ಆಗಸ್ಟ್ 16 – ಆತನಿಗೆ ನಿಮ್ಮ ಹೃದಯವನ್ನು ಕೊಡಿರಿ!
“ಕಂದಾ, ನನ್ನ ಕಡೆಗೆ ಮನಸ್ಸು ಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ, ” (ಜ್ಞಾನೋಕ್ತಿ 23:26)
ಕರ್ತನು ಮನುಷ್ಯರಿಗಾಗಿ ಎಲ್ಲವನ್ನೂ ಸೃಷ್ಟಿಸಿದನು. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಮನುಷ್ಯಕುಲಕ್ಕೆ ಆತನು ನೀಡಿದ ದೊಡ್ಡ ಉಡುಗೊರೆಗಳಲ್ಲಿ ಸೇರಿವೆ. ಪರ್ವತಗಳು, ಬೆಟ್ಟಗಳು, ಕಣಿವೆಗಳು, ಮರಗಳು ಮತ್ತು ಸಸ್ಯಗಳೆಲ್ಲವೂ ಆತನ ಪ್ರೀತಿಯ ಉದಾರತೆಯ ಕೊಡುಗೆಗಳಾಗಿವೆ. ಆತನು ತನ್ನ ಕರುಣೆಯಿಂದ, ನಮ್ಮ ಒಳಿತಿಗಾಗಿ ವಿವಿಧ ರೀತಿಯ ಆಹಾರಗಳನ್ನು ಮತ್ತು ಬದಲಾಗುವ ಋತುಗಳನ್ನು ಒದಗಿಸಿದ್ದಾನೆ.
ಭೂಮಿಯ ಮೇಲೆ ಜೀವಿಸಲು ಆತನು ನಮಗೆ ಒಂದು ಅದ್ಭುತವಾದ ಶರೀರವನ್ನು, ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ಸಂಬಂಧ ಬೆಳೆಸಲು ಪ್ರಾಣವನ್ನು, ಮತ್ತು ಪರಲೋಕದೊಂದಿಗೆ ಸಹವಾಸವನ್ನು ಆನಂದಿಸಲು ಆತ್ಮವನ್ನು ಕೊಟ್ಟಿದ್ದಾನೆ.
ಮನುಷ್ಯನು ಪಾಪದಲ್ಲಿ ಬಿದ್ದಾಗ, ದೇವರು ಆ ಪಾಪವನ್ನು ತೊಳೆಯಲು ತನ್ನ ಸ್ವಂತ ರಕ್ತವನ್ನೇ ಕೊಟ್ಟನು. ಆತನು ತನ್ನ ಇಡೀ ಶರೀರವನ್ನು ಶಿಲುಬೆಯ ಮೇಲೆ ಯಜ್ಞವಾಗಿ ಅರ್ಪಿಸಿದನು. ನಮ್ಮ ರೋಗಗಳನ್ನು ಗುಣಪಡಿಸಲು ಆತನು ಸಿದ್ಧನಾಗಿದ್ದನು. ಆತನು ನಮಗೆ ತನ್ನ ಪ್ರೀತಿಯನ್ನು, ತನ್ನ ಸಮಾಧಾನವನ್ನು ಮತ್ತು ತನ್ನ ಸಂತೋಷವನ್ನು ಕೊಟ್ಟನು. ವಾಸ್ತವವಾಗಿ, ಆತನು ತನ್ನನ್ನೇ ಸಂಪೂರ್ಣವಾಗಿ ಕೊಟ್ಟನು. ಆದರೂ, ನಮಗೆ ಎಲ್ಲವನ್ನೂ ಕೊಟ್ಟ ನಂತರ, ಆತನು ಬದಲಿಗೆ ಕೇಳುವುದು ಒಂದೇ ಒಂದು ವಿಷಯ ಅದು ನಮ್ಮ ಹೃದಯ.
ನಾವು ನಮ್ಮ ಪೂರ್ಣ ಹೃದಯವನ್ನು ಆತನಿಗೆ ಒಪ್ಪಿಸಿದಾಗ, ಆತನು ಸಂತೋಷದಿಂದ ಒಳಗೆ ಪ್ರವೇಶಿಸಿ, ಅದನ್ನು ತನ್ನ ಆಲಯವನ್ನಾಗಿ ಮಾರ್ಪಡಿಸುತ್ತಾನೆ ಮತ್ತು ಅದನ್ನು ತನ್ನ ನಿವಾಸವನ್ನಾಗಿ ಮಾಡಿಕೊಳ್ಳುತ್ತಾನೆ. ಆತನು ನಮ್ಮ ದೇವರಾಗುತ್ತಾನೆ, ಮತ್ತು ನಾವು ಆತನ ಜನರಾಗುತ್ತೇವೆ.
