Appam, Appam - Kannada

ನವೆಂಬರ್ 23 – ದೇವರ ಭಯ ಆಯಸ್ಸನ್ನು ಹೆಚ್ಚಿಸುತ್ತದೆ!

“ಯೆಹೋವನಿಗೆ ಭಯಪಡುವವ ದಿನಗಳಿಗೆ ವೃದ್ಧಿ” ಜ್ಞಾನೋಕ್ತಿ 10:27

ಇಂದು ನಾವು ಪುಸ್ತಕದ ಅಂಗಡಿಗೆ ಹೋದಾಗ, ಅತ್ಯಂತ ಆಕರ್ಷಕವಾದ ಶೀರ್ಷಿಕೆಗಳನ್ನು ಹೊಂದಿರುವ ವಿವಿಧ ರೀತಿಯ ಪುಸ್ತಕಗಳನ್ನು ಕಾಣುತ್ತೇವೆ. ಇದು ಬರವಣಿಗೆಯ ಕಾಲವಾಗಿದೆ, ಮಾನವನ ಜ್ಞಾನವು ವ್ಯಾಪಕವಾಗಿ ವ್ಯಕ್ತವಾಗುವ ಕಾಲವಾಗಿದೆ. ಜನರು ತಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುವ ಅನೇಕ ಪುಸ್ತಕಗಳು ಬರೆಯಲ್ಪಟ್ಟಿವೆ. ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ, ರೋಗವಿಲ್ಲದೆ ಬದುಕುವುದು ಹೇಗೆ, ಮತ್ತು ವೃದ್ಧಾಪ್ಯದಲ್ಲೂ ಯೌವನಸ್ಥರಾಗಿ ಕಾಣುವುದು ಹೇಗೆ ಎಂಬುದನ್ನು ವಿವರಿಸುವ ಪುಸ್ತಕಗಳಿವೆ.

ಪುಸ್ತಕದ ಅಂಗಡಿಯಲ್ಲಿದ್ದ ಒಂದು ಪುಸ್ತಕವು ನನ್ನ ಗಮನವನ್ನು ಸೆಳೆಯಿತು. ಅದರ ಶೀರ್ಷಿಕೆ ‘ನೂರು ವರ್ಷ ಬದುಕುವುದು ಹೇಗೆ’ ಎಂದಿತ್ತು. ನಾನು ಅದನ್ನು ಕುತೂಹಲದಿಂದ ತಿರುವಿಹಾಕಿ, ಅದರ ಲೇಖಕರು ಇನ್ನೂ ಬದುಕಿದ್ದಾರೆಯೇ ಎಂದು ಪುಸ್ತಕ ಮಾರಾಟಗಾರನನ್ನು ಕೇಳಿದೆ. ಅದಕ್ಕೆ ಆತನು, “ಇಲ್ಲ, ಅವರು ಸತ್ತುಹೋಗಿದ್ದಾರೆ. ಅವರಿಗೆ ಅರವತ್ತು ವರ್ಷ ಕೂಡ ತುಂಬಿರಲಿಲ್ಲ!” ಎಂದು ಉತ್ತರಿಸಿದನು. ನೂರು ವರ್ಷ ಬದುಕುವುದು ಹೇಗೆ ಎಂದು ಪುಸ್ತಕ ಬರೆದವನೇ ಅರವತ್ತು ವರ್ಷಕ್ಕಿಂತ ಹೆಚ್ಚು ಬದುಕಿರಲಿಲ್ಲ ಎಂದಾದರೆ, ಅವನ ಬರಹವನ್ನು ಯಾರಾದರೂ ಸುಲಭವಾಗಿ ಹೇಗೆ ಒಪ್ಪಿಕೊಳ್ಳಲು ಸಾಧ್ಯ? ನಮ್ಮ ಹಳ್ಳಿಗಳಲ್ಲಿ, ಬೋಳು ತಲೆಯವನು ತಲೆಗೂದಲು ಬೆಳೆಯುವ ಎಣ್ಣೆಯನ್ನು ಮಾರುತ್ತಾನೆ ಎಂಬ ನಾಣ್ಣುಡಿಯಿದೆ. ಸತ್ಯವೇದವು ಅಂತಹವರನ್ನು “ಯಾವುದಕ್ಕೂ ಪ್ರಯೋಜನವಿಲ್ಲದ ವೈದ್ಯರು” ಎಂದು ವರ್ಣಿಸುತ್ತದೆ.

ಒಬ್ಬ ವ್ಯಕ್ತಿಯ ಆಯಸ್ಸನ್ನು ದೀರ್ಘಗೊಳಿಸುವ ಮಾರ್ಗವನ್ನು ಸತ್ಯವೇದವು ಸ್ಪಷ್ಟವಾಗಿ ಮತ್ತು ನಿರ್ದಿಷ್ಟವಾಗಿ ಪ್ರಕಟಿಸುತ್ತದೆ. ಆ ಮಾರ್ಗ ಯಾವುದು? “ಯೆಹೋವನಿಗೆ ಭಯಪಡುವವ ದಿನಗಳಿಗೆ ವೃದ್ಧಿ” (ಜ್ಞಾನೋ 10:27). ಕರ್ತನಾದ ಯೆಹೋವನು ಮರಣಕ್ಕೆ ತಪ್ಪಿಸ ಶಕ್ತನಾಗಿದ್ದಾನೆ (ಕೀರ್ತನೆ 68:20).

