ಅಕ್ಟೋಬರ್ 10 – ಒಂದು ಮಾರ್ಗವಿದೆ!
“ಆ ದಾರಿಯು ಯಾವ ಹದ್ದಿಗೂ ತಿಳಿಯದು. ಗಿಡಗದ ಕಣ್ಣಿಗೂ ಬಿದ್ದಿಲ್ಲ.” (ಯೋಬ 28:7)
ಈ ಮೇಲಿನ ವಾಕ್ಯವು ಅತಿ ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿರುವ ಫಾಲ್ಕನ್ ಹದ್ದಿನ ಕುರಿತು ಮಾತನಾಡುತ್ತದೆ. ಅದರ ಕಾಲುಗಳು ಬಲವಾಗಿವೆ, ಮತ್ತು ಅದರ ರೆಕ್ಕೆಗಳು ಅದು ವೇಗವಾಗಿ ಹಾರಲು ಶಕ್ತಗೊಳಿಸುತ್ತವೆ. ಫಾಲ್ಕನ್ ಹದ್ದುಗಳು ಇತರ ಪಕ್ಷಿಗಳನ್ನೂ ಮತ್ತು ಇಲಿಗಳು ಹಾಗೂ ಮೊಲಗಳಂತಹ ಪ್ರಾಣಿಗಳನ್ನೂ ಬೇಟೆಯಾಡಿ ತಿನ್ನುತ್ತವೆ, ಮತ್ತು ತಮ್ಮ ಮರಿಗಳಿಗೂ ಆಹಾರವನ್ನು ಕೊಂಡೊಯ್ಯುತ್ತವೆ.
ಕೆಲವು ಫಾಲ್ಕನ್ ಹದ್ದುಗಳು ತಮ್ಮ ಗೂಡುಗಳಿಂದ ಅನೇಕ ಮೈಲುಗಳ ದೂರ ಪ್ರಯಾಣಿಸಿ, ಹಿಂತಿರುಗುವಾಗ ಗಮನಾರ್ಹವಾದ ನಿಖರತೆಯೊಂದಿಗೆ ತಮ್ಮ ದಾರಿಯನ್ನು ಕಂಡುಕೊಳ್ಳಬಲ್ಲವು.
ಆದರೂ ಫಾಲ್ಕನ್ ಹದ್ದಿನ ತೀಕ್ಷ್ಣವಾದ ಕಣ್ಣುಗಳಿಗೂ ಕಾಣದ ಒಂದು ಹಾದಿಯ ಕುರಿತು ಯೋಬನು ಮಾತನಾಡುತ್ತಾನೆ. ಭೂಮಿಯ ಮೇಲೆ ಎತ್ತರದಲ್ಲಿ ಹಾರುವ ಪೈಲಟ್ಗಳು ಅದನ್ನು ಕಂಡಿಲ್ಲ. ಬಾಹ್ಯಾಕಾಶ ನೌಕೆಗಳ ಮೂಲಕ ಭೂಮಿಯನ್ನು ಮೀರಿ ಬಾಹ್ಯಾಕಾಶದ ಮಂಡಲಗಳಿಗೆ ಪ್ರಯಾಣಿಸಿದ ಗಗನಯಾತ್ರಿಗಳೂ ಸಹ ಅದನ್ನು ಕಂಡುಹಿಡಿದಿಲ್ಲ.
ಯೋಬನು ಈ ಹಾದಿಯ ಕುರಿತು ಬಹುತೇಕ ಒಂದು ನಿಗೂಢ ಒಗಟಿನಂತೆ ಮಾತನಾಡುತ್ತಾನೆ. ಕರ್ತನ ತನ್ನ ಜನರನ್ನು ಕೊಂಡೊಯ್ಯಲ್ಪಡುವ ಹಾದಿ ಅದೇ ಆಗಿದೆ.
ಪ್ರವಾದಿಯಾದ ಯೆಶಾಯನು ಹೇಳುತ್ತಾನೆ: “ಅಲ್ಲಿ ರಾಜಮಾರ್ಗವಿರುವದು. ಹೌದು ಹೋಗಿ ಬರುವ ದಾರಿ; ಅದು ಪರಿಶುದ್ಧಮಾರ್ಗ ಎಣಿಸಿಕೊಳ್ಳುವದದು.” (ಯೆಶಾ 35:8) ಅದು ನಿಮ್ಮನ್ನು ಪರಲೋಕಕ್ಕೆ ಕೊಂಡೊಯ್ಯುವ ಮಾರ್ಗವಾಗಿದೆ. ಯೇಸು ಹೇಳಿದರು: “ಇಕ್ಕಟ್ಟಾದ ಬಾಗಲಿನಿಂದ ಪ್ರವೇಶಿಸಿರಿ.” (ಮತ್ತಾ 7:13)
ನಾಶಕ್ಕೆ ಹೋಗುವ ಬಾಗಲು ದೊಡ್ಡದ, ದಾರಿ ಅಗಲವು; ಅದರಲ್ಲಿ ಹೋಗುವವರು ಬಹುಜನ. ನಿತ್ಯ ಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ. (ಮತ್ತಾ 7:13–14).
