Appam, Appam - Kannada

ನವೆಂಬರ್ 07 – ರಕೃತಿಯು ದೇವರನ್ನು ಮಹಿಮೆಪಡಿಸುತ್ತದೆ!

“ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.” ಕೀರ್ತನೆ 19:1

ಆಕಾಶವು ಮೌನವಾಗಿ ಕಾಣಿಸಿದರೂ ಮತ್ತು ಈ ಲೋಕದ ಶಬ್ದಗಳನ್ನು ಮಾಡದಿದ್ದರೂ, ಅದು ದೇವರ ಮಹಿಮೆಯ ಬಗ್ಗೆ ನಮ್ಮೊಂದಿಗೆ ಮೌನವಾಗಿ ಮಾತನಾಡುತ್ತದೆ. ಅದು ಆತನ ಕೈ ಕೆಲಸಗಳನ್ನು ನಿರಂತರವಾಗಿ ಪ್ರಕಟಿಸುತ್ತದೆ. “ಹೇಗಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೈವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.” (ರೋಮಾ 1:20).

ಕೆಲವೊಮ್ಮೆ, ಆಕಾಶದಲ್ಲಿರುವ ಮೇಘಗಳು ಕುರಿಮರಿಗಳಂತೆ ಕಾಣಿಸಬಹುದು, ಮತ್ತು ದೊಡ್ಡ ಮೇಘವು ಕುರುಬನಂತೆ ಕಾಣಿಸಬಹುದು. ಕರ್ತನು ಮೇಘಗಳ ಮೂಲಕ ನಮ್ಮೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ, “ನಾನೇ ಒಳ್ಳೆಯ ಕುರುಬನು. ನಿಮಗಾಗಿ ನನ್ನ ಪ್ರಾಣವನ್ನು ಕೊಟ್ಟಿದ್ದೇನೆ, ಮತ್ತು ಪ್ರೀತಿಜಾಗ್ರತೆಯಿಂದ ನಿಮ್ಮನ್ನು ನಡೆಸುವೆನು” ಎಂದು ಹೇಳುತ್ತಿರುವಂತೆ ನಮಗೆ ಭಾಸವಾಗಬಹುದು.

ಆತನು ಆಕಾಶದ ಪಕ್ಷಿಗಳ ಮೂಲಕವೂ ನಮ್ಮೊಂದಿಗೆ ಮಾತನಾಡುತ್ತಾನೆ. ಅವು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ, ಆದರೂ ಕರ್ತನು ಅವುಗಳನ್ನು ಪೋಷಿಸುತ್ತಾನೆ. ಆತನು ಅವುಗಳನ್ನೇ ಪೋಷಿಸುವುದಾದರೆ, ಖಂಡಿತವಾಗಿಯೂ ನಮ್ಮನ್ನು ಪೋಷಿಸುವನು, ಏಕೆಂದರೆ ನಾವು ಅವುಗಳಿಗಿಂತ ಎಷ್ಟೋ ಶ್ರೇಷ್ಠರಲ್ಲವೇ? ಎಂಬುದನ್ನು ಆತನು ನಮಗೆ ನೆನಪಿಸುತ್ತಾನೆ (ಮತ್ತಾ 6:26–27).

ಆತನು ತೋಟದ ಹೂವುಗಳ ಮೂಲಕವೂ ಮಾತನಾಡುತ್ತಾನೆ. ಅವುಗಳನ್ನು ಜಾಗರೂಕತೆಯಿಂದ ನೋಡಿರಿ, ಅವುಗಳ ಸೌಂದರ್ಯದ ಮೂಲಕ ಕರ್ತನ ಧ್ವನಿಯನ್ನು ನೀವು ಕೇಳಬಹುದು. ಸೊಲೊಮೋನನು ಸಹ ತನ್ನ ಸಕಲ ವೈಭವದಲ್ಲಿ ಇವುಗಳಲ್ಲಿ ಒಂದರಂತೆಯೂ ವಸ್ತ್ರ ಧರಿಸಿರಲಿಲ್ಲ ಎಂಬುದನ್ನು ಆತನು ನಮಗೆ ಪ್ರೀತಿಯಿಂದ ನೆನಪಿಸುತ್ತಾನೆ (ಮತ್ತಾ 6:29).

