ನವೆಂಬರ್ 17 – ಶಕ್ತಿಯಿಂದ ನಡುಕಟ್ಟನ್ನು ಕಟ್ಟಿಕೊಳ್ಳಿರಿ!
“ನನಗೆ ಶೌರ್ಯವೆಂಬ ನಡುಕಟ್ಟನ್ನು ಬಿಗಿಯುವವನೂ ನನ್ನ ಮಾರ್ಗವನ್ನು ಸರಾಗಮಾಡುವವನೂ ಆತನೇ.” ಕೀರ್ತನೆ 18:32
ದೇವರ ಶಕ್ತಿಯಿಂದ ನಡುಕಟ್ಟನ್ನು ಕಟ್ಟಿಕೊಳ್ಳಿರಿ. ಆಗ ಮಾತ್ರ ನೀವು ಕರ್ತನಿಗಾಗಿ ದೊಡ್ಡ ಮತ್ತು ಮಹತ್ಕಾರ್ಯಗಳನ್ನು ಸಾಧಿಸಲು ಶಕ್ತರಾಗುವಿರಿ. ಕಾಲೇಬನ ಜೀವನವು ನಮ್ಮನ್ನು ವಿಸ್ಮಯಗೊಳಿಸುತ್ತದೆ. ತನ್ನ ವೃದ್ಧಾಪ್ಯದಲ್ಲೂ ಅವನು ದೈವಿಕ ಶಕ್ತಿಯನ್ನು ಕಟ್ಟಿಕೊಂಡು ಬೆಟ್ಟದ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡನು. ಅದೇ ರೀತಿಯಲ್ಲಿ, ಗಿದ್ಯೋನನು ತನಗಿದ್ದ ಸ್ವಲ್ಪ ಶಕ್ತಿಯೊಂದಿಗೆ ಯುದ್ಧಕ್ಕೆ ಹೋದನು, ಆದರೆ ಕರ್ತನ ಸಮ್ಮುಖದೊಂದಿಗೆ ಮಿದ್ಯಾನ್ಯರನ್ನು ಜಯಿಸಿದನು. ಇಂತಹ ಉದಾಹರಣೆಗಳು ದೇವರ ಶಕ್ತಿಯಿಂದ ನಡೆಯಲು ನಮಗೆ ಸ್ಫೂರ್ತಿ ನೀಡುತ್ತವೆ.
ದಾವೀದನ ಅನುಭವ ಹೇಗಿತ್ತು? ಯುದ್ಧ ಮಾಡಲು ಮತ್ತು ಕರ್ತನನ್ನು ಆರಾಧಿಸಲು ಎರಡಕ್ಕೂ ಅವನು ಶಕ್ತಿಯನ್ನು ಪಡೆದುಕೊಂಡನು. ಕುರಿಕಾಯುವ ಹುಡುಗನಾಗಿದ್ದಾಗ, ದಾವೀದನು ದೈವಿಕ ಶಕ್ತಿಯಿಂದ ನಡುಕಟ್ಟನ್ನು ಕಟ್ಟಿಕೊಂಡು ತನ್ನ ಕುರಿಗಳ ಮೇಲೆ ಎರಗಿಬಂದ ಕರಡಿಯನ್ನೂ ಸಿಂಹವನ್ನೂ ಹೊಡೆದುರುಳಿಸಿದನು.
ಅವನು ಗೋಲ್ಯಾತನನ್ನು ಜಯಿಸಿದನು ಮತ್ತು ಅನೇಕ ರಾಜರೊಂದಿಗೆ ಯುದ್ಧ ಮಾಡಿ ಅವರ ಮೇಲೆ ಜಯವನ್ನು ಸಾಧಿಸಿದನು. ಅದೇ ಕರ್ತನು ನಿಮ್ಮನ್ನು ತನ್ನ ಶಕ್ತಿಯಿಂದ ತುಂಬಿಸುವನು. ಆತನು ತನ್ನ ವಾಕ್ಯದ ಮೂಲಕವೂ, ತನ್ನ ವರಗಳ ಮೂಲಕವೂ, ತನ್ನ ಶಕ್ತಿಯ ಮೂಲಕವೂ ನಿಮ್ಮನ್ನು ಬಲಪಡಿಸುವನು.
ಕೀರ್ತನೆ 18:32 ರಲ್ಲಿ, ದೇವರು ನನಗೆ ನಡುಕಟ್ಟನ್ನು ಬಿಗಿಯುವನು ಎಂದು ದಾವೀದನು ಸಾರುತ್ತಾನೆ. 39ನೇ ವಚನದಲ್ಲಿ, “ನನಗೆ ಯುದ್ಧಕ್ಕಾಗಿ ಶೌರ್ಯವೆಂಬ ನಡುಕಟ್ಟನ್ನು ಬಿಗಿದಿದ್ದೀ; ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನ ಮಾಡಿದ್ದೀ” ಎಂದು ಬರೆಯುತ್ತಾನೆ. ನಡು ಎಂಬುದು ಒಬ್ಬ ವ್ಯಕ್ತಿಯ ಶಕ್ತಿಯ ನೆಲೆ ಎಂದು ಪರಿಗಣಿಸಲ್ಪಟ್ಟಿತ್ತು.
ಅದಕ್ಕಾಗಿಯೇ ಯೇಸು ತನ್ನ ಶಿಷ್ಯರಿಗೆ ತಮ್ಮ ನಡುಕಟ್ಟನ್ನು ಬಿಗಿದುಕೊಂಡಿರುವಂತೆ ಆಜ್ಞಾಪಿಸಿದನು (ಲೂಕ 12:35). ಅಪೊಸ್ತಲನಾದ ಪೌಲನು ಸತ್ಯದಿಂದ ನಮ್ಮ ನಡುಕಟ್ಟನ್ನು ಬಿಗಿದುಕೊಂಡಿರಬೇಕೆಂದು ನಮಗೆ ಬೋಧಿಸುತ್ತಾನೆ (ಎಫೆಸ 6:14), ಮತ್ತು ಅಪೊಸ್ತಲನಾದ ಪೇತ್ರನು ನಮ್ಮ ಮನಸ್ಸಿನ ನಡುಕಟ್ಟನ್ನು ಬಿಗಿದುಕೊಳ್ಳುವಂತೆ ನಮಗೆ ಬುದ್ಧಿ ಹೇಳುತ್ತಾನೆ (1 ಪೇತ್ರ 1:13).
ಇಸ್ರಾಯೇಲ್ನ ಗಡಿಗಳನ್ನು ವಿಸ್ತರಿಸಲು ಕರ್ತನು ದಾವೀದನನ್ನು ಉಪಯೋಗಿಸಿದನು. ದಾವೀದನ ಜೀವಿತಾವಧಿಯಲ್ಲಿ, ಫಿಲಿಷ್ಟೀಯರೊಂದಿಗೂ ಅಮಾಲೇಕ್ಯರೊಂದಿಗೂ ಆದ ಯುದ್ಧಗಳು ಸೇರಿದಂತೆ ಮಹಾ ಯುದ್ಧಗಳು ಮುಂದುವರಿದವು. ದಾವೀದನು ಹೆಚ್ಚು ಹೆಚ್ಚು ಬಲಗೊಳ್ಳುತ್ತಾ ಹೋದನೆಂದು ಸತ್ಯವೇದವು ತಿಳಿಸುತ್ತದೆ (2 ಸಮು 3:1). ಅವನು ಬಲದಿಂದ ಬಲಕ್ಕೆ ಮುನ್ನಡೆಯುತ್ತಿದ್ದಂತೆ, ಯುದ್ಧಕ್ಕಾಗಿ ದೇವರು ತನ್ನನ್ನು ಬಲಪಡಿಸಿದ್ದಾನೆ ಮತ್ತು ತನ್ನ ಮೇಲೆ ಎದ್ದವರನ್ನು ಸೋಲಿಸಲು ಶಕ್ತಗೊಳಿಸಿದ್ದಾನೆ ಎಂದು ಅವನು ಸಾಕ್ಷಿ ನುಡಿದನು (ಕೀರ್ತನೆ 18:39).
ನೀವು ಯುದ್ಧಭೂಮಿಯಲ್ಲಿ ನಿಂತಿದ್ದೀರಿ. ಲೋಕವೂ, ಶರೀರವೂ, ಸೈತಾನನೂ ನಿಮ್ಮ ವಿರುದ್ಧವಾಗಿ ನಿರಂತರವಾಗಿ ಯುದ್ಧ ಮಾಡುತ್ತವೆ. ನಿಮ್ಮ ಕೊನೆಯುಸಿರಿನವರೆಗೂ ಈ ಹೋರಾಟಗಳು ಮುಂದುವರಿಯುತ್ತವೆ. ಪಾಪವನ್ನು ವಿರೋಧಿಸಲು, ಪಾಪದ ವಿರುದ್ಧದ ಹೋರಾಟದಲ್ಲಿ ರಕ್ತವನ್ನು ಸುರಿಸುವ ಹಂತದವರೆಗೂ ನಿಮಗೆ ಆತ್ಮೀಕ ಶಕ್ತಿಯು ಬೇಕಾಗುತ್ತದೆ. ಪ್ರಿಯ ದೇವರ ಮಕ್ಕಳೇ, ಇಗೋ, ಕರ್ತನು ತನ್ನ ಶಕ್ತಿಯಿಂದ ನಿಮ್ಮನ್ನು ತುಂಬಿಸಿ ನಡೆಸುತ್ತಿದ್ದಾನೆ!
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು. ಕರ್ತನಾದ ಯೆಹೋವನೇ ನನ್ನ ಬಲ; ಆತನು ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕುಮಾಡಿ ನನ್ನ ಉನ್ನತಪ್ರದೇಶಗಳಲ್ಲಿ ನನ್ನನ್ನು ನಡೆಸುತ್ತಾನೆ.” (ಹಬ 3:18–19).