Appam, Appam - Kannada

ಆಗಸ್ಟ್ 30 – ತಂದೆತಾಯಿಗಳನ್ನು ಸನ್ಮಾನಿಸಿರಿ!

“ವಾಗ್ದಾನ ಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ – ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ (ಎಫೆಸ 6:2–3)

ನೀನು ನಿನ್ನ ತಂದೆ ತಾಯಿಯರನ್ನು ಸನ್ಮಾನಿಸಿದಾಗ, ನಿನಗೆ ಒಳ್ಳೆಯದಾಗುವುದು ಮತ್ತು ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ ಎಂದು ಕರ್ತನು ಸ್ಪಷ್ಟವಾಗಿ ಘೋಷಿಸುತ್ತಾನೆ.

ಹತ್ತು ಆಜ್ಞೆಗಳನ್ನು ಎರಡು ಭಾಗಗಳಾಗಿ ನೋಡಬಹುದು. ಮೊದಲನೆಯದು ದೇವರೊಂದಿಗಿನ ಮನುಷ್ಯನ ಬಾಂಧವ್ಯಕ್ಕೆ ಸಂಬಂಧಿಸಿದ್ದರೆ, ಎರಡನೆಯದು ತನ್ನ ನೆರೆಯ ಮನುಷ್ಯರೊಂದಿಗಿನ ಬಾಂಧವ್ಯವನ್ನು ಸೂಚಿಸುತ್ತದೆ. ಮೊದಲನೆಯದಾಗಿ, ನಾವು ನಮ್ಮ ಪೂರ್ಣ ಹೃದಯದಿಂದ ಮತ್ತು ಪೂರ್ಣ ಆತ್ಮದಿಂದ ಕರ್ತನನ್ನು ಪ್ರೀತಿಸಲು ಕರೆಯಲ್ಪಟ್ಟಿದ್ದೇವೆ. ಎರಡನೆಯದಾಗಿ, ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ಇತರರನ್ನೂ ಪ್ರೀತಿಸಬೇಕು.

ನಿಮ್ಮ ಸ್ವಂತ ಮಕ್ಕಳು ನಿಮ್ಮ ವೃದ್ಧಾಪ್ಯದಲ್ಲಿ ನಿಮ್ಮನ್ನು ಹಾರೈಕೆ ಮಾಡುವರು ಎಂದು ನೀವು ಹೇಗೆ ನಿರೀಕ್ಷಿಸುತ್ತೀರೋ, ಹಾಗೆಯೇ ನಿಮ್ಮ ವಯಸ್ಸಾದ ಹೆತ್ತವರನ್ನು ನೀವು ಪ್ರೀತಿಯಿಂದ ಆರೈಕೆ ಮಾಡಬೇಕು ಮತ್ತು ಸನ್ಮಾನಿಸಬೇಕು. ತಂದೆ ಮತ್ತು ತಾಯಿ ದೇವರ ಶ್ರೇಷ್ಠ ಆಶೀರ್ವಾದಗಳಲ್ಲಿ ಸೇರಿದ್ದಾರೆ. ನೀವು ಹುಟ್ಟಿದ ದಿನದಿಂದ ಹಿಡಿದು ಜೀವನದಲ್ಲಿ ಒಂದು ಉತ್ತಮ ಹಂತವನ್ನು ತಲುಪುವವರೆಗೆ, ಅವರು ನಿಮಗಾಗಿ ಎಣಿಕೆಯಿಲ್ಲದ ತ್ಯಾಗಗಳನ್ನು ಮಾಡಿದ್ದಾರೆ. ನಿಮ್ಮ ಅನಾರೋಗ್ಯದ ಸಮಯದಲ್ಲಿ, ಅವರು ತಮ್ಮ ನಿದ್ರೆಯನ್ನು ತ್ಯಾಗ ಮಾಡಿ ನಿಮ್ಮನ್ನು ನೋಡಿಕೊಂಡರು. ಈ ಲೋಕದಲ್ಲಿ ದೇವರ ತರುವಾಯ ತಕ್ಷಣವೇ ಸನ್ಮಾನಕ್ಕೆ ಅರ್ಹರಾದ ಯಾರಾದರೂ ಇದ್ದರೆ, ಅದು ನಮ್ಮ ತಂದೆ ಮತ್ತು ತಾಯಿ.

ಅಪೊಸ್ತಲನಾದ ಪೌಲನು ತಿಮೋಥೇಯನಿಗೆ ಹೀಗೆ ಬರೆದನು: “…ಅವರು ಮೊದಲು ತಮ್ಮ ಮನೆಯವರಿಗೆ ಭಕ್ತಿ ತೋರಿಸುವದಕ್ಕೂ, ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.” (1 ತಿಮೋಥೆ 5:4)

ನಿಮ್ಮ ಹೆತ್ತವರನ್ನು ಸನ್ಮಾನಿಸುವುದು ಎಂದರೆ ಪ್ರತಿ ತಿಂಗಳು ಅವರಿಗೆ ಸ್ವಲ್ಪ ಹಣವನ್ನು ಕಳುಹಿಸುವುದಕ್ಕಿಂತಲೂ ಹೆಚ್ಚಿನದಾಗಿದೆ. ತಮ್ಮ ಇಳಿ ವಯಸ್ಸಿನಲ್ಲಿ, ಅವರು ಪ್ರೀತಿ, ಮಮತೆ ಮತ್ತು ಒಡನಾಟಕ್ಕಾಗಿ ಹಂಬಲಿಸುತ್ತಾರೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಅವರ ಅಗತ್ಯಗಳನ್ನು ವಿಚಾರಿಸುವುದು ಮತ್ತು ಅವರ ಕ್ಷೇಮಕ್ಕಾಗಿ ನಿಜವಾದ ಕಾಳಜಿಯನ್ನು ತೋರಿಸುವುದು ಮಕ್ಕಳ ಜವಾಬ್ದಾರಿಯಾಗಿದೆ.

ಸತ್ಯವೇದವು ಹೇಳುತ್ತದೆ: “ಮಕ್ಕಳೇ, ಎಲ್ಲ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಿರಿ; ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ. ” (ಕೊಲೊಸ್ಸೆ 3:20)

ಕರ್ತನು ಈ ಆಜ್ಞೆಯನ್ನು ವಿಮೋಚನಕಾಂಡದ ಪುಸ್ತಕದಲ್ಲಿ ಇನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾನೆ: “ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಇರುವಿ.” (ವಿಮೋ 20:12)

ಮತ್ತೊಮ್ಮೆ, ದೇವರ ವಾಕ್ಯವು ಘೋಷಿಸುತ್ತದೆ: “‘ತಂದೆತಾಯಿಗಳನ್ನು ಅವಮಾನಪಡಿಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ-ಹೌದು ಅನ್ನಬೇಕು.” (ಧರ್ಮೋ 27:16)

ದೇವರು ನಿನ್ನ ಮುಂದೆ ಆಶೀರ್ವಾದವನ್ನೂ ಶಾಪವನ್ನೂ, ಜೀವವನ್ನೂ ಮರಣವನ್ನೂ ಇಟ್ಟಿದ್ದಾನೆ. ಜೀವವನ್ನು ಆರಿಸಿಕೋ. ಆಶೀರ್ವಾದವನ್ನು ಆರಿಸಿಕೋ. ಪ್ರೀತಿಯ ದೇವರ ಮಗುವೇ, ನೀನು ನಿನ್ನ ತಂದೆ ತಾಯಿಯರನ್ನು ಸನ್ಮಾನಿಸಿ, ಪ್ರೀತಿಸಿ, ಗೌರವಿಸುವಾಗ, ಕರ್ತನು ಖಂಡಿತವಾಗಿಯೂ ನಿನ್ನನ್ನು ದೀರ್ಘಾಯುಷ್ಯದಿಂದ ಮತ್ತು ತನ್ನ ಹೇರಳವಾದ ಕೃಪೆಯಿಂದ ಆಶೀರ್ವದಿಸುವನು.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಿನ್ನ ಜೀವವನ್ನು ನಾಶದಿಂದ ತಪ್ಪಿಸುವವನೂ ಪ್ರೀತಿ ಕೃಪೆಗಳೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸುವವನೂ ಆಗಿದ್ದಾನೆ. ಶ್ರೇಷ್ಟವರಗಳಿಂದ ನಿನ್ನ ಆಶೆಯನ್ನು ಪೂರ್ತಿಗೊಳಿಸುತ್ತಾನೆ; ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರಿಗಿ ಬರಮಾಡುತ್ತಾನೆ.” (ಕೀರ್ತನೆ 103:4–5)

Leave A Comment

Your Comment
All comments are held for moderation.