ಸಮುದ್ರದ ದಂಡೆಯನ್ನು ನೋಡಿರಿ. ಅಲೆಗಳು ಗರ್ಜಿಸುತ್ತಾ ದಂಡೆಗೆ ಬಂದು ಅಪ್ಪಳಿಸುತ್ತವೆ. ಅವುಗಳ ಮೂಲಕ ಕರ್ತನು ನಮಗೆ ನೆನಪಿಸುತ್ತಾನೆ, “ನನ್ನ ಮಕ್ಕಳೇ, ನಾನು ಸಮುದ್ರದ ಅಲೆಗಳಿಗೆ ಗಡಿಯನ್ನು ನಿರ್ಣಯಿಸಿ, ‘ನೀವು ಇಲ್ಲಿಯವರೆಗೆ ಬರಬಹುದು, ಆದರೆ ಮುಂದಕ್ಕೆ ಬರಬಾರದು’ ಎಂದು ಆಜ್ಞಾಪಿಸಿದ್ದೇನೆ. ಅದೇ ರೀತಿಯಲ್ಲಿ, ನಿಮ್ಮ ಜೀವನದಲ್ಲಿ ಶ್ರಮೆಯ ಅಲೆಗಳು ಎಷ್ಟೇ ಬಂದರೂ, ಅವುಗಳಿಗೆ ಮಿತಿಗಳಿವೆ. ನಿಮ್ಮ ಶಕ್ತಿಗೆ ಮೀರಿದ ಶೋಧನೆಯನ್ನು ಆತನು ನಿಮಗೆ ಬರಗೊಡಿಸುವದಿಲ್ಲ.”

ದ್ರಾಕ್ಷಾಬಳ್ಳಿಯನ್ನು ನೋಡಿರಿ, ಆಗ ಕರ್ತನ ಧ್ವನಿಯು ನಿಮ್ಮ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ: “ನಾನೇ ಸತ್ಯವಾದ ದ್ರಾಕ್ಷಾಬಳ್ಳಿ, ನನ್ನ ತಂದೆ ತೋಟಗಾರನು” (ಯೋಹಾ 15:1). ಎಂತಹ ಅಮೂಲ್ಯವಾದ ಸಂಬಂಧ! ಆತನು ಪ್ರೀತಿಯಿಂದ, “ನನ್ನ ಮಗನೇ, ನನ್ನ ಮಗಳೇ, ನೀವು ನನ್ನಲ್ಲಿ ನೆಲೆಗೊಂಡಿದ್ದರೆ, ನಿಮ್ಮ ಜೀವನವು ಫಲಪ್ರದವಾಗುತ್ತದೆ. ನೀವು ಹೆಚ್ಚು ಫಲ ಕೊಡುವಿರಿ, ಮತ್ತು ನಿಮ್ಮ ಮೂಲಕ ನನ್ನ ತಂದೆಗೆ ಮಹಿಮೆ ಉಂಟಾಗುವುದು” ಎಂದು ಹೇಳುತ್ತಾನೆ.

ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಿರಿ. ಅವು ಬದಲಾಗುವ ಕಾಲಗಳ ಬಗ್ಗೆ ಮತ್ತು ಯುಗದ ಅಂತ್ಯದ ಬಗ್ಗೆ ನಿಮ್ಮೊಂದಿಗೆ ಮಾತನಾಡುತ್ತವೆ. ಯೇಸು, “ಸಂಜೆ ವೇಳೆಯಲ್ಲಿ ನೀವು- “ಆಕಾಶವು ಕೆಂಪಾಗಿದೆ, ನಿರ್ಮಲ ದಿನ ಬರುವದು ಅನ್ನುತ್ತೀರಿ; ಬೆಳಿಗ್ಗೆ – ಆಕಾಶವು ಮೋಡಮುಚ್ಚಿಕೊಂಡು ಕೆಂಪಾಗಿದೆ, ಈ ಹೊತ್ತು ಗಾಳಿ ಮಳೆ ಅನ್ನುತ್ತೀರಿ ಅಲ್ಲವೇ. ಆಕಾಶದ ಸ್ಥಿತಿಯನ್ನು ನೋಡಿ ಇದು ಹೀಗೆ ಅದು ಹಾಗೆ ಅನ್ನುವದಕ್ಕೆ ಬಲ್ಲಿರಿ; ಆದರೆ ಈ ಕಾಲದ ಸೂಚನೆಗಳನ್ನು ತಿಳುಕೊಳ್ಳಲಾರಿರಿ?” ಎಂದನು (ಮತ್ತಾ 16:2–3).

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನೂ ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಎಲೆ ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ” (ಮತ್ತಾ 24:32).

Leave A Comment

Your Comment
All comments are held for moderation.