಮಿಕವಾಗಿ ಸತ್ತಂತಿರುವ ಜನರಿಗೆ ಜೀವವನ್ನು ನೀಡಲು ಆತನು ಚಲಿಸುತ್ತಾನೆ.

“ಬದುಕಿಸುವಂತಹದ್ದು ಆತ್ಮವೇ; ಮಾಂಸವು ಯಾವದಕ್ಕೂ ಬರುವದಿಲ್ಲ.” (ಯೋಹಾ 6:63). ಆತನು ಯಾವುದೇ ವ್ಯಕ್ತಿಗೆ ನೂತನ ಜೀವವನ್ನು ಊದಲು, ಅವರನ್ನು ಬಲಪಡಿಸಿ ಸ್ಥಿರಗೊಳಿಸಲು ಮತ್ತು ಅವರ ಜೀವನದಲ್ಲಿ ಸುವ್ಯವಸ್ಥೆ, ಪರಿಪೂರ್ಣತೆ ಹಾಗೂ ಬೆಳಕನ್ನು ತರಲು ಶಕ್ತನಾಗಿದ್ದಾನೆ.

ಪರಿಶುದ್ಧಾತ್ಮನು ಇಂದು ಸಭೆಯ ಮೇಲೆಯೂ ಚಲಿಸುತ್ತಿದ್ದಾನೆ. ಪ್ರಕಟನೆ 2 ಮತ್ತು 3 ನೇ ಅಧ್ಯಾಯಗಳಲ್ಲಿ ಏಳು ಬಾರಿ ಈ ಮಾತುಗಳನ್ನು ನಾವು ಕೇಳುತ್ತೇವೆ: “ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.” (ಪ್ರಕ 2:7)

ಪರಿಶುದ್ಧಾತ್ಮನ ದ್ವನಿಗೆ ಕಿವಿಗೊಡುವ ಕಿವಿಯನ್ನು ನೀವು ಹೊಂದಿದ್ದರೆ, ಆತನ ಮೃದುವಾದ ದ್ವನಿಯು ನಿಮ್ಮ ಹೃದಯದೊಂದಿಗೆ ಮಾತನಾಡುವುದನ್ನು ನೀವು ಸ್ಪಷ್ಟವಾಗಿ ಕೇಳಬಹುದು.

ಪ್ರೀತಿಯ ದೇವರ ಮಕ್ಕಳೇ, ಕರ್ತನ ಆತ್ಮನು ನಿಮ್ಮ ಮೇಲೆ ಆವರಿಸಿಕೊಳ್ಳಲಿ! ನಿಮ್ಮ ಜೀವನದ ಪ್ರತಿಯೊಂದು ಒಣಗಿದ ಮತ್ತು ಜೀವವಿಲ್ಲದ ಕ್ಷೇತ್ರದೊಳಗೆ ಆತನು ನೂತನ ಜೀವವನ್ನು ಊದಲಿ. ಗೊಂದಲವಿರುವೆಡೆಯಲ್ಲಿ ದೈವಿಕ ಕ್ರಮವನ್ನೂ, ಶೂನ್ಯತೆಯಿರುವಲ್ಲಿ ಪರಿಪೂರ್ಣತೆಯನ್ನೂ, ಕತ್ತಲೆಯಿರುವಲ್ಲಿ ಬೆಳಕನ್ನೂ ಮತ್ತು ಬಲಹೀನತೆಯಿರುವಲ್ಲಿ ನೂತನ ಬಲವನ್ನೂ ಆತನು ತರಲಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಹಾಗೆಯೇ ಪವಿತ್ರಾತ್ಮನೂ ಸಹ ನಮ್ಮ ಅಶಕ್ತಿಯನ್ನು ನೋಡಿ ಸಹಾಯಮಾಡುತ್ತಾನೆ. ಹೇಗಂದರೆ ನಾವು ತಕ್ಕ ಪ್ರಕಾರ ಏನು ಬೇಡಿಕೊಳ್ಳಬೇಕೋ ನಮಗೆ ಗೊತ್ತಿಲ್ಲದ್ದರಿಂದ ಪವಿತ್ರಾತ್ಮನು ತಾನೇ ಮಾತಿಲ್ಲದಂಥ ನರಳಾಟದಿಂದ ನಮಗೋಸ್ಕರ ಬೇಡಿಕೊಳ್ಳುತ್ತಾನೆ.” (ರೋಮಾ 8:26)

Leave A Comment

Your Comment
All comments are held for moderation.