ಕರ್ತನ ಮಾರ್ಗಗಳನ್ನು ಬಲ್ಲ ದೈವಿಕ ಭಕ್ತನಾದ ಹನೋಕನು, ಮರಣವನ್ನು ಅನುಭವಿಸದೆ ಮೇಲಕ್ಕೆ ತೆಗೆದುಕೊಳ್ಳಲ್ಪಟ್ಟನು. ಭೂಮಿಯ ಮೇಲೆ ಅವನಿಗೆ ಸಮಾಧಿಯಿಲ್ಲ. “ಮರಣವೇ, ನಿನ್ನ ಮುಳ್ಳು ಎಲ್ಲಿ? ಪಾತಾಳವೇ, ನಿನ್ನ ಜಯ ಎಲ್ಲಿ?” ಎಂದು ವಿಜಯಶಾಲಿಯಾಗಿ ಸಾರುತ್ತಾ, ಮರಣದಿಂದ ಪಾರಾಗಿ ಜೀವದೊಳಗೆ ಪ್ರವೇಶಿಸಿದವನಿಗೆ ಅವನು ಒಂದು ಗಮನಾರ್ಹ ಉದಾಹರಣೆಯಾಗಿ ನಿಂತಿದ್ದಾನೆ.

ನಮ್ಮ ದೇಶದಲ್ಲಿ, ಅನೇಕ ಯೋಗಿಗಳೂ ಸನ್ಯಾಸಿಗಳೂ ಮರಣದಿಂದ ಪಾರಾಗುವ ಮಾರ್ಗಗಳು ತಮಗೆ ತಿಳಿದಿವೆ ಎಂದು ಸುಳ್ಳಾಗಿ ಹೇಳಿಕೊಳ್ಳುತ್ತಾರೆ. ತಮ್ಮ ಪ್ರಾಣವು ದೇಹದಿಂದ ಹಲವಾರು ದಿನಗಳವರೆಗೆ ಹೊರಟುಹೋಗಿ ಮತ್ತೆ ವಾಪಸ್ ಬರುತ್ತದೆ ಎಂದು ಕೆಲವರು ಇತರರಿಗೆ ಸವಾಲು ಕೂಡ ಹಾಕಿದ್ದಾರೆ. ಆದರೆ ಅವರ ದೇಹದಿಂದ ಹೊರಟುಹೋದ ಪ್ರಾಣವು ಎಂದಿಗೂ ವಾಪಸ್ ಬಂದಿಲ್ಲ.

ಅವರ ಶಿಷ್ಯರು ಅವರು ಮತ್ತೆ ಬದುಕುವರು ಎಂಬ ಆಸೆಯಿಂದ ಆ ಶವಗಳನ್ನು ಹಲವು ತಿಂಗಳುಗಳವರೆಗೆ ಇಟ್ಟುಕೊಳ್ಳುತ್ತಾರೆ. ಕೊನೆಗೆ, ಕೊಳೆತು ನಾರುವ ಶವಗಳನ್ನು ತ್ಯಜಿಸಿಬಿಡುತ್ತಾರೆ. ಆದರೆ ಹನೋಕನು ಶಾರೀರಿಕ ಮರಣದ ಮೇಲೂ, ಆತ್ಮೀಕ ಮರಣದ ಮೇಲೂ ಮತ್ತು ನಿತ್ಯ ಮರಣದ ಮೇಲೂ ಜಯವನ್ನು ಸಾಧಿಸಿ ತೋರಿಸಿದನು.

ಪ್ರಿಯ ದೇವರ ಮಕ್ಕಳೇ, ಈ ಭೂಮಿಯ ಮೇಲೆ ನಿಮ್ಮ ಆಯುಸ್ಸು ದೀರ್ಘವಾಗುವಂತೆ ದೇವರಲ್ಲಿ ಭಯಭಕ್ತಿಯಿಂದ ಜೀವಿಸಿರಿ. ಹಾಗೆಯೇ ನಿಮ್ಮ ತಂದೆತಾಯಿಯರನ್ನು ಗೌರವಿಸಿರಿ. ಪಾಪವನ್ನು ದೂರಮಾಡಿ ಕರ್ತನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ನಡೆಯಿರಿ. ಆಸಕ್ತಿಯುಳ್ಳ ಪ್ರಾರ್ಥನೆಯು ಆಯಸ್ಸನ್ನು ವಿಸ್ತರಿಸಲು ಸಹ ಕಾರಣವಾಗುತ್ತದೆ. ಅರಸನಾದ ಹಿಜ್ಕೀಯನು ತೀವ್ರವಾಗಿ ಪ್ರಾರ್ಥಿಸಿದಾಗ ದೇವರು ಅವನ ಆಯುಸ್ಸಿಗೆ ಹದಿನೈದು ವರ್ಷಗಳನ್ನು ಸೇರಿಸಲಿಲ್ಲವೇ?

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:

“ದೀರ್ಘಾಯುಷ್ಯವನ್ನು ಅನುಗ್ರಹಿಸಿ ಅವನನ್ನು ತೃಪ್ತಿಪಡಿಸುವೆನು; ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು” (ಕೀರ್ತನೆ 91:16).

Leave A Comment

Your Comment
All comments are held for moderation.