ಅನೇಕರು ತಮ್ಮ ತುಟಿಗಳಿಂದ ಮಾತ್ರ ಕರ್ತನನ್ನು ಆರಾಧಿಸುವವರಂತೆ ನಟಿಸುತ್ತಾ, ತಮ್ಮ ಹೃದಯಗಳನ್ನು ದೂರವಿಟ್ಟು ಕೇವಲ ಹೆಸರಿಗೆ ಮಾತ್ರ ಕ್ರೈಸ್ತರಾಗಿ ಉಳಿದಿರುವುದು ಎಷ್ಟು ದುರಂತ! ಯೇಸುವು ದುಃಖದಿಂದ ಹೀಗೆ ಹೇಳಿದನು: “ಈ ಜನರು ಮಾತಿನಿಂದ ನನ್ನನ್ನು ಸಮೀಪಿಸಿ ತುಟಿಯಿಂದ ನನ್ನನ್ನು ಸನ್ಮಾನಿಸುತ್ತಾರೆ. ಮನಸ್ಸನ್ನೋ ದೂರಮಾಡಿಕೊಂಡಿದ್ದಾರೆ.” (ಯೆಶಾ 29:13; ಮತ್ತಾ 15:8 ನ್ನು ಹೋಲಿಸಿ)
ನಿಮ್ಮ ಹೃದಯವನ್ನು ನೀವು ಕರ್ತನಿಗೆ ಕೊಟ್ಟರೆ, ಆತನು ಅದನ್ನು ಶುದ್ಧೀಕರಿಸಿ ಪವಿತ್ರಗೊಳಿಸುತ್ತಾನೆ. ಸತ್ಯವೇದವು ಹೀಗೆ ಘೋಷಿಸುತ್ತದೆ: “ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು.” (ಮತ್ತಾ 5:8)
ಕರ್ತನು ನಿಮ್ಮನ್ನು ಆರೋಗ್ಯ, ಬಲ ಮತ್ತು ಜ್ಞಾನದಿಂದ ಆಶೀರ್ವದಿಸಿರುವುದರಿಂದ, ನಿಮ್ಮ ಆದಾಯದ ದಶಮಾಂಶದಿಂದ ಆತನನ್ನು ಸನ್ಮಾನಿಸುವ ಸೌಭಾಗ್ಯ ಮತ್ತು ಜವಾಬ್ದಾರಿ ನಿಮಗಿದೆ. ನೀವು ಇಷ್ಟಪಟ್ಟು ಮತ್ತು ಸಂತೋಷದಿಂದ ಕೊಟ್ಟಾಗ, ಪರಲೋಕದ ದ್ವಾರಗಳನ್ನು ತೆರೆದು, ನಿಮ್ಮಲ್ಲಿ ಸ್ಥಳ ಹಿಡಿಯಲಾರದಷ್ಟು ಸುವರವನ್ನು ಸುರಿಸುವದಾಗಿ ಕರ್ತನು ವಾಗ್ದಾನ ಮಾಡುತ್ತಾನೆ (ಮಲಾಕಿ 3:10). ನಿಮ್ಮ ಮೇಲೆ ತನ್ನ ಆಶೀರ್ವಾದಗಳನ್ನು ಸಾವಿರಪಟ್ಟು ಹೆಚ್ಚಿಸುವುದಾಗಿಯೂ ಆತನು ವಾಗ್ದಾನ ಮಾಡುತ್ತಾನೆ (ಧರ್ಮ 1:11).
ನಿಮ್ಮ ದಶಮಾಂಶ ಮತ್ತು ಕಾಣಿಕೆಗಳನ್ನು ಮಾತ್ರ ನೀಡಬೇಡಿ – ನಿಮ್ಮ ಸಮಯವನ್ನೂ ಆತನಿಗೆ ಕೊಡಿರಿ. ಪ್ರತಿದಿನ ಆತನು ನಿಮಗೆ ಕೃಪೆಯಿಂದ ನೀಡುವ ಇಪ್ಪತ್ತನಾಲ್ಕು ಗಂಟೆಗಳಲ್ಲಿ, ಆತನೊಂದಿಗಿರಲು ನೀವು ಕನಿಷ್ಠ ಒಂದು ಗಂಟೆಯನ್ನಾದರೂ ಯಾಕೆ ಮೀಸಲಿಡಬಾರದು? ಆತನನ್ನು ಪ್ರೀತಿಸಲು, ಆತನನ್ನು ಸ್ತುತಿಸಲು, ಆತನಿಗೆ ಹಾಡಲು, ಆತನನ್ನು ಮಹಿಮೆಪಡಿಸಲು ಮತ್ತು ನಂಬಿಗಸ್ತಿಕೆಯಿಂದ ಆತನಿಗೆ ಸೇವೆ ಮಾಡಲು ನಿಮ್ಮ ಸಮಯವನ್ನು ಆತನಿಗೆ ಕೊಡಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ “ಕೊಡಿರಿ, ಆಗ ನಿಮಗೂ ಕೊಡುವರು, ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.” ” (ಲೂಕ 6:38)