ಬಹುಶಃ ಅಗ್ನಿ ರಥವೂ ಅಗ್ನಿ ಕುದುರೆಗಳೂ ಎಲೀಷನಿಂದ ಎಲಿಯನನ್ನು ಬೇರ್ಪಡಿಸಿದಾಗ ಮತ್ತು ಆತನು ಸುಂಟರಗಾಳಿಯಿಂದ ಮೇಲೆ ಕೊಂಡೊಯ್ಯಲ್ಪಟ್ಟಾಗ ಆತನು ಈ ಪರಲೋಕದ ಮಾರ್ಗದಲ್ಲೇ ಪ್ರಯಾಣಿಸಿರಬಹುದು. ಹನೋಕನು ಮರಣವನ್ನು ಕಾಣದೆ ದೇವರಿಂದ ಕೊಂಡೊಯ್ಯಲ್ಪಟ್ಟಾಗ ಆತನೂ ಸಹ ಈ ಮಾರ್ಗದಲ್ಲೇ ಪ್ರಯಾಣಿಸಿರಬಹುದು. ಮತ್ತು ಯೇಸು ಕ್ರಿಸ್ತನಿಗೆ ಈ ಭೂಮಿಯನ್ನು ಬಿಟ್ಟುಹೋಗುವ ಸಮಯ ಬಂದಾಗ, ಮೇಘಗಳು ಆತನನ್ನು ಆವರಿಸಿಕೊಂಡವು. ಆತನು ಈ ಪರಲೋಕದ ಮಾರ್ಗದ ಮೂಲಕ ಮೇಲಕ್ಕೆ ಕೊಂಡೊಯ್ಯಲ್ಪಟ್ಟನು ಮತ್ತು ಈಗ ತಂದೆಯ ಬಲಭಾಗದಲ್ಲಿ ಆಸೀನನಾಗಿದ್ದಾನೆ.
ತುತ್ತೂರಿಯ ದ್ವನಿಯನ್ನು ಕೇಳುವಾಗ, ನಾವೂ ಸಹ ಆ ಮಾರ್ಗದ ಮೂಲಕ ಮೇಲಕ್ಕೆ ಕೊಂಡೊಯ್ಯಲ್ಪಡುವೆವು! ಆ ದಿನದಲ್ಲಿ, ಜಗತ್ತು ನಮ್ಮನ್ನು ನೋಡಿ ಆಶ್ಚರ್ಯಪಡುತ್ತದೆ: “ಮೇಘದೋಪಾದಿಯಲ್ಲಿಯೂ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆಯೂ ಹಾರಿಬರುತ್ತಿರುವ ಇವರು ಯಾರು?” (ಯೆಶಾ 60:8) ಎಂತಹ ಮಹಿಮೆಯ ದಿನವಾಗಿರಲಿದೆ ಅದು!
ಅಮಿನಾದಾಬನ ರಥದಂತೆ ನಾನು ಹಾರಿಹೋಗುವೆನು, ನನ್ನ ಪ್ರಿಯನಾದ ಯೇಸುವಿನ ಮೇಲೆ ಆತುಕೊಂಡು, ಎಂದು ನಾವು ಸಂತೋಷದಿಂದಲೂ ಉತ್ಸಾಹದಿಂದಲೂ ಹಾಡೋಣ!
ಈ ಭೂಮಿಯ ಮೇಲೆ ನಮ್ಮ ಸಮಯವು ಕಡಿಮೆ. ಅದು ನೆರಳಿನಂತೆ ಕಳೆದುಹೋಗುತ್ತದೆ (ಕೀರ್ತನೆ 144:4). ಅದು ಹಬೆಯಂತೆ ಮಾಯವಾಗುತ್ತದೆ (ಯಾಕೋ 4:14). ಅದು ನಿಟ್ಟುರಿರಿನಂತೆ ತೀರಿಹೋಗುವವು (ಕೀರ್ತನೆ 90:9).
ಉದಯದಲ್ಲಿ ಬೆಳೆದು ಹೂಬಿಟ್ಟು ಸಂಜೆಯಲ್ಲಿ ಕೊಯ್ಯಲ್ಪಟ್ಟು ಒಣಗಿಹೋಗುತ್ತದೆ (ಕೀರ್ತನೆ 90:6). ಆದರೆ ನಮ್ಮ ಜೀವನ ಇಲ್ಲಿಗೆ ಮುಗಿಯುವುದಿಲ್ಲ. ನಾವು ಕರ್ತನ ಮನೆಯಲ್ಲಿ ಸದಾಕಾಲವೂ ವಾಸಿಸುವೆವು.
ಒಂದು ಮಾರ್ಗವಿದೆ—ಈ ಪ್ರಪಂಚದ ಕಣ್ಣುಗಳಿಗೆ ಕಾಣದ ಮಾರ್ಗ. ಅದು ನಮ್ಮ ನಿತ್ಯ ನಿವಾಸಕ್ಕೆ ಹೋಗುವ ಮಾರ್ಗವಾಗಿದೆ. ನಮ್ಮ ಕಣ್ಣುಗಳನ್ನು ಯೇಸುವಿನ ಮೇಲೆಯೇ ಸ್ಥಿರವಾಗಿಟ್ಟುಕೊಂಡು, ಆತನು ನಮ್ಮನ್ನು ತನ್ನ ಬಳಿಗೆ ಸೇರಿಸಿಕೊಳ್ಳಲು ಬರುವ ದಿನಕ್ಕಾಗಿ ಸಂತೋಷದಿಂದ ಕಾಯೋಣ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವೂ ಸಹ ಇರಬೇಕು.” (ಯೋಹಾ 14:3)