Appam, Appam - Kannada

ಸೆಪ್ಟೆಂಬರ್ 02 – ಪ್ರಯಾಸದಿಂದ ತಪ್ಪಿಸಿಕೊಂಡೆನು!

“ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.” (ಕೀರ್ತನೆ 73:2)

ಕರ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೃಪೆಯಿಂದ ಕಾಲುಗಳನ್ನು ನೀಡಿದ್ದಾನೆ. ಈ ಆಶೀರ್ವಾದಕ್ಕಾಗಿ ನಾವು ಆತನಿಗೆ ಕೃತಜ್ಞತೆವುಳ್ಳವರಾಗಿರಬೇಕು. ಕಾಲಿನ ಸ್ಪರ್ಶಹೀನತೆ ಅಥವಾ ಬಲವಿಲ್ಲದವರು ಎದುರಿಸುವ ಕಷ್ಟಗಳನ್ನು ನೋಡಿದಾಗ, ನಮ್ಮ ಹೃದಯಗಳು ಸ್ವಾಭಾವಿಕವಾಗಿ ಅವರ ಕಡೆಗೆ ಕರುಣೆಯಿಂದ ಮಿಡಿಯುತ್ತವೆ.

ಆದಾಗ್ಯೂ, ನಮಗೂ ಒಂದು ಜವಾಬ್ದಾರಿ ಇದೆ. ನಮ್ಮ ಮನಸ್ಸು ಮತ್ತು ಶರೀರವು ಬಯಸಿದ ಸ್ಥಳಕ್ಕೆಲ್ಲಾ ನಮ್ಮ ಪಾದಗಳು ಹೋಗದಂತೆ, ನಾವು ಭಕ್ತಿ ಮತ್ತು ಎಚ್ಚರಿಕೆಯಿಂದ ಅವುಗಳನ್ನು ಕಾಯಬೇಕು. ಚಲನಚಿತ್ರಗಳು ಮತ್ತು ಲೌಕಿಕ ಸುಖ-ಭೋಗಗಳಿಗೆ ನಮ್ಮನ್ನು ಒಪ್ಪಿಸಿಕೊಡುವುದಕ್ಕಿಂತ ಹೆಚ್ಚಾಗಿ, ಸಭೆಗೆ ಹೋಗುವುದಕ್ಕೂ ಮತ್ತು ಕರ್ತನನ್ನು ಆರಾಧಿಸುವುದಕ್ಕೂ ನಾವು ಮೊದಲ ಆದ್ಯತೆ ನೀಡಬೇಕು.

ಮೇಲಿನ ವಚನದಲ್ಲಿ “ತಪ್ಪುವುದು” ಮತ್ತು “ಜಾರುವುದು” ಎಂಬ ಎರಡು ಪದಗಳನ್ನು ಬಳಸಲಾಗಿದೆ. ಶರೀರದಲ್ಲಿ ಬಲವಿಲ್ಲದಿದ್ದಾಗ, ಪಾದಗಳು ಎಡವಬಹುದು. ಮತ್ತು ನೆಲವು ಮೃದುವಾಗಿದ್ದಾಗ ಅಥವಾ ಪಾಚಿ ಕಟ್ಟಿದ್ದಾಗ, ಪಾದಗಳಿಗೆ ಜಾರುವಂತಾಗುತ್ತದೆ. ಈ ಪಾಪಮಯ ಲೋಕದಲ್ಲಿ ಹೆಜ್ಜೆ ತಪ್ಪದೇ ಅಥವಾ ಜಾರದಂತೆ ನಡೆಯಲು, ನಮಗೆ ಮೇಲಣಲೋಕದ ಬಲ ಬೇಕು. ಆ ಪರಲೋಕದ ಬಲವನ್ನು ನಾವು ಪಡೆದುಕೊಂಡಾಗ, ನಮ್ಮ ಪಾದಗಳು ಜಿಂಕೆಯ ಪಾದಗಳಂತಾಗುತ್ತವೆ.

ಒಮ್ಮೆ, ಒಬ್ಬ ಯುವತಿ ತನ್ನ ಹೆತ್ತವರ ಮಾತನ್ನು ಮೀರಿ ಬೆಟ್ಟದ ಕಲ್ಲಿನ ಮೇಲೆ ಹತ್ತಿದಳು. ಕೆಲವೇ ನಿಮಿಷಗಳಲ್ಲಿ, ಅವಳು ಆ ಬಂಡೆಯಿಂದ ಜಾರಿ ಕೆಳಗೆ ಬಿದ್ದಳು. ತೀವ್ರವಾಗಿ ಗಾಯಗೊಂಡು ನೋವಿನಿಂದ ಅತ್ತಳು. ಪ್ರಿಯ ದೇವರ ಮಕ್ಕಳೇ, ನಿಮ್ಮ ಪಾದಗಳು ಜಾರಿಬೀಳಬಹುದಾದ ಸ್ಥಳದಲ್ಲಿ ನೀವು ನಿಂತಿದ್ದೀರಿ ಎಂದು ನಿಮ್ಮ ಹೃದಯವು ಎಚ್ಚರಿಸಿದಾಗಲೆಲ್ಲಾ, ತಕ್ಷಣವೇ ಆ ಸ್ಥಳದಿಂದ ಓಡಿಹೋಗಿರಿ. ಯೋಸೇಫನು ಮಾಡಿದ್ದು ಅದನ್ನೇ. ಪಾಪಮಾಡುವ ಸಂದರ್ಭ ಬಂದಾಗ ತನ್ನ ಮೇಲಂಗಿಯನ್ನು ಪೋಟೀಪರನ ಹೆಂಡತಿಯ ಕೈಯಲ್ಲಿ ಬಿಟ್ಟು ಓಡಿಹೋದನು.

ಆದರೆ ಹವ್ವಳನ್ನು ನೋಡಿರಿ. ಅವಳು ಸರ್ಪದೊಂದಿಗೆ ಸಾಮಾನ್ಯವಾಗಿಯೇ ಮಾತನಾಡುತ್ತಾ ನಿಂತಿದ್ದಳು. ಸರ್ಪವು ಕರ್ತನ ಮೇಲೆ ಅನುಮಾನ ಹುಟ್ಟಿಸುವ ಮಾತುಗಳನ್ನು ಆಡಲು ಪ್ರಾರಂಭಿಸಿದಾಗಲೂ, ಅವಳು ಅದನ್ನು ಗದರಿಸಲಿಲ್ಲ. ತನ್ನ ಗಂಡನಿಂದಾಗಲಿ ಅಥವಾ ಕರ್ತನಿಂದಾಗಲಿ ಆಲೋಚನೆ ಕೇಳಲು ಅವಳು ಬಯಸಲಿಲ್ಲ. ಬದಲಾಗಿ, ಅವಳು ಸ್ವಂತ ನಿರ್ಧಾರ ತೆಗೆದುಕೊಂಡು, ತಿನ್ನ ಬಾರದ ಹಣ್ಣನ್ನು ತಿಂದಳು. ಅವಳು ಸ್ವತಃ ಪಾಪದಲ್ಲಿ ಬಿದ್ದಿದ್ದಲ್ಲದೆ, ತನ್ನ ಗಂಡನೂ ಬೀಳಲು ಕಾರಣಳಾದಳು.

ಕೀರ್ತನೆಗಾರನು ಹೀಗೆ ಹೇಳುತ್ತಾನೆ: “ನನ್ನನ್ನು ನಾಶನದ ಗುಂಡಿಯೊಳಗಿಂದ ಎತ್ತಿದನು; ಕೆಸರಿನೊಳಗಿಂದ ನನ್ನನ್ನು ತೆಗೆದು ತೆಗೆದು ಬಂಡೆಯ ಮೇಲೆ ನಿಲ್ಲಿಸಿ ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.” (ಕೀರ್ತನೆ 40:2)

ಕರ್ತನು ನಿಮ್ಮನ್ನು ಮೇಲಕ್ಕೆತ್ತಿದ್ದಾನೆ. ಆತನು ಕಲ್ವಾರಿಯ ರಕ್ತದ ಮೂಲಕ ನಿಮ್ಮನ್ನು ತೊಳೆದು ಶುದ್ಧೀಕರಿಸಿದ್ದಾನೆ. ಆತನು ನಿಮಗಾಗಿ ಪಾಪಕ್ಷಮಾಪಣೆ ಮತ್ತು ರಕ್ಷಣೆಯ ಆನಂದವನ್ನು ನೀಡಿದ್ದಾನೆ. ಮುಂದಿನ ದಿನಗಳಲ್ಲಿ, ನಿಮ್ಮ ಪಾದಗಳು ಜಾರಬಹುದಾದ ಸ್ಥಳದಲ್ಲಿ ನೀವು ಎಂದಿಗೂ ಇರಬಾರದು.

ದಾವೀದನು ಹೇಳುತ್ತಾನೆ: “ನನ್ನ ನಡತೆಯನ್ನು ಶೋಧಿಸಿದೆನು. ನಿನ್ನ ಕಟ್ಟಳೆಗಳ ಕಡೆಗೆ ತಿರುಗಿಕೊಂಡಿದ್ದೇನೆ” (ಕೀರ್ತನೆ 119:59) ಪ್ರೀತಿಯ ದೇವರ ಮಕ್ಕಳೇ, ನಿಮ್ಮ ಪಾದಗಳನ್ನು ಕರ್ತನ ಕಡೆಗೆ ತಿರುಗಿಸಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಆತನು ನಿನ್ನ ಪಾದಗಳನ್ನು ಕದಲಗೊಡಿಸದಿರಲಿ; ನಿನ್ನನ್ನು ಕಾಯುವವನು ತೂಕಡಿಸದಿರಲಿ. ಇಗೋ, ಇಸ್ರಾಯೇಲ್ಯರನ್ನು ಕಾಯುವವನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ” (ಕೀರ್ತನೆ 121:3–4)

Leave A Comment

Your Comment
All comments are held for